ಇತರೆ ಇಲಾಖೆಗೂ ಕಷ್ಟ ಪರಿಹಾರ ಭತ್ಯೆಯನ್ನು ನೀಡಲಾಗುವುದು: ಗೃಹ ಸಚಿವ ಡಾ.ಜಿ ಪರಮೇಶ್ವರ್ ಹೇಳಿಕೆ

Lady Police
Published on

ಬೆಂಗಳೂರು: ಪೊಲೀಸ್ ಇಲಾಖೆ ರೀತಿಯಲ್ಲಿಯೇ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಗೂ ಕಷ್ಟ ಪರಿಹಾರ ಭತ್ಯೆಯನ್ನು ನೀಡಲಾಗುವುದು ಎಂದು ಗೃಹ ಸಚಿವ ಡಾ.ಜಿ ಪರಮೇಶ್ವರ್ ತಿಳಿಸಿದರು.


ಬನ್ನೇರುಘಟ್ಟ ರಸ್ತೆಯಲ್ಲಿನ ಆರ್.ಎ.ಮುಂಡ್ಕರ್ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಅಕಾಡೆಮಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಮುಖ್ಯಮಂತ್ರಿಗಳ ಪದಕ ಪ್ರದಾನ ಹಾಗೂ ಅಗ್ನಿಶಾಮಕ ಠಾಣಾಧಿಕಾರಿಗಳ ನಿರ್ಗಮನ ಪಥ ಸಂಚಲನ ಸಮಾರಂಭದಲ್ಲಿ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ರಾಜ್ಯವಿಪತ್ತು ಸ್ಪಂದನಾ ಪಡೆ ಸೇರಿ ಇತರರು ಪ್ರವಾಹ ಸಂದರ್ಭದಲ್ಲಿ ಉತ್ತಮ ಕೆಲಸಗಳನ್ನು ಮಾಡಿದ್ದು, ಇವರ ಕಾರ್ಯ ಶ್ಲಾಘನೀಯವಾದದ್ದು, ಈ ಇಲಾಖೆಗಳು ತುರ್ತು ಸೇವೆಯನ್ನು ನೀಡುತ್ತಿವೆ. ಹೀಗಾಗಿ ಇವರ ಸೇವೆಯನ್ನು ಪರಿಗಣಿಸಿ ಪೊಲೀಸ್ ಇಲಾಖೆ ರೀತಿಯಲ್ಲಿಯೇ ಇವರಿಗೂ ಸಹ ಕಷ್ಟ ಪರಿಹಾರ ಭತ್ಯೆಯನ್ನು ನೀಡಲಾಗುವುದು ಎಂದು ೋಷಿಸಿದರು.


ವಾಹನಗಳಿಗೆ ಇಂಧನ ತುಂಬಿಸಿಕೊಳ್ಳಲು ಅನುಕೂಲವಾಗಲೆಂದು ಪೊಲೀಸ್ ಇಲಾಖೆಗೆ ನೀಡಿರುವ ರೂಪೆ ಕಾರ್ಡ್ ಸೌಲಭ್ಯವನ್ನು ಇವರಿಗೂ ನೀಡಲಾಗುವುದು. ಜತೆಗೆ ಕ್ಯಾಂಟೀನ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಭರವಸೆ ನೀಡಿದರು.
ನಾನು ಮೂರನೆ ಬಾರಿಗೆ ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಕಳೆದ 4 ವರ್ಷಗಳಿಂದ ಪದಕ ಪ್ರದಾನ ಮಾಡಿರಲಿಲ್ಲ. ಇದೀಗ ನಾನು ಪದಕ ಪ್ರದಾನ ಮಾಡುತ್ತಿರುವುದು ನನ್ನ ಸೌಭಾಗ್ಯ ಎಂದರು.


ಇದೇ ವೇಳೆ 160 ಕ್ಕೂ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗೆ ಮುಖ್ಯಮಂತ್ರಿಗಳ ಪದಕ ಹಾಗೂ 50 ಕ್ಕೂ ಹೆಚ್ಚು ಗೃಹ ರಕ್ಷಕ ದಳ, ಪೌರ ರಕ್ಷಣೆ ಹಾಗೂ ರಾಜ್ಯವಿಪತ್ತು ಸ್ಪಂದಾ ಪಡೆಯ ಅಧಿಕಾರಿ ಮತ್ತು ಸಿಬ್ಬಂದಿಗೆ ಪದಕ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಮಹಾ ನಿದೇರ್ಶಕ ಕಮಲ್ ಪಂತ್, ಹೆಚ್ಚುವರಿ ನಿದೇರ್ಶಕರಾದ ಹರಿಶೇಖರನ್, ನಂಜುಂಡಸ್ವಾಮಿ ಹಾಗೂ ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ರವಿ ಉಪಸ್ಥಿತರಿದ್ದರು.


ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿ ಉಂಟು ಮಾಡಬೇಡಿ:
ರಾಜ್ಯದ ಹಿತ ಕಾಪಾಡುವುದಕ್ಕಾಗಿ ಪ್ರತಿಭಟನೆ ಮಾಡುವುದು ಅವರ ಹಕ್ಕು. ಆದರೆ ಸಾರ್ವಜನಿಕ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಹೋರಾಟ ಮಾಡಬೇಕೆಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತಾಡಿದ ಅವರು, ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ರಾಜ್ಯಾದ್ಯಂತ ಸಂಘ ಸಂಸ್ಥೆಗಳು ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟಿಸುವುದು ಅವರ ಹಕ್ಕು. ಅದಕ್ಕೆ ನಮ್ಮ ವಿರೋಧವೇನಿಲ್ಲ. ಆದರೆ ಸಾರ್ವಜನಿಕರ ಆಸ್ತಿಪಾಸ್ತಿಗೆ ನಷ್ಟ ಉಂಟು ಮಾಡಿ, ಜನಸಾಮಾನ್ಯರಿಗೆ ತೊಂದರೆಯಾದರೆ, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ನಮ್ಮ ಪೊಲೀಸ್ ಇಲಾಖೆ ಸಿದ್ದವಾಗಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net