ಕಗ್ಗದ ಬೆಳಕು| ಎಚ್ಚರದ ಬಾಳಿನಿಂದ ನೆಮ್ಮದಿ

cave Kagga 23 Jan 20
Published on

ಗುಹೆಯೆಡಕೆ, ಗುಹೆ ಬಲಕೆ, ನಡುವೆ ಮಲೆ; ಕಣಿವೆಯಲಿ |

ವಿಹರಿಪೆಯ ಹುಲಿ ಬಾರದೆಂದು ನೀಂ ನಚ್ಚಿ? ||

ರಹಸಿಯದ ಭೂತ ಪಿಡಿಯದ ತೆರದಿ ಬದುಕ ನಿ- |

ವರ್ಹಿಸುವುದೆ ಜಾಣ್ಮೆಯಲ - ಮಂಕುತಿಮ್ಮ ||

‘ಕಾಡಿನ ಎಡ-ಬಲಭಾಗದಲ್ಲಿ ಗುಹೆ ಇರುವ ಸ್ಥಳದ ಕಣಿವೆಯಲ್ಲಿ ಹುಲಿ ಬರಲಾರದೆಂದು ನಂಬಿ ನಡೆದಾಡುತ್ತೀಯೇನು? ರಹಸ್ಯದ ಭೂತ ಹಿಡಿಯದಂತೆ ಬದುಕುವುದೇ ಜಾಣ್ಮೆ’ ಎನ್ನುತ್ತದೆ ಈ ಕಗ್ಗ.

ನಿಬಿಡವಾಗಿ ಬೆಳೆದ ತರುಲತೆಗಳಿಂದ ಕೂಡಿದ ದಟ್ಟ ಹಸಿರಿನ ಕಾಡಿನಲ್ಲಿ ನಡೆಯುವಾಗ ಮನದಲ್ಲಿ ಭಯದ ನೆರಳು ಇಣುಕುವುದಿಲ್ಲವೆ? ಅಂಥ ಕಾಡು ಕಣಿವೆಯಲ್ಲಿ, ಗುಹೆಗಳೊಳಗೆ ಹುಲಿ ಇರಲಾರದು ಎಂದು ನಂಬಿ ಧೈರ್ಯದಿಂದ ನಡೆಯುವುದು ಸಾಧ್ಯವೇ? ಮಸುಕು ಬೆಳಕು ತುಂಬಿದ, ಹಸಿರು ಮಡಿಲಿನ ಮೌನದೊಳಗೆ ನಡೆಯುವಾಗ ಮನಸ್ಸು ಎಚ್ಚರದಿಂದಿರುತ್ತದೆ. ಹುಲಿ ಇಲ್ಲವೇ ಇಲ್ಲ ಎಂದು ಮನಸ್ಸು ನುಡಿದರೂ, ಬುದ್ಧಿ ಎಚ್ಚರಿಕೆಯಿಂದಿರುತ್ತದೆ. ಪರಿಸರದ ಪ್ರಸನ್ನತೆ ಇನ್ನಷ್ಟು ಭಯ ಹುಟ್ಟಿಸಬಹುದೇ ಹೊರತು ನೆಮ್ಮದಿ ನೀಡಲಾರದು.

ಕಾಡು ಕಣಿವೆಯಲ್ಲಿ ಓಡಾಡುವಾಗ ಹುಲಿಯೆರಗಬಹುದೇ ಎಂಬ ಸಂಶಯ ಮೂಡುವುದು, ಸುತ್ತ ಎಚ್ಚರದಿಂದ ನಿರುಕಿಸುವುದು ಸಹಜ ಸ್ವಭಾವವಾಗಿರುವಂತೆ, ಬದುಕಿನಲ್ಲೂ ಎಚ್ಚರದಿಂದ ವ್ಯವಹರಿಸಬೇಕು. ಬಾಳು ಒಂದು ಕಾಡಿನಂತೆ. ಅದನ್ನು ಹಚ್ಚಹಸಿರಾಗಿಸುವುದು, ಮರುಳ್ಗಾಡಾಗಿಸುವುದು ನಮ್ಮ ಕೈಯಲ್ಲೇ ಇದೆ. ನಡೆವ ಹಾದಿಯಲ್ಲಿ ಮುಂದೇನಿರಬಹುದು ಎಂದು ತಿಳಿಯದೆ, ಒಳಿತಾಗಬಹುದೆಂದು ಹಾರೈಸುತ್ತ ನಡೆಯುತ್ತೇವೆ. ಜತೆಗೆ ಒಂದಷ್ಟು ಕನಸು-ಕಲ್ಪನೆಗಳನ್ನು ಹೆಣೆದುಕೊಳ್ಳುವುದು, ಆಸೆ-ನಿರೀಕ್ಷೆಗಳನ್ನು ಬೆನ್ನತ್ತುವುದು ಇದ್ದೇ ಇದೆ. ಹೀಗೆ ನಡೆಯುವಾಗ ಮನುಷ್ಯನು ಒಂದೋ ಹುಚ್ಚು ಕುದುರೆಯಂತೆ ನಾಗಾಲೋಟದಲ್ಲಿ ಓಡತೊಡಗುತ್ತಾನೆ, ಅಥವಾ ಆಕರ್ಷಣೆಗಳಿಗೆ ಬಲಿಯಾಗಿ ಕಳೆದುಹೋಗುತ್ತಾನೆ. ಕೆಲವೊಮ್ಮೆ ಬೆಳಗು-ಬೈಗುಗಳ ನಡುವೆ ಹಾದಿ ಸವೆಸುತ್ತ ಗುರಿಯಿಲ್ಲದೆ ‘ಕಾಲು ಹೋದತ್ತ ದಾರಿ’ ಎಂದು ನಡೆಯುವುದೂ ಇದೆ. ಲೌಕಿಕದ ಮೋಹ ಮಾಯೆ ಮನುಷ್ಯನ ವಿವೇಚನಾಶಕ್ತಿಯನ್ನು ಬಲಹೀನಗೊಳಿಸುತ್ತದೆ. ಬಾಳಿನಲ್ಲಿ ಒಮ್ಮೆಲೆ ಅಪ್ಪಳಿಸಬಹುದಾದ ಅಪಾಯಗಳ ಬಗೆಗೆ ಎಚ್ಚರವಹಿಸುವುದೇ ಇಲ್ಲ. ಏನೂ ಆಗದು ಎಂಬ ಔದಾಸೀನ್ಯವು ಎದ್ದು ಕಾಣುತ್ತದೆ. ಆಗಲೇ ರಹಸ್ಯವಾಗಿರುವ ಭಯ ಹುಟ್ಟಿಸುವ ಭೂತ ಆಕ್ರಮಿಸಿಕೊಳ್ಳುತ್ತದೆ. ಭ್ರಮೆಗೆ ಒಳಗಾದ ಮನಸ್ಸು ವಾಸ್ತವಕ್ಕೆ ಮರಳುತ್ತದೆ. ಆದರೆ ಆ ವೇಳೆಗೆ ಕಷ್ಟ-ನಷ್ಟಗಳಿಗೂ ಒಳಗಾಗಿರುತ್ತದೆ. ಮನಸೋ ಇಚ್ಛೆ ತಿಂದುಂಡು, ನಾಲಗೆ ಚಪಲ ತಣಿಸಿಕೊಳ್ಳುವ ವ್ಯಕ್ತಿಗೆ ದೇಹಾರೋಗ್ಯದ ಬಗೆಗೆ ನಿರ್ಲಕ್ಷ್ಯವಿರುತ್ತದೆ. ಎಚ್ಚರ ತಪ್ಪಿದ ಈ ವಿಪರೀತ ಸ್ಥಿತಿಯಿಂದಾಗಿ ಧುತ್ತೆಂದು ರೋಗ ಆಕ್ರಮಿಸಿಕೊಳ್ಳುತ್ತದೆ. ಆರೋಗ್ಯವನ್ನು ಮರು ಸ್ಥಾಪಿಸಿಕೊಳ್ಳಲು ಹೆಣಗಾಡಬೇಕಾಗುತ್ತದೆ. ಬದುಕಿನಲ್ಲೂ ಅಜಾಗರೂಕತೆಯಿಂದ ಇದ್ದರೆ ಪ್ರಮಾದಗಳು ಸಂಭವಿಸುವುದು ಖಂಡಿತ.

ಕಾಡಿನ ದಾರಿಯಲ್ಲಿ, ಗುಹೆಗಳಲ್ಲಿ ಹುಲಿ ಇರಬಹುದೆಂದು ಎಚ್ಚರಿಕೆ ವಹಿಸುವ, ಸದ್ದಿಲ್ಲದೆ ನಡೆಯತೊಡಗುವ ಮನುಷ್ಯನು, ಬಾಳ ಪಯಣದಲ್ಲಿ ಕೊಲೆ, ಸುಲಿಗೆಗಳಂಥ ಕೃತ್ಯಗಳನ್ನು ಮಾಡಲು ಅಂಜುವುದಿಲ್ಲ. ಕೆಡುಕನ್ನು ಕೈಬೀಸಿ ಕರೆವಂತೆ ವ್ಯಕ್ತಿ ಹೊಣೆಗೇಡಿಯಾಗಿ ವರ್ತಿಸುತ್ತಾನೆ. ಮುನ್ನೆಚ್ಚರಿಕೆ ವಹಿಸಿ, ಸತ್ಪಥದಲ್ಲೇ ಇದ್ದರೂ ಹೊಡೆದುರುಳಿಸುವ ದುರಿತಗಳನ್ನು ತಪ್ಪಿಸಲು ಸಾಧ್ಯವಿಲ್ಲ. ಹೀಗಿರುತ್ತ ತನಗೇನೂ ಆಗದು ಎಂಬ ಹುಂಬತನ ತೋರುವುದು ತಪ್ಪು. ವ್ಯಕ್ತಿ ತನ್ನ ಇತಿ-ಮಿತಿಗಳನ್ನು ಅರಿತಿರಬೇಕು.

ಜೀವನದುದ್ದಕ್ಕೂ ಆತಂಕ, ಸಂಶಯ, ಪರೀಕ್ಷಕ ದೃಷ್ಟಿ ಇರಲೇಬೇಕು. ಸಂದರ್ಭ, ಒಡನಾಡುವ ವ್ಯಕ್ತಿಗಳ ಬಗೆಗೆ ಮುನ್ನೆಚ್ಚರಿಕೆ ಬೇಕು ಎಂಬುದೇನೋ ನಿಜ. ಇದರ ಜತೆಗೆ ವ್ಯಕ್ತಿಯು ಸ್ವ-ವಿಶ್ಲೇಷಣೆ ಮಾಡಿಕೊಳ್ಳುತ್ತ, ತನ್ನಲ್ಲಿರುವ ದೌರ್ಬಲ್ಯಗಳನ್ನು ಮೀರಲು ಯತ್ನಿಸಬೇಕು. ಈ ಜಾಣ್ಮೆ ಬಾಳಿನ ಗೆಲುವಿಗೆ ಅತ್ಯವಶ್ಯ. ಇಂಥವರ ನಡೆ, ನುಡಿಗಳಲ್ಲಿ ಸ್ಪಷ್ಟತೆ ಇರುತ್ತದೆ. ಕುರುಡು ನಂಬಿಕೆಗೆ ಒಳಗಾಗುವ, ಭ್ರಮೆಯನ್ನೇ ಬದುಕಾಗಿಸಿಕೊಳ್ಳುವ ಹುಚ್ಚುತನಗಳು ಮರೆಯಾಗುತ್ತವೆ. ಎಚ್ಚರದ ಬಾಳು, ನೆಮ್ಮದಿಯನ್ನು ಹರಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net