ಓಲಾ ಕ್ಯಾಬ್ ಚಾಲಕನಿಂದ ಲೈಂಗಿಕ ಕಿರುಕುಳ: ₹5 ಲಕ್ಷ ಪರಿಹಾರ ವಿಚಾರಣೆ ಮುಂದೂಡಿ

highcourt
Published on

ಬೆಂಗಳೂರು: ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪರಿಹಾರ ರೂಪದಲ್ಲಿ 5 ಲಕ್ಷ ರೂ. ಪಾವತಿಸುವಂತೆ ಏಕಸದಸ್ಯ ಪೀಠ ನೀಡಿದ್ದ ಆದೇಶ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಯನ್ನು ಹೈಕೋರ್ಟ್ ಮಾ.17ಕ್ಕೆ ಮುಂದೂಡಿದೆ.

ಓಲಾ ಕ್ಯಾಬ್ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜಿ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್.ವಿ..ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಓಲಾ ಪರ ವಕೀಲರು ವಾದ ಮಂಡಿಸಿ, ಇದು 5 ಲಕ್ಷ ರೂ. ಪರಿಹಾರ ಪಾವತಿಸುವ ವಿಚಾರವಲ್ಲ. 2013ರ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯ್ದೆ ವ್ಯಾಖ್ಯಾನಕ್ಕೆ ಸಂಬಂಧಿಸಿದ ಬಗ್ಗೆಯೂ ಇದೆ. ನಾವು ಚಾಲಕರಿಗೆ ಉದ್ಯೋಗ ನೀಡಿಲ್ಲ. ಓಲಾ ಸೇವೆಯನ್ನು ಚಾಲಕರು ಬಳಸಿಕೊಳ್ಳುತ್ತಾರೆ. ಚಾಲಕರು ಸ್ವತಂತ್ರ ಗುತ್ತಿಗೆದಾರರಾಗಿದ್ದಾರೆ ಎಂದು ವಿವರಿಸಿದರು.

ವಾದ ಆಲಿಸಿದ ನ್ಯಾಯಪೀಠ, ವಿಚಾರಣೆಯನ್ನು ಮಾ.17ಕ್ಕೆ ಮುಂದೂಡಿದೆ. ಪ್ರಕರಣ ಸಂಬಂಧ ಸೆ.30ರಂದು ಏಕಸದಸ್ಯ ಪೀಠವು 5 ಲಕ್ಷ ರೂ. ಪರಿಹಾರ ಹಣವಲ್ಲದೆ, ಸಂತ್ರಸ್ತೆಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ 50 ಸಾವಿರ ರೂ. ಅನ್ನು ಕಂಪನಿ ಪಾವತಿಸಬೇಕು. ಅಲ್ಲದೇ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿ ಅವರು ವೈಯಕ್ತಿಕವಾಗಿ 1 ಲಕ್ಷ ರೂ. ಅನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಪಾವತಿಸಬೇಕು.

ಸಂತ್ರಸ್ತೆ ನೀಡಿದ ದೂರಿನ ಕುರಿತು ಕಂಪನಿಯ ಆಂತರಿಕ ದೂರುಗಳ ಸಮಿತಿ ವಿಚಾರಣೆ ನಡೆಸಬೇಕು. ಆ ವಿಚಾರಣಾ ಪ್ರಕ್ರಿಯೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ನಗರ ಜಿಲ್ಲಾಧಿಕಾರಿ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಓಲಾ ಮೇಲ್ಮನವಿ ಸಲ್ಲಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net