

ಚನ್ನಪಟ್ಟಣ : ವಿದ್ಯಾರ್ಥಿಗಳು ಗ್ರಾಹಕರ ಹಕ್ಕುಗಳ ಬಗ್ಗೆ ಅರಿತು ಕುಟುಂಬದವರು ಹಾಗೂ ಸಮಾಜಕ್ಕೆ ತಿಳಿಸಿಕೊಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಹರೂರು ರಾಜಣ್ಣ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಭಾರತೀಯ ಮಾನಕ ಬ್ಯೂರೋ, ಅಖಿಲ ಭಾರತ ಗ್ರಾಹಕರ ಕಲ್ಯಾಣ ಪರಿಷತ್, ಕ್ರೆಡಿಟ್ ಐ ಸಂಸ್ಥೆ ಹಾಗೂ ಸರ್ವಸ್ವ ಗ್ರಾಮೀಣ ಸೇವಾ ಟ್ರಸ್ಟ್ ವತಿಯಿಂದ ಬುಧವಾರ ಆಯೋಜಿಸಿದ್ದ ಗ್ರಾಹಕರ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗ್ರಾಹಕರಿಗೆ ತಮ್ಮ ಹಕ್ಕು ಮತ್ತು ಕರ್ತವ್ಯಗಳ ಅರಿವಿದ್ದರೆ ಯಾರು ಕೂಡ ಮೋಸ ಮಾಡಲು ಸಾಧ್ಯವಿಲ್ಲ. ರೈತಾಪಿ ವರ್ಗವನ್ನು ವರ್ತಕರು ಯಮಾರಿಸುವ ಕಾರ್ಯ ನಡೆಯುತ್ತಿದೆ. ಇದನ್ನು ತಡೆಗಟ್ಟಬೇಕಾದರೆ ವಿದ್ಯಾರ್ಥಿಗಳು ಗ್ರಾಹಕರ ಕಾನೂನು ಅಭ್ಯಸಿಸಿ, ಇತರರಿಗೂ ತಿಳಿಸಿಕೊಡಬೇಕಿದೆ ಎಂದರು.
ಭಾರತೀಯ ಮಾನಕ ಬ್ಯೂರೋ ಮುಖ್ಯಸ್ಥ ಅಮಿತ್‌ರಾಯ್, ಸಂಪನ್ಮೂಲ ವ್ಯಕ್ತಿಗಳಾದ ನಾಗವಲ್ಲಿ ವಿಶೇಷ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ. ವಿ. ವೆಂಕಟೇಶ್, ಸಾಹಿತಿ ವಿಜಯ್ ರಾಂಪುರ, ಸರ್ವಸ್ವ ಟ್ರಸ್ಟ್ ಸಂಯೋಜಕಿ ಪ್ರೇಮಾ, ಹಿರಿಯ ಜಾನಪದ ಗಾಯಕ ಚೌ.ಪು. ಸ್ವಾಮಿ, ಸ್ವರಾಜ್ ಸಂಘಟನೆಯ ಸುಕನ್ಯಾ ಮುಂತಾದವರು ಇದ್ದರು.
ಗ್ರಾಹಕ ಮೂರ್ಖನಾಗಿರುವ ಕಾರಣ ವರ್ತಕನಿಗೆ ಲಾಭ : ಗ್ರಾಹಕರ ಕಲ್ಯಾಣ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ವರ್ಷ ಮಾತನಾಡಿ, ಅವಶ್ಯಕತೆಗೆ ತಕ್ಕ ವಸ್ತುಗಳನ್ನು ಪಡೆದುಕೊಳ್ಳಲು ಗ್ರಾಹಕರು ವಿಫಲರಾಗುತ್ತಿದ್ದಾರೆ. ನೀಡುವ ಹಣಕ್ಕೂ, ಖರೀದಿಸುವ ವಸ್ತುವಿಗೂ ಸಂಬಂಧವೇ ಇರುವುದಿಲ್ಲ. ಗ್ರಾಹಕರಿಗೆ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಸರ್ಕಾರ ಹಲವು ಕಾಯ್ದೆಗಳನ್ನು ರೂಪಿಸಿದೆ. ಈ ಕಾಯ್ದೆಗಳ ಬಗ್ಗೆ ಜನರಲ್ಲಿ ಮಾಹಿತಿ ಕೊರತೆಯಿದೆ. ಗ್ರಾಹಕ ಮೂರ್ಖನಾಗಿರುವ ಕಾರಣ ಮಾರಾಟಗಾರ ಲಾಭ ಪಡೆಯುತ್ತಿದ್ದಾನೆ ಎಂದರು.
ಗ್ರಾಹಕರ ರಕ್ಷಣೆಗೆ ಕಾಯ್ದೆಗಳು ಜಾರಿ : ವಕೀಲರ ಸಂಘದ ಅಧ್ಯಕ್ಷ ಟಿ.ವಿ,ಗಿರೀಶ್ ಮಾತನಾಡಿ, ಕೊಳ್ಳುವವನೇ ಒಡೆಯ. ಆದರೆ, ಈ ಬಗ್ಗೆ ಸಾರ್ವಜನಿಕರಿಗೆ ಅರಿವಿಲ್ಲದ ಕಾರಣದಿಂದಾಗಿ ಬಹಳ ಹಿಂದಿನಿಂದಲೂ ಗ್ರಾಹಕನನ್ನು ಸುಲಿಯುವ ಕೆಲಸವಾಗುತ್ತಿತ್ತು. ಇದನ್ನು ತಡೆಯಲು 1986ರಲ್ಲಿ ಗ್ರಾಹಕರ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅದಿನಿಂದ ಇಲ್ಲಿಯವರೆಗೆ ಲಕ್ಷಾಂತರ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಗ್ರಾಹಕರಿಗೆ ಎಲ್ಲ ಹಕ್ಕುಗಳಿದ್ದು, ಇವುಗಳ ಬಗ್ಗೆ ಜಾಗೃತಿ ಮೂಡುವ ಅವಶ್ಯಕತೆಯಿದೆ ಎಂದು ತಿಳಿಸಿದರು.