

IPS officer suicide case: ಐಪಿಎಸ್ ಅಧಿಕಾರಿ ಪೂರಣ್ ಕುಮಾರ್ ಅವರ ಆತ್ಮಹ್ಯತ್ಯೆ ಪ್ರಕರಣದಲ್ಲಿ ಕಿರುಕುಳ ನೀಡಿದ ಆರೋಪದಡಿ ಹರಿಯಾಣದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನರೇಂದ್ರ ಬಿಜಾರ್ನಿಯಾ ಅವರನ್ನು ಹುದ್ದೆಯಿಂದ ಕೆಳಗಿಳಿಸಿದ್ದು, ಪ್ರಸ್ತುತ ರೋಹ್ಟಕ್‌ನ ಎಸ್‌ಪಿಯಾಗಿ ಸುರೀಂದರ್ ಸಿಂಗ್ ಭೋರಿಯಾ ಅವರನ್ನು ನೇಮಿಸಲಾಗಿದೆ ಎಂದು ವರದಿಯಾಗಿದೆ.
ಕುಮಾರ್ ಅವರ ಪತ್ನಿ ಐಐಎಸ್ ಅಧಿಕಾರಿ ಅಮ್ನೀತ್ ಪೂರಣ್ ಕುಮಾರ್ ಅವರು ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್, ರೋಹ್ಟಕ್ ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಕಿರುಕುಳ ಮತ್ತು ಆತ್ಮಹತ್ಯೆ ಪ್ರಚೋದನೆ ನೀಡಿದ್ದಾರೆ ಎಂದು ಆರೋಪಿಸಿ ದೂರು ದಾಖಲಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಬೇಕು. ಹಾಗೆಯೇ ಅವರ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. ಈ ದೂರಿನ ಮೇರೆಗೆ 13 ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಆದಾಗ್ಯೂ, ಹರಿಯಾಣ ಡಿಜಿಪಿ ಶತ್ರುಜೀತ್ ಕಪೂರ್ ಅವರನ್ನು ಕೆಲಸದಿಂದ ವಜಾಗೊಳಿಸುವವರೆಗೆ ಮರಣೋತ್ತರ ಪರೀಕ್ಷೆ ನಡೆಸುವುದಿಲ್ಲ ಎಂದು 31 ಸದಸ್ಯರ ಸಮಿತಿ ಘೋಷಿಸಿದೆ. ಮರಣ ಹೊಂದಿದ ಐಪಿಎಸ್ ಅಧಿಕಾರಿಗಳಿಗೆ ತಕ್ಷಣ ನ್ಯಾಯ ಒದಗಿಸಬೇಕು ಹಾಗೆಯೇ, ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಚಂಡೀಗಢದ ಸೆಕ್ಟರ್ 20 ಗುರುದ್ವಾರದಲ್ಲಿ ಮಹಾ ಪಂಚಾಯತ್‌ಗೆ ಸಮಿತಿ ಕರೆ ನೀಡಿದ್ದಾರೆ.
ಪೂರಣ್ ಕುಮಾರ್ ಸಾವು ಹಿರಿಯ ದಲಿತ ಅಧಿಕಾರಿಗಳು ಸಹ ಸಾಮಾಜಿಕ ಸಮಾನತೆಯಿಂದ ವಂಚಿತರಾಗುವುದನ್ನು ನೆನಪಿಸುತ್ತದೆ. ಹಾಗೆಯೇ ಪೂರಣ್ ಅವರ ದೇಶಭಕ್ತಿ ಮತ್ತು ಬದ್ಧತೆಯು ನಮ್ಮ ಹಿರಿಯರ ತ್ಯಾಗ ಮತ್ತು ಸಮರ್ಪಣೆ, ದೇಶಕ್ಕೆ ಸಲ್ಲಿಸುವ ನಿಸ್ವಾರ್ಥ ಸೇವೆಯನ್ನು ನೆನಪಿಸುತ್ತದೆ ಎಂದು ಸೋನಿಯಾ ಗಾಂಧಿ ಅಮ್ನೀತ್ ಪೂರಣ್ಗೆ ಪತ್ರ ಬರೆದಿದ್ದಾರೆ.
ಈ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಪಿಂದರ್ ಸಿಂಗ್ ಹೂಡಾ, ರಣದೀಪ್ ಸುರ್ಜೇವಾಲಾ ಮತ್ತು ರಾಹುಲ್ ಗಾಂಧಿ ಸೇರಿದಂತೆ ಇನ್ನಿತರ ನಾಯಕರು ತಕ್ಷಣವೇ ನ್ಯಾಯ ಸಿಗಬೇಕೆಂದು ಕರೆ ನೀಡಿದ್ದಾರೆ. ಇನ್ನು ಮುಖ್ಯಮಂತ್ರಿ ನಿವಾಸದ ಹೊರಗೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿದ್ದು, ಡಿಜಿಪಿ, ಎಸ್‌ಎಸ್‌ಪಿ ಮತ್ತು ಇತರ ಹಿರಿಯ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.(ಏಜೆನ್ಸೀಸ್)