ಸೋಮವಾರ ಶುಭಲಾಭ; ಕೋಟಿ ರೂ. ದಾಟಿದ ತುಮಕೂರು ಕೆಎಸ್‌ಆರ್‌ಟಿಸಿ ದಿನದ ಆದಾಯ

Tumakuru KSRTC
Tumakuru KSRTC
Published on

ತುಮಕೂರು: ವಿಧಾನಸಭೆ ಚುನಾವಣೆ ಎಫೆಕ್ಟ್ ರಾಜ್ಯ ರಸ್ತೆ ಸಾರಿಗೆ ನಿಗಮದ ಮೇಲೂ ಬೀರಲಾರಂಭಿಸಿದೆ. ವಿವಿಧ ರಾಜಕೀಯ ಸಮಾವೇಶದ ಕಾರಣಕ್ಕೆ ಕೆಎಸ್‌ಆರ್‌ಟಿಸಿ ತುಮಕೂರು ವಿಭಾಗಕ್ಕೆ ಪ್ರತಿ ಸೋಮವಾರ ಶುಭವಾರ ಎನಿಸಿದೆ.

2022ರ ಅಕ್ಟೋಬರ್‌ನಿಂದಲೂ ಬಹುತೇಕ ಸೋಮವಾರಗಳಲ್ಲಿ ಘಟಕದ ಆದಾಯ ಬರೋಬ್ಬರಿ 1 ಕೋಟಿ ರೂಪಾಯಿ ದಾಟಿರುವುದು ನಿಗಮಕ್ಕೆ ಹರ್ಷ ತಂದಿದೆ.

ಕಳೆದ ಮೂರು ತಿಂಗಳಿನಿಂದಲೂ ರಾಜ್ಯದೆಲ್ಲೆಡೆ ಎಲ್ಲ ಪಕ್ಷಗಳಲ್ಲಿಯೂ ರಾಜಕೀಯ ಚಟುವಟಿಕೆಗಳು ಬಿರುಸಾಗಿಯೇ ನಡೆಯಲಾರಂಭಿಸಿವೆ. ಒಂದಿಲ್ಲೊಂದು ಸಮಾವೇಶ ನಡೆಯುತ್ತಿರುವುದು ನಿಗಮದ ಆದಾಯ ಹೆಚ್ಚಳಕ್ಕೆ ಪ್ರಮುಖ ಕಾರಣ ಎನಿಸಿದೆ. ಸೋಮವಾರಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿರುವುದನ್ನು ಗಮನಿಸಿ ಬಸ್‌ಗಳ ಕಾರ್ಯಾಚರಣೆ ವಿಸ್ತರಿಸಿಕೊಳ್ಳುವ ಜತೆಗೆ ರಾಜಕೀಯ ಸಮಾವೇಶಗಳಿಗೆ ನೂರಾರು ಬಸ್‌ಗಳನ್ನು ಒಪ್ಪಂದದ ಮೇಲೆ ಕಳುಹಿಸುತ್ತಿರುವುದು ನಿಗಮದ ಬೊಕ್ಕಸ ತುಂಬಿಸುತ್ತಿದೆ.

ಫೆ.6ರಂದು ಪ್ರಧಾನಿ ನರೇಂದ್ರಮೋದಿ ಅವರು ಗುಬ್ಬಿ ತಾಲೂಕು ಎಚ್‌ಎಎಲ್ ಘಟಕ ಉದ್ಘಾಟನೆಗೆ ಆಗಮಿಸಿದ ಸಂದರ್ಭದಲ್ಲಿಯೂ 300 ಬಸ್‌ಗಳನ್ನು ತೆಗೆದುಕೊಳ್ಳಲಾಗಿದ್ದು ಆ ದಿನದ ಆದಾಯವೂ 1 ಕೋಟಿ ರೂ. ದಾಟಿದೆ.

ಪ್ರಯಾಣಿಕರ ಬೇಡಿಕೆಯಂತೆ ದೂರದೂರುಗಳಿಗೆ ಬಸ್‌ಗಳ ಕಾರ್ಯಾಚರಣೆ ವಿಸ್ತರಿಸುವುದರಿಂದ ಒಪ್ಪಂದದ ಮೇರೆಗೆ ಕಳುಹಿಸಿದಾಗ ಗಳಿಸುವ ಆದಾಯದಷ್ಟೇ ಗಳಿಸಲು ಸಾಧ್ಯವಿದೆಯಾದರೂ ಖರ್ಚಿನ ಲೆಕ್ಕಾಚಾರದಲ್ಲಿ ಮಾತ್ರ ಕೊಂಚ ವ್ಯತ್ಯಾಸವಾಗಲಿದೆ.

ಕರೊನಾ ಹಾವಳಿಗೂ ಪೂರ್ವದಲ್ಲಿ ತುಮಕೂರು ವಿಭಾಗದಲ್ಲಿ ವಾರ್ಷಿಕ 215 ಕೋಟಿ ರೂ. ಸರಾಸರಿ ಆದಾಯ ಪಡೆಯಲಾಗಿದೆ. ಎರಡು ತಿಂಗಳು ಇರುವಾಗಲೇ ಈ ವರ್ಷ ಆದಾಯ 189 ಕೋಟಿ ರೂ. ದಾಟಿದೆ. 2022 ನವೆಂಬರ್‌ನಲ್ಲಿ ಒಂದು ಸೋಮವಾರದಲ್ಲಿ 1.54 ಕೋಟಿ ರೂ. ಗಳಿಸಿರುವುದು ಈವರೆಗಿನ ದಾಖಲೆಯಾಗಿದೆ.

ಒಪ್ಪಂದದಲ್ಲಿ ಖರ್ಚು ಕಡಿಮೆ, ಆದಾಯ ಹೆಚ್ಚು: ಒಪ್ಪಂದದ ಮೇರೆಗೆ ಬಸ್‌ಗಳನ್ನು ಕಳುಹಿಸುವುದರಿಂದ ಲಾಭ ಹೆಚ್ಚಿದೆ. ನಿಗದಿತ ದರಕ್ಕೆ ಒಪ್ಪಂದ ಮಾಡಿಕೊಳ್ಳಲಾಗುತ್ತಿದ್ದು, 44ರೂ./1ಕಿಮೀ ನಂತೆ ದಿನಕ್ಕೆ ಕನಿಷ್ಠ 300ಕಿಮೀ ಮೊತ್ತ ನೀಡಬೇಕಿದೆ. ಆದರೆ, ರಾಜಕೀಯ ಸಮಾವೇಶ, ಮಕ್ಕಳ ಶೈಕ್ಷಣಿಕ ಪ್ರವಾಸಗಳಲ್ಲಿ ಬಸ್‌ಗಳನ್ನು ನಿಗದಿತ ಸ್ಥಳಕ್ಕೆ ತಲುಪಿ ಅಲ್ಲಿಂದ ವಾಪಸ್ ಬರಲಷ್ಟೇ ಬಳಸಿಕೊಳ್ಳುವುದರಿಂದ ಇಂಧನ ಉಳಿತಾಯವಾಗಿ ಸಂಸ್ಥೆಗೆ ಆದಾಯ ಹೆಚ್ಚಾಗುವ ಸಮೀಕರಣ ಸಿಬ್ಬಂದಿ ಹಾಗೂ ಅಧಿಕಾರಿಗಳ ಖುಷಿಗೆ ಕಾರಣವಾಗಿದೆ.

18ರ ಪೈಕಿ 14 ಸೋಮವಾರ ಕೋಟಿ ರೂಪಾಯಿ ಆದಾಯ: 2022ರ ಅಕ್ಟೋಬರ್‌ನಲ್ಲಿ 2 ಸೋಮವಾರ, ನವೆಂಬರ್‌ನಲ್ಲಿ 3 ಸೋಮವಾರ, ಡಿಸೆಂಬರ್‌ನ ನಾಲ್ಕು ಸೋಮವಾರ, ಜನವರಿಯಲ್ಲಿದ್ದ ಎಲ್ಲ ಸೋಮವಾರಗಳೂ ಹಾಗೂ ಈಗ ಫೆಬ್ರವರಿ ತಿಂಗಳ ಮೊದಲ ಸೋಮವಾರವೇ 1ಕೋಟಿ ರೂ.ಗೂ ಅಧಿಕ ಅದಾಯ ನಿಗಮಕ್ಕೆ ಹರಿದುಬಂದಿದೆ. ಕಳೆದ ಅಕ್ಟೋಬರ್‌ನಿಂದ ಫೆಬ್ರವರಿವರೆಗೂ 18 ಸೋಮವಾರಗಳ ಪೈಕಿ 14 ಸೋಮವಾರಗಳಲ್ಲಿ ಆದಾಯ 1 ಕೋಟಿ ರೂ. ದಾಟಿರುವುದು ನಿಗಮಕ್ಕೆ ಶುಭ ತರುವ ವಾರವಾಗಿದೆ.

ವಿಭಾಗದ ಎಲ್ಲ ವಾಹನಗಳನ್ನು ಸುಸ್ಥಿತಿಯಲ್ಲಿಟ್ಟುಕೊಂಡು, ಲಭ್ಯವಿರುವ ಚಾಲನಾ ಸಿಬ್ಬಂದಿಯನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಲಾಗುತ್ತಿದೆ. ಉತ್ತಮ ಕಾರ್ಯಯೋಜನೆ ಮೂಲಕ ಸಕಾಲದಲ್ಲಿ ಕಾರ್ಯಾಚರಣೆ ಮಾಡಿದ್ದು ಕಳೆದ ಮೂರು ತಿಂಗಳಿನ ಬಹುತೇಕ ಎಲ್ಲ ಸೋಮವಾರಗಳಲ್ಲಿಯೂ ಆದಾಯ 1 ಕೋಟಿ ರೂ. ದಾಟಲು ಕಾರಣವಾಗಿದೆ. | ಎ.ಎನ್.ಗಜೇಂದ್ರಕುಮಾರ್ ಡಿಸಿ, ಕೆಎಸ್‌ಆರ್‌ಟಿಸಿ, ತುಮಕೂರು ವಿಭಾಗ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net