VIDEO | ಐಷಾರಾಮಿ ಕಾರಿನಂತೆ ಬದಲಾಯ್ತು ಆಟೋ ರಿಕ್ಷಾ; ಇದ್ರಲ್ಲಿ ಸಂಚರಿಸಿದ ಸವಾರ ಫುಲ್ ಹ್ಯಾಪಿ!

autorickshaw
Published on

ನವದೆಹಲಿ: ಆಟೋ ಚಾಲಕರಿಗೆ ತಮ್ಮ ರಿಕ್ಷಾವನ್ನು ವಿಭಿನ್ನವಾಗಿ ಶೃಂಗರಿಸಬೇಕು ಎಂಬ ಆಸೆ ಇರುವುದು ಸಹಜ. ಹೀಗಾಗಿ ತಮ್ಮ ನೆಚ್ಚಿನ ನಟ-ನಟಿಯ ಫೋಟೋ ಅಂಟಿಸಿಕೊಳ್ಳುವುದು, ನುಡಿಮುತ್ತು, ಸಿನಿಮಾ ಡೈಲಾಗ್​ಗಳನ್ನು ಬರೆಯುವುದು ಇತ್ಯಾದಿ, ಮಾಡುತ್ತಿರುತ್ತಾರೆ. ಜತೆಗೆ ತಮ್ಮ ಆಟೋ ಸ್ಟೈಲಿಶ್ ಲುಕ್​ನಲ್ಲಿ ಕಂಗೊಳಿಸಬೇಕೆಂದು ತಮ್ಮ ಕಲ್ಪನೆಯಂತೆ ವಿಭಿನ್ನವಾಗಿ ಮಾರ್ಪಾಡು ಮಾಡುತ್ತಾರೆ. ಇದೀಗ ಇಲ್ಲೊಬ್ಬ ಆಟೋ ಚಾಲಕ, ತನ್ನ ರಿಕ್ಷಾವನ್ನು ಐಷಾರಾಮಿ ಕಾರಿನಂತೆ ಮಾರ್ಪಾಡು ಮಾಡಿ ಸುದ್ದಿಯಾಗಿದ್ದಾನೆ.

ಸದ್ಯ ಐಷಾರಾಮಿ ಕಾರಿನಂತೆ ಮಾರ್ಪಾಡಾಗಿರುವ ರಿಕ್ಷಾದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೋವನ್ನು ಖ್ಯಾತ ಉದ್ದಿಮೆದಾರ ಹರ್ಷಾ ಗೋಯೆಂಕಾ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೆ ವಿಜಯ್ ಮಲ್ಯ ಅವರು ಕಡಿಮೆ ಬೆಲೆಯ ತ್ರಿಚಕ್ರ ಮಾದರಿಯ ಟ್ಯಾಕ್ಸಿ ವಿನ್ಯಾಸ ಮಾಡಬೇಕಿತ್ತು ಎಂದು ಬರೆದುಕೊಂಡಿದ್ದಾರೆ.

ವೈರಲ್ ಆಗಿರುವ ವಿಡಿಯೋವನ್ನು ಆವಿಷ್ಕರ್ ನಾಯಕ್ ಎಂಬಾತ ಮೊದಲು ಶೇರ್ ಮಾಡಿಕೊಂಡಿದ್ದಾರೆ. ಈ ವೀಡಿಯೋದಲ್ಲಿ ಆಟೋ ರಿಕ್ಷಾವನ್ನು ವಿಭಿನ್ನವಾಗಿ ಮಾರ್ಪಾಡು ಮಾಡಿರುವುದನ್ನು ಕಾಣಬಹುದು. 80ರ ದಶಕದ ಬೂಟ್ ವಿಂಟೇಜ್ ಐಷಾರಾಮಿ ಕಾರಿನಂತೆ ಬದಲಾವಣೆ ಮಾಡಲಾಗಿದ್ದು, ಸವಾರರು ಕುಳಿತುಕೊಳ್ಳಲು ಬೆಲೆಬಾಳುವ ಸೀಟುಗಳನ್ನು ಅಳವಡಿಸಿದ್ದಾರೆ. ಮುಂಭಾಗವು ಸಾಮಾನ್ಯ ಆಟೋ ರಿಕ್ಷಾದಂತೆ ಕಾಣುತ್ತದೆ.

ಟ್ವಿಟರ್​ನಲ್ಲಿ ವೈರಲ್ ಆಗುತ್ತಿರುವ ಈ ವೀಡಿಯೋವನ್ನು ಈಗಾಗಲೇ 33 ಸಾವಿರಕ್ಕೂ ಅಧಿಕ ಜನರು ವೀಕ್ಷಿಸಿದ್ದು, ತರಹೇವಾರಿ ಕಮೆಂಟ್ ಮಾಡುತ್ತಿದ್ದಾರೆ. ಜತೆಗೆ ಆಟೋ ಚಾಲಕ ಕ್ರಿಯಾಶೀಲ ದೃಷ್ಟಿಕೋನವನ್ನು ಪ್ರಶಂಸಿಸುತ್ತಿದ್ದಾರೆ. ದಿನೇಶ್ ಜೋಶಿ ಎಂಬುವವರು ಈ ಆಟೋದಲ್ಲಿ ಸಂಚರಿಸಿದ ಗ್ರಾಹಕ 100% ತೃಪ್ತಿ ಹೊಂದುತ್ತಾನೆ ಎಂದು ಕಮೆಂಟ್ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net