

ಬೆಂಗಳೂರು: ಪಕ್ಷದ ಹಾನಿ ನಿಯಂತ್ರಣಕ್ಕೆ ಯಾವುದೇ ಕ್ರಮಗಳಾಗುತ್ತಿಲ್ಲ ಎಂಬ ಕಾರ್ಯಕರ್ತರ ಬೇಸರ ಕೊನೆಗಾಣಿಸಲು ಬಿಜೆಪಿ ವರಿಷ್ಠರು ಆದ್ಯತೆ ನೀಡಿದ್ದಾರೆ. ಬಹಿರಂಗ ಅಪಸ್ವರ, ಪಕ್ಷ ಹಾಗೂ ಸಂಘಟನೆಗೆ ಧಕ್ಕೆ ತರುವ ಹೇಳಿಕೆಗಳು ಕೂಡದು ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ದೆಹಲಿ ನಾಯಕರ ‘ಖಡಕ್ ಸಂದೇಶ’ ಹೊತ್ತುಕೊಂಡು ಪಕ್ಷದ ರಾಜ್ಯ ಸಹ ಉಸ್ತುವಾರಿ ಶುಕ್ರವಾರ ಬೆಂಗಳೂರಿಗೆ ಆಗಮಿಸಿದ್ದರು. ಪಕ್ಷದ ರಾಜ್ಯ ಕಚೇರಿಯಲ್ಲೇ ಕುಳಿತು ಕಾರ್ಯಾಚರಣೆಗೆ ಇಳಿದು, ಏನೇ ಇದ್ದರೂ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ಎಂದು ತಾಕೀತು ಮಾಡಿದರು.
ವಿಧಾನಸಭೆ ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರನ್ನು ಕಚೇರಿಗೆ ಕರೆಯಿಸಿಕೊಂಡು ಮಾಹಿತಿ ತಲುಪಿಸಿದರು. ಮಾಜಿ ಸಚಿವರಾದ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ಬಿ.ಶ್ರೀರಾಮುಲು ಸೇರಿ ರಾಜ್ಯ ಕೋರ್ ಕಮಿಟಿ ಎಲ್ಲ ಸದಸ್ಯರಿಗೆ ಮೊಬೈಲ್ ಮೂಲಕ ಸಂಪರ್ಕಿಸಿ ವರಿಷ್ಠರ ನಿರ್ದೇಶನದತ್ತ ಗಮನಸೆಳೆದಿದ್ದಾರೆ.
ಸಿದ್ದರಾಮಯ್ಯ ಸರ್ಕಾರದ ಜನ ವಿರೋಧಿ ನೀತಿಗಳು, ವೈ)ಲ್ಯಗಳು, ಅಸಮರ್ಪ ಆಡಳಿತದ ವಿರುದ್ಧ ಹೋರಾಡುವುದು ಮರೆತು, ಕೆಲವು ನಾಯಕರು ಆಂತರಿಕ ಹೋರಾಟಕ್ಕೆ ಕಾರಣರಾಗಿದ್ದಾರೆ ಎಂದು ಸುಧಾಕರರೆಡ್ಡಿ ತೀವ್ರವಾಗಿ ಆಕ್ಷೇಪಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯಕರ್ತರು ಹಗಲಿರುಳು ಶ್ರಮಿಸುತ್ತಿದ್ದರೆ, ಕೆಲವರು ಬಹಿರಂಗ ಹೇಳಿಕೆ ಮತ್ತು ಮಾಧ್ಯಮಗಳ ಮುಂದೆ ಚರ್ಚೆಯ ಮೂಲಕ ಮುಜುಗರ ಉಂಟು ಮಾಡುತ್ತಿದ್ದಾರೆ.
ಇದರಿಂದಾಗಿ ಲಕ್ಷಾಂತರ ಕಾರ್ಯಕರ್ತರಿಗೆ ನೋವಾಗಿದೆ. ಏನೇ ಸಮಸ್ಯೆಯಿದ್ದರೂ ಪಕ್ಷದ ನಾಲ್ಕು ಗೋಡೆ ಮಧ್ಯೆ ಚರ್ಚಿಸಲು ಅವಕಾಶವಿದೆ. ಆಂತರಿಕ ಪ್ರಜಾಪ್ರಭುತ್ವ, ಮುಕ್ತ ಅಭಿಪ್ರಾಯ ಹಂಚಿಕೆಗೆ ನೀಡಿದ ಸಲುಗೆಯನ್ನು ದುರ್ಬಳಕೆ ಮಾಡಿಕೊಳ್ಳಬಾರದು ಎಂದು ತಾಕೀತು ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಸಂಘಟನಾ ಪರ್ವದ ಚುನಾವಣಾಧಿಕಾರಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರಿಗೆ ಸಂಪರ್ಕಿಸಿ, ಪ್ರಗತಿ ಪರಾಮರ್ಶಿಸಿದ್ದಾರೆ. ಉಳಿದ 16 ಜಿಲ್ಲಾ ಘಟಕಗಳಿಗೆ ಅಧ್ಯಕ್ಷರ ಆಯ್ಕೆ ವಿಳಂಬವಾಗುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವು ಸಂಸದರು, ಹಿರಿಯ ನಾಯಕರು ಅಭಿಪ್ರಾಯಗಳನ್ನು ಪಡೆಯಬೇಕಾಗಿದೆ ಎಂದು ಕಾರ್ಣಿಕ್ ವಿವರಣೆ ನೀಡಿದರೆ, ಆದಷ್ಟು ಬೇಗ ಈ ಪ್ರಕ್ರಿಯೆ ಮುಗಿಸಬೇಕು. ರಾಷ್ಟ್ರೀಯ ನಾಯಕರು ಪಕ್ಷದ ರಾಜ್ಯಾಧ್ಯಕ್ಷರ ಚುನಾವಣೆಯತ್ತ ಗಮನಹರಿಸುವರು ಎಂದು ಸುಧಾಕರ್‌ರೆಡ್ಡಿ ಹೇಳಿದ್ದಾರೆ.
ಕಾರ್ಯಕರ್ತರ ಭಾವನೆಗಳಿಗೆ ಘಾಸಿ ಉಂಟು ಮಾಡುವಂತಹ ಹೇಳಿಕೆಗಳನ್ನು ಯಾರೂ ನೀಡಬಾರದು. ಇದು, ಪಕ್ಷದ ಎ, ಬಿ ಸೇರಿ ಎಲ್ಲ ನಾಯಕರಿಗೆ ಅನ್ವಯ. ಪಕ್ಷದ ಮಾರ್ಗಸೂಚಿ, ಶಿಸ್ತು ಪಾಲಿಸಿ, ಪಕ್ಷದ ನಾಯಕತ್ವ ಶಕ್ತಿಯುತಗೊಳಿಸಲು ಎಲ್ಲರೂ ಮುಖ್ಯ. -ಸುಧಾಕರ್‌ರೆಡ್ಡಿ, ರಾಜ್ಯ ಬಿಜೆಪಿ ಸಹ ಉಸ್ತುವಾರಿ.