

ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ಮಾಡುವುದು ಗೊತ್ತು, ಇಳಿಸುವುದೂ ಗೊತ್ತು ಎಂಬ ಕಾಂಗ್ರೆಸ್‌ನ ಹಿರಿಯ ನಾಯಕ, ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಬಿಟ್ಟ ಮಾತುಗಳ ಬಾಣ, ಆಡಳಿತಪಕ್ಷದೊಳಗೆ ತಲ್ಲಣ ಸೃಷ್ಟಿಸಿದೆ.
ವಿಜಯಪುರದಲ್ಲಿ ನಡೆದ ರಾಷ್ಟ್ರೀಯ ಈಡಿಗ, ಬಿಲ್ಲವ, ದೀವರ ಸಮುದಾಯಗಳ ಸಮಾರಂಭವೊಂದರಲ್ಲಿ ಬಿ.ಕೆ.ಹರಿಪ್ರಸಾದ್ ಮಾಡಿದ ಭಾಷಣವು ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ಕೇಂದ್ರೀಕೃತವಾಗಿದೆ. ಈ ಕಾರಣಕ್ಕೆ ಸಿದ್ದರಾಮಯ್ಯ ಸಚಿವ ಸಂಪುಟದ ಸಹೋದ್ಯೋಗಿಗಳು ಅವರ ವಿರುದ್ಧ ಮುಗಿಬಿದ್ದಿದ್ದಾರೆ.
ಬಿ.ಕೆ.ಹರಿಪ್ರಸಾದ್ ಹೇಳಿದ್ದಿಷ್ಟು; ಜಾತಿ, ವರ್ಗಗಳು ಎರಡೂ ಬೇರೆ. ಜಾತಿ ಆಧಾರದಲ್ಲಿ ರಾಜಕೀಯ ಮಾಡಿದವನಲ್ಲ. 2013ರಲ್ಲಿ ಹಿಂದುಳಿದ ವರ್ಗಗಳ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗುವುದಕ್ಕೆ ನನ್ನ ಪಾಲೂ ಇದೆ.
ಗೋವಾ, ಪಾಂಡಿಚೇರಿ ಸಿಎಂ ಆಯ್ಕೆ ಮಾಡಿರುವೆ. ಹರಿಯಾಣದಲ್ಲಿ ಪಕ್ಷದ ವರಿಷ್ಠರ ತಂಡದೊಂದಿಗೆ ಸಿಎಂ ಆಯ್ಕೆಯಲ್ಲಿ ಪ್ರಮುಖಪಾತ್ರವಹಿಸಿದೆ. ಛತ್ತೀಸಗಡದಲ್ಲಿ ನಾನು ಆಯ್ಕೆ ಮಾಡಿದ ಹಿಂದುಳಿದ ವರ್ಗಗಳ ಭೂಪೇಶ್ ಬೇಲ್ ಆರು ವರ್ಷಗಳ ಕಾಲ ಸಿಎಂ ಆಗಿದ್ದಾರೆ.
ಹೀಗಾಗಿ ಸಿಎಂ ಆಯ್ಕೆ ಮಾಡುವುದು ಗೊತ್ತು, ಇಳಿಸುವುದೂ ಗೊತ್ತು.
ಮಂತ್ರಿ ಸ್ಥಾನಕ್ಕಾಗಿ ಯಾರ ಮುಂದೆಯೂ ಭಿಕ್ಷೆ ಬೇಡುವುದಿಲ್ಲ. ಸ್ವಾರ್ಥ ರಾಜಕೀಯ ಮಾಡುವುದಿಲ್ಲ. ಬೆಂಗಳೂರಿನಲ್ಲಿ 49 ವರ್ಷಗಳ ಕಾಲ ರಾಜಕಾರಣ ಮಾಡಿರುವುದು ಸಾಮಾನ್ಯವೇನಲ್ಲ. ಧೈರ್ಯವಿಲ್ಲದಿದ್ದರೆ ಎಂದೋ ಜಾಗ ಖಾಲಿ ಮಾಡಿಸುತ್ತಿದ್ದರು.
ರಾಜ್ಯದ 11 ವಿಧಾನಸಭೆ ಕ್ಷೇತ್ರಗಳಲ್ಲಿ ಈಡಿಗ, ಬಿಲ್ಲವ ಹಾಗೂ ದೀವರ ಸಮುದಾಯಗಳು ನಿರ್ಣಾಯಕವಾಗಿದ್ದು, ಸರಿಯಾದ ರಾಜಕೀಯ ಪ್ರಾತಿನಿಧ್ಯ ಸಿಗುತ್ತಿಲ್ಲ. ವ್ಯವಸ್ಥಿತವಾಗಿ ತುಳಿಯಲಾಗುತ್ತಿದೆ. ಕೋಟಿ ಚನ್ನಯ್ಯ ಪಾರ್ಕ್‌ಗೆ ಐದು ಕೋಟಿ ರೂ. ಅನುದಾನ ಕೇಳಿದ್ದೆ, ಕೊಡುತ್ತೇನೆಂದು ಭರವಸೆ ನೀಡಿದ್ದ ಸಿಎಂ ಸಿದ್ದರಾಮಯ್ಯ ನಂತರ ಕೊಟ್ಟಿಲ್ಲ.
ಹರಿಪ್ರಸಾದ್ ಅವರ ಈ ಮಾತುಗಳು ಕಾಂಗ್ರೆಸ್ ಅಂಗಳದಲ್ಲಿ ಕಿಡಿಹೊತ್ತಿಸಿದೆ. ಅವರ ವಿರುದ್ಧ ಸಿದ್ದರಾಮಯ್ಯ ಸಚಿವ ಸಂಪುಟದ ಸಹೋದ್ಯೋಗಿಗಳು ಮುಗಿಬಿದ್ದಿದ್ದಾರೆ. ಸಿಎಂ ಆಯ್ಕೆ ಇಲ್ಲಿ ಮಾಡುವುದಿಲ್ಲ, ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಆಯ್ಕೆ ಮಾಡುತ್ತಾರೆ. ಮಂತ್ರಿ ಪದವಿ ಭಿಕ್ಷೆ ಬೇಡಿ ಪಡೆಯುವುದಲ್ಲವೆಂದು ಸಚಿವರಾದ ಜಮೀರ್ ಅಹ್ಮದ್, ಬಿ.ನಾಗೇಂದ್ರ, ಶರಣಬಸಪ್ಪ ದರ್ಶನಾಪುರ ತಿರುಗೇಟು ನೀಡಿದ್ದಾರೆ.
ಕೆಲವರಿಗೆ ಅಸಮಾಧಾನವಿರಬಹುದು, ಅದನ್ನೆಲ್ಲ ಸರಿಪಡಿಸುವ ಶಕ್ತಿ ಕಾಂಗ್ರೆಸ್ ಪಕ್ಷಕ್ಕಿದೆ ಎಂದು ಜಗದೀಶ ಶೆಟ್ಟರ್ ಹೇಳಿದ್ದರೆ, ಬಿ.ಕೆ.ಹರಿಪ್ರಸಾದ್ ಹೇಳಿಕೆಗೆ ಉತ್ತರ ನೀಡಲು ಸಿದ್ದರಾಮಯ್ಯ ಸಮರ್ಥರು ಎಂದು ಸಚಿವ ಡಾ.ಜಿ.ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.
ಸಮುದಾಯದ ಕಾರ್ಯಕ್ರಮದಲ್ಲಿ ಆಡಿದ ಮಾತುಗಳು ಕಾಂಗ್ರೆಸ್‌ನಲ್ಲಿ ಸಂಚಲನ ಸೃಷ್ಟಿಸಿದ್ದು ಗಮನಕ್ಕೆ ಬರುತ್ತಿದ್ದಂತೆಯೇ ಬಿ.ಕೆ.ಹರಿಪ್ರಸಾದ್ ಬೆಂಗಳೂರಿನಲ್ಲಿ ಈ ಕುರಿತು ಇಂದು ಪ್ರತಿಕ್ರಿಯೆ ನೀಡಿದ್ದಾರೆ.
ಕಾರ್ಯಕ್ರಮದಲ್ಲಿ ಕ್ಯಾಮೆರಾಗಳಿದ್ದರೆ ಮಾತನಾಡುತ್ತಿದ್ದಿಲ್ಲ. ಯಾರೋ ಕ್ಯಾಮೆರಾ ಇಟ್ಟಿದ್ದನ್ನು ಗಮನಿಸಲಿಲ್ಲ, ನಾವೆಲ್ಲ ಹಿಂದುಳಿದ ವರ್ಗದವರು ನಮಗೆಲ್ಲ ಎಲ್ಲಿ ಗೊತ್ತಾಗಬೇಕು. ರಾಜಕೀಯದಲ್ಲಿ ಏನೇನಾಗುತ್ತದೋ ಮುಂದೆ ಕಾದುನೋಡಿ ಎಂದು ಮಾರ್ಮಿಕವಾಗಿ ಹೇಳಿದ್ದಾರೆ.
ಇದೇ ಛಾನ್ಸ್ ಎಂದು ಭಾವಿಸಿದ ಬಿಜೆಪಿ ನಾಯಕರು ಕಾಂಗ್ರೆಸ್‌ಗೆ ತಿವಿದಿದ್ದಾರೆ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲವೆಂಬುದು ಬಯಲಾಗಿದೆ. ಕೇವಲ ಅಧಿಕಾರಕ್ಕೆ ಬಂದ ಎರಡು ತಿಂಗಳೊಳಗೆ ಒಳಗೊಳಗೆ ಕುದಿಯುತ್ತಿದ್ದ ಅಸಮಾಧಾನ ಸ್ಪೋಟಿಗೊಂಡಿದೆ ಎಂದು ಛೇಡಿಸಿದ್ದಾರೆ.
ಹರಿಪ್ರಸಾದ್ ಹೇಳಿಕೆಯನ್ನು ಒಪ್ಪುತ್ತೇವೆ, ಇನ್ನೊಂದು ವರ್ಷದ ನಂತರ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕೆಳಗಿಳಿಯವುದನ್ನೂ ಹರಿಪ್ರಸಾದ್ ದೃಢಪಡಿಸಿದ್ದಾರೆ ಎಂದು ಬಿಜೆಪಿ ಎಂಎಲ್ಸಿಗಳಾದ ಎನ್.ರವಿಕುಮಾರ್ ಹಾಗೂ ಛಲವಾದಿ ನಾರಾಯಣಸ್ವಾಮಿ ಕುಟುಕಿದ್ದಾರೆ.