

ಕೀವ್(ಉಕ್ರೇನ್): ಸ್ಥಳೀಯವಾಗಿ ಹ್ಯಾರಿ ಪಾಟರ್ ಕ್ಯಾಸಲ್ ಎಂದು ಕರೆಯಲ್ಪಡುವ ಉಕ್ರೇನ್‌ನ ಒಡೆಸಾ ನಗರದಲ್ಲಿ ಕಪ್ಪು ಸಮುದ್ರದ ಕರಾವಳಿಯ ಸುಂದರವಾದ ಕಟ್ಟಡವು ರಷ್ಯಾದ ಕ್ಷಿಪಣಿ ದಾಳಿಯಿಂದ ನಾಶವಾಗಿದೆ. ದಾಳಿಯಲ್ಲಿ ಕಟ್ಟಡದಲ್ಲಿದ್ದ ಐವರು ಸಾವನ್ನಪ್ಪಿದ್ದಾರೆ.
ಇದೇ ಸಂದರ್ಭದಲ್ಲಿ ಕಟ್ಟಡದಲ್ಲಿದ್ದ 32 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಕಾನೂನು ಸಂಸ್ಥೆ ಈ ಕಟ್ಟಡವನ್ನು ಕಾನೂನು ವಿದ್ಯಾರ್ಥಿಗಳಿಗೆ ಶಿಕ್ಷಣ ಒದಗಿಸಲು ಈ ಕಟ್ಟಡವನ್ನು ಬಳಸಲಾಗುತ್ತಿತ್ತು ಎನ್ನಲಾಗಿದೆ.
ಬುಧವಾರ ರಷ್ಯಾ ಒಡೆಸ್ಸಾ ನಗರದ ಮೇಲೆ ಕ್ಷಿಪಣಿಗಳನ್ನು ಹಾರಿಸಿತು. ದಾಳಿಯಲ್ಲಿ 20ಕ್ಕೂ ಹೆಚ್ಚು ಕಟ್ಟಡಗಳು ಧ್ವಂಸಗೊಂಡಿವೆ. ಈ ದಾಳಿಯಲ್ಲಿ ರಷ್ಯಾ ಇಸ್ಕಾಂಡರ್ ಬ್ಯಾಲಿಸ್ಟಿಕ್ ಕ್ಷಿಪಣಿ ಮತ್ತು ಕ್ಲಸ್ಟರ್ ಬಾಂಬ್‌ಗಳನ್ನು ಬಳಸಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ನಡುವೆ ಕ್ರೈಮಿಯಾದಲ್ಲಿನ ತನ್ನ ವಾಯು ರಕ್ಷಣಾ ವ್ಯವಸ್ಥೆಯು ಉಕ್ರೇನ್ ನ ಕ್ಷಿಪಣಿಗಳನ್ನು ಹೊಡೆದುರುಳಿಸಿದೆ ಎಂದು ರಷ್ಯಾ ಘೋಷಿಸಿತು.