ರೆಟ್ರೋ ಶೈಲಿಯಲ್ಲಿ ಹರ್ಷಿಕಾ ಮಿಂಚು : ‘ನೀ ಬಂದು ನಿಂತಾಗ’ ಹಾಡಿಗೆ ರೀಲ್ಸ್ ಮಾಡಿ, ಬೇಬಿ ಬಂಪ್ ಪ್ರದರ್ಶಿಸಿದ ನಟಿ

ಹರ್ಷಿಕಾ ಪೂಣಚ್ಚ
ಹರ್ಷಿಕಾ ಪೂಣಚ್ಚ
Published on

ಪ್ರಮುಖ ಮುಖ್ಯಾಂಶಗಳು

  • ಎರಡನೇ ಮಗುವಿನ ನಿರೀಕ್ಷೆಯಲ್ಲಿ ಹರ್ಷಿಕಾ-ಭುವನ್ ದಂಪತಿ
  • 70ರ ದಶಕದ ರೆಟ್ರೋ ಶೈಲಿಯಲ್ಲಿ ಫೋಟೋಶೂಟ್ ಮಾಡಿಸಿ ಬೇಬಿಬಂಪ್​ ಪ್ರದರ್ಶನ
  • ಡಾ.ರಾಜ್-ಆರತಿ ಅಭಿನಯದ ಕಸ್ತೂರಿ ನಿವಾಸ ಚಿತ್ರದ ನೀ ಬಂದು ನಿಂತಾಗ ಹಾಡಿಗೆ ರೀಲ್ಸ್​
ಬೆಂಗಳೂರು: ಸ್ಯಾಂಡಲ್‌ವುಡ್ ತಾರಾ ದಂಪತಿ ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಎರಡನೇ ಬಾರಿಗೆ ತಾಯಿಯಾಗುತ್ತಿರುವ ಬಗ್ಗೆ ಹರ್ಷಿಕಾ ಪೂಣಚ್ಚ ಕಳೆದ ಮಾರ್ಚ್‌ನಲ್ಲಿ ಪ್ಯಾರಿಸ್‌ನ ಐಫೆಲ್ ಟವರ್ ಮುಂದೆ ನಿಂತು ಹೇಳಿಕೊಂಡು ಸಂಭ್ರಮಿಸಿದ್ದರು. ಇದೇ ಖುಷಿಯಲ್ಲಿ ನಟಿ ಇದೀಗ ವಿಭಿನ್ನವಾಗಿ, 70ರ ದಶಕದ ರೆಟ್ರೋ ಶೈಲಿಯಲ್ಲಿ ಫೋಟೋಶೂಟ್ ಮಾಡಿಸುವ ಮೂಲಕ ಬೇಬಿ ಬಂಪ್ ಪ್ರದರ್ಶಿಸಿದ್ದಾರೆ. ಇನ್ನು ಡಾ. ರಾಜಕುಮಾರ್ ಮತ್ತು ಆರತಿ ಅಭಿನಯದ ‘ಕಸ್ತೂರಿ ನಿವಾಸ’ ಚಿತ್ರದ ಜನಪ್ರಿಯ ‘ನೀ ಬಂದು ನಿಂತಾಗ’ ಹಾಡಿಗೆ ಕಲಾತ್ಮಕವಾಗಿ ರೀಲ್ಸ್ ಮಾಡಿದ್ದಾರೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಇನ್ನು ಹರ್ಷಿಕಾ ಸುಂದರ ಸೀರೆ ಧರಿಸಿದ್ದು, ಖ್ಯಾತ ನಟಿ ಮರ್ಲಿನ್ ಮನ್ರೋ ಥರಹದ ಹೇರ್‌ಸ್ಟೈಲ್‌ನಲ್ಲಿ ನಗೆ ಬೀರಿದ್ದಾರೆ. ‘70ರ ದಶಕದ ಸಿನಿಮಾ ಲೋಕಕ್ಕೊಂದು ಪಯಣ. ‘ನೀ ಬಂದು ನಿಂತಾಗ’ ಡಾ.ರಾಜ್ ಸರ್ ಮತ್ತು ಅರತಿ ಅವರ ಸುಂದರ ಗೀತೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಪ್ರಯತ್ನ ಮಾಡಿದ್ದೇನೆ. ಮರ್ಲಿನ್ ಮನ್ರೋ ಹೇರ್ ಸ್ಟೈಲ್, ಮೇಕಪ್ ಎಲ್ಲವೂ ರ್ಪೆಕ್ಟ್ ಆಗಿ ಬಂದಿದೆ. ಈ ಕಾನ್ಸೆಪ್ಟ್ ಕೇಳಿದಾಗಲೇ ಮನಸ್ಸಿಗೆ ತುಂಬಾ ಇಷ್ಟ ಆಗಿತ್ತು. ಈಗ ಈ ವಿಡಿಯೋ ನೋಡಿ ಇನ್ನೂ ಖುಷಿ ಹೆಚ್ಚಿದೆ. ಅಮ್ಮ ಆಗೋ ಈ ಸುಂದರ ಘಳಿಗೆಯನ್ನು ಇಷ್ಟು ಸುಂದರವಾಗಿ ನಮ್ಮ ತಂಡ ಸೆರೆಹಿಡಿದಿದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ. ಹರ್ಷಿಕಾ ಪೂಣಚ್ಚ ಮತ್ತು ಭುವನ್ ಪೊನ್ನಣ್ಣ ತಾರಾ ಜೋಡಿಯು 2023ರ ಆಗಸ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಈ ಜೋಡಿಗೆ ‘ತ್ರಿದೇವಿ ಪೊನ್ನಕ್ಕ’ ಎಂಬ ಪುತ್ರಿ ಇದ್ದಾಳೆ. ಇದೀಗ ಜೋಡಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದೆ.

ಭುವನ್ ಬಿಜಿ, ಹರ್ಷಿಕಾ ವಿಶ್ರಾಂತಿ

ಭುವನ್ ಪೊನ್ನಣ್ಣ ಎರಡನೇ ಬಾರಿಗೆ ತಂದೆಯಾಗುವ ಖುಷಿಯ ಮಧ್ಯೆಯೇ ಸ್ಯಾಂಡಲ್‌ವುಡ್‌ನಲ್ಲಿ ಬಿಜಿಯಾಗಿದ್ದಾರೆ. ಕನ್ನಡದ ‘ಹಲೋ 123’, ‘ಬುಲ್ಲಿ’ ಹಾಗೂ ಇನ್ನೂ ಹೆಸರಿಡದ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇನ್ನು ಗರ್ಭಿಣಿಯಾಗಿರುವ ಹಿನ್ನೆಲೆಯಲ್ಲಿ ನಟಿ ಹರ್ಷಿಕಾ ಪೂಣಚ್ಚ ಸದ್ಯ ವಿಶ್ರಾಂತಿಯಲ್ಲಿದ್ದಾರೆ. ಕಳೆದ ವರ್ಷ ಅವರ ಚೊಚ್ಚಲ ನಿರ್ದೇಶನದ ‘ಚಿ. ಸೌಜನ್ಯ’ ಸಿನಿಮಾ ಘೋಷಿಸಿದ್ದರು. ಅದರ ಕಾರ್ಯಗಳು ನಡೆಯುತ್ತಿವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net