

ಬಿ.ಆರ್.ರಾಜೇಂದ್ರ ಪ್ರಭು ಬನ್ನೂರು
ಬನ್ನೂರಿನಿಂದ ವಿವಿಧ ಭಾಗಕ್ಕೆ ತೆರಳಲು ಸಮಯಕ್ಕೆ ಸರಿಯಾಗಿ ಬಸ್ ವ್ಯವಸ್ಥೆ ಇಲ್ಲದೆ ಸಾರ್ವಜನಿಕರ ಪರದಾಡುವಂತಾಗಿದೆ. ಅಲ್ಲದೇ, ವಿರಳವಾಗಿ ಸಂಚರಿಸುವ ಬಸ್‌ಗಳಿಗೆ ನೂಕುನುಗ್ಗಲು ಉಂಟಾಗುತ್ತಿದೆ.
ದಿನ ಬೆಳಗಾದರೆ ವಿವಿಧ ಕೆಲಸಗಳಿಗೆ ತೆರಳುವವರು ಬಸ್‌ನಲ್ಲಿ ಹೋಗಲು ಪರದಾಡುವಂತಾಗಿದೆ. ಬನ್ನೂರು, ನರಸೀಪುರ, ಮೈಸೂರು, ಮಳವಳ್ಳಿ, ಮಂಡ್ಯ, ಶ್ರೀರಂಗಪಟ್ಟಣ ಸೇರಿದಂತೆ ವಿವಿಧ ಕಡೆಗಳಿಗೆ ನಿತ್ಯ ನೂರಾರು ಜನರು ಪ್ರಯಾಣಿಸುತ್ತಾರೆ. ಆದರೆ, ಸೀಮಿತ ಸಂಖ್ಯೆಯಲ್ಲಿ ಬಸ್ ಓಡಾಡುವುದರಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ಉದ್ಯೋಗಕ್ಕೆ ತೆರಳುವವರು ಪರದಾಡುವಂತಾಗಿದೆ.
ಬನ್ನೂರು ಮಾರ್ಗವಾಗಿ ಮೈಸೂರು, ತಿ.ನರಸೀಪುರಕ್ಕೆ ಬಸ್ ವಿರಳವಾಗಿ ಸಂಚರಿಸುವುದರಿಂದ ಬೆಳಗ್ಗೆ ಹಾಗೂ ಸಂಜೆಯ ಸಮಯದಲ್ಲಿ ನೂಕುನುಗ್ಗಲು ಉಂಟಾಗುತ್ತದೆ. ಮೊದಲು ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದ ಸಂದರ್ಭ ಹೆಚ್ಚಿನ ಸಮಸ್ಯೆ ಕಂಡು ಬಂದಿರಲಿಲ್ಲ. ಈಗ ಖಾಸಗಿ ಬಸ್‌ಗಳ ಸಂಚಾರವೂ ನಿಂತಿರುವುದರಿಂದ ಹೆಚ್ಚಿನ ಸಮಸ್ಯೆ ಉದ್ಭವಿಸಿದೆ.
ಸದ್ಯ ಈ ಮಾರ್ಗದಲ್ಲಿ ಸಂಚರಿಸುವ ಸಾರಿಗೆ ಬಸ್‌ಗಳು ಅಗತ್ಯಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿವೆ. ಇದರಿಂದ ವಯಸ್ಕರು, ವಿದ್ಯಾರ್ಥಿಗಳು, ಮಹಿಳೆಯರು ಸಂಚರಿಸುವುದೇ ಕಷ್ಟಸಾಧ್ಯವಾಗಿದೆ. ಇನ್ನು ನಿಲ್ದಾಣದಲ್ಲೇ ಬಸ್ ಭರ್ತಿಯಾಗುವುದರಿಂದ ಮಾರ್ಗಮಧ್ಯೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಬಸ್ ನಿಲ್ಲಿಸುತ್ತಿಲ್ಲ ಎಂಬ ಆರೋಪವೂ ಇದೆ.
ಅಲ್ಲದೆ, ಬಸ್ ನಿಲ್ದಾಣವೂ ಅನೈರ್ಮಲ್ಯದಿಂದ ಕೂಡಿದ್ದು, ಎಲ್ಲೆಂದರಲ್ಲಿ ಕಸ ಎಸೆಯಲಾಗಿದೆ. ಅಶುಚಿತ್ವ ತಾಂಡವವಾಡುತ್ತಿದೆ. ಅಲ್ಲದೆ ಪ್ರಯಾಣಿಕರಿಗೆ ಕುಡಿಯುವ ನೀರಿನ ಸೌಕರ್ಯವೂ ಇಲ್ಲದೆ ತೊಂದರೆ ಉಂಟಾಗಿದೆ. ಸಂಜೆ 6 ಗಂಟೆ ನಂತರ ನಿಲ್ದಾಣಕ್ಕೆ ಬಸ್‌ಗಳು ಬರುವ ಪ್ರಮಾಣ ಕಡಿಮೆ ಇದ್ದು, ವಿವಿಧ ಸ್ಥಳಕ್ಕೆ ತೆರಳುವವರು ಪರ್ಯಾಯ ವ್ಯವಸ್ಥೆ ಕಂಡು ಕೊಳ್ಳಬೇಕಾಗಿದೆ.
ಇನ್ನು ಕುಂತನಹಳ್ಳಿ, ಮೇಗಳಕೊಪ್ಪಲು, ಬೆಟ್ಟಳ್ಳಿ, ವಡ್ಡರಕೊಪ್ಪಲು, ಮಲಿಯೂರು, ಕೆಂಪೇಗೌಡನಕೊಪ್ಪಲು, ಹನುಮನಾಳು, ಬೀಡನಹಳ್ಳಿ, ಪೀಹಳ್ಳಿ, ಚಾಮಲಪುರ, ಭೂತಗಳ್ಳಿ, ಗಾಣಿಗನಕೊಪ್ಪಲು, ಸೇನಾಪತಳ್ಳಿ, ಕಂಚನಹಳ್ಳಿ, ಮರಳಿಪುರ ಗ್ರಾಮಗಳಿಗೆ ಯಾವುದೇ ಬಸ್ ವ್ಯವಸ್ಥೆ ಇಲ್ಲದೆ ಮುಖ್ಯ ರಸ್ತೆಗೆ ಮೂರ್ನಾಲ್ಕು ಕಿಲೋ ಮೀಟರ್ ನಡೆದು ಬಂದು ಬಸ್‌ನಲ್ಲಿ ತೆರಳಬೇಕಾದ ಅನಿವಾರ್ಯತೆ ಇದೆ. ಸಂಬಂಧಪಟ್ಟವರು ಇತ್ತ ಗಮನಹರಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕು ಎಂಬುದು ಸಾರ್ವಜನಿಕರು ಮನವಿ ಯಾಗಿದೆ.