

ಳೊರ್ವನುಂ ಸುಖಿಯಲ್ತು, ದಿಟದಿ, ಪೂರ್ಣದಲಿ||
ಒರ್ವನುಬ್ಬಸದ ಬಿಸಿ ವಿಷವಾಯುವಾಗಿ ತಾ|
ನುರ್ವರೆಯ ಮುಸುಕೀತು-ಮಂಕುತಿಮ್ಮ||853||
ಲೊಕದಲ್ಲಿ ಎಲ್ಲೆಡೆಯೂ ಸೌಖ್ಯವು ನೆಲೆಯಾಗುವವರೆಗೆ, ಈ ಭೂಮಿಯಲ್ಲಿ ಒಬ್ಬನೂ ಸುಖಿಯಲ್ಲ. ನಿಜವಾಗಿಯೂ, ಪೂರ್ಣವಾಗಿ ಸೌಖ್ಯವನ್ನು ಹೊಂದಿದ ಜೀವವು ಇರಲಾರದು. ಒಬ್ಬನ ಉಬ್ಬಸದ ಬಿಸಿಯು ವಿಷವಾಯುವಾಗಿ ಭೂಮಿಯನ್ನು ಮುಸುಕೀತು ಎನ್ನುತ್ತದೆ ಈ ಕಗ್ಗ.
ವಿಶಾಲವಾದ ಕೃಷಿ ಭೂಮಿಯಲ್ಲಿ ಹಲವು ರೈತರು ಭತ್ತದ ಕೃಷಿಯನ್ನು ಮಾಡಿದ್ದರು. ಎಲ್ಲರೂ ಸಾಂಪ್ರದಾಯಿಕ ಪದ್ಧತಿಯನ್ನು ಅನುಸರಿಸುತ್ತಿದ್ದರಾದರೂ, ಒಬ್ಬ ಯುವಕನು ಮಾತ್ರ ಹೊಸ ವಿಧಾನವನ್ನು ಮಾಡುವ ಮಹತ್ವಾಕಾಂಕ್ಷೆಯಲ್ಲಿದ್ದ. ತನ್ನ ಓದಿನ ತಿಳುವಳಿಕೆಯಂತೆ ಹೊಲವನ್ನು ಉತ್ತು ಬಿತ್ತಿ ಬೆಳೆ ಬೆಳೆದ. ದಿನ ಕಳೆಯುತ್ತಿದ್ದಂತೆ ಆ ಯುವಕನ ಹೊಲದ ಫಸಲು ಬಹಳ ಚೆನ್ನಾಗಿ ಬೆಳೆಯಿತು. ಆದರೆ ಅಷ್ಟೇ ತೀವ್ರವಾಗಿ ಮತ್ತು ಶೀಘ್ರವಾಗಿ ರೋಗಕ್ಕೆ ತುತ್ತಾಯಿತು. ಇದರಿಂದ ಆತನೊಬ್ಬನೆ ಚಿಂತೆಗೀಡಾದದ್ದಲ್ಲ. ಸುತ್ತಲಿದ್ದ ರೈತರೆಲ್ಲರೂ ಆತಂಕಗೊಂಡರು. ಆ ಹೊಲದಲ್ಲಿ ಕಾಣಿಸಿದ ರೋಗವು ಉಳಿದ ಆರೋಗ್ಯವಂತ ಹೊಲಗಳಿಗೂ ಹರಡುವ ಸಾಧ್ಯತೆ ಇತ್ತು. ಒಬ್ಬನ ತಪ್ಪು ನಿರ್ಧಾರವು ಸಮಷ್ಠಿಯನ್ನು ಬಾಧಿಸುತ್ತದೆ.
ಪ್ರವಾಹ, ಗುಡ್ಡ ಕುಸಿತ ಮುಂತಾದ ಪ್ರಾಕೃತಿಕ ವಿಕೋಪಗಳಿಗೆ ತುತ್ತಾಗಿ ಅನೇಕ ಜನರು ಜೀವ, ಜೀವನವನ್ನು ಕಳೆದುಕೊಳ್ಳುವುದುಂಟು. ಆಗ ಬದುಕಿ ಉಳಿದವರು ಆ ಕ್ಷಣಕ್ಕೆ ತಮ್ಮ ಸುರಕ್ಷಿತತೆಯ ಬಗೆಗೆ ಸಮಾಧಾನ ಹೊಂದಿದರೂ ಜೊತೆಗಿದ್ದವರ ದಾರುಣ ಸ್ಥಿತಿಗೆ ಮಮ್ಮಲ ಮರುಗುತ್ತಾರೆ, ಭಯಗೊಳ್ಳುತ್ತಾರೆ. ಎಲ್ಲೋ ಕಾಣಿಸಿಕೊಂಡ ಕರೋನಾ ಪೂರ್ತಿ ಜಗತ್ತನ್ನು ಬಾಧಿಸಿದಾಗ ಎದುರಿಸಿದ ಸಂಕಷ್ಟವು ಸಾಮಾನ್ಯವಾದುದಲ್ಲ. ಹೀಗೆಯೇ ಎರಡು ದೇಶಗಳ ನಡುವೆ ಯುದ್ಧವು ಏರ್ಪಟ್ಟು, ಮಾನವೀಯತೆಯನ್ನೂ ಮರೆತು ವಿನಾಶಕ್ಕೆ ತೊಡಗಿಕೊಂಡಾಗ ಅದರ ಪರಿಣಾಮವನ್ನು ಉಳಿದೆಲ್ಲ ದೇಶಗಳೂ ಅನುಭವಿಸಬೇಕಾಗುತ್ತದೆ.
ಯಾಕೆಂದರೆ ಮನುಷ್ಯನು ಸಮೂಹದ ಒಂದಂಶ. ಮಾನಸಿಕವಾಗಿ ಸಶಕ್ತನಾಗಿ ಮತ್ತು ಸ್ವಾಸ್ಥ್ಯದಿಂದ ಬಾಳಬೇಕಾದರೆ ಆತನು ಎಲ್ಲರೊಳಗೊಂದಾಗಿ ಬಾಳಬೇಕು. ಮಾನಸಿಕವಾಗಿ ಒಂಟಿಯಾಗಿರುವುದನ್ನು ರೂಢಿಸಿಕೊಳ್ಳಬಹುದೇನೋ, ಆದರೆ ಯಾರ ಸಹಾಯವೂ ಇಲ್ಲದೆ ಬಾಳುವುದಕ್ಕೆ ಸಾಧ್ಯವಿಲ್ಲ. ಮನಸ್ಸು ಸಹಚರ್ಯವನ್ನು, ಸಾಂತ್ವನದ ಮಡಿಲನ್ನು ಬಯಸುತ್ತದೆ. ಎಲ್ಲರ ಜೊತೆ ಸೇರಿ ಬಾಳುವ ಹಂತದಲ್ಲಿ ಪರಸ್ಪರ ಸುಖ-ದುಃಖಗಳಲ್ಲಿ ಪಾಲ್ಗೊಳ್ಳುವುದು ಸರ್ವೆಸಾಮಾನ್ಯ. ನೆರೆಮನೆಯ ಜನರು ಹಸಿವು, ರೋಗ-ರುಜಿನಗಳಿಂದ ನರಳುತ್ತಿದ್ದರೆ, ಪಕ್ಕದ ಮನೆಯವರಿಗೆ ನೆಮ್ಮದಿಯಿಂದ ಬಾಳಲು ಸಾಧ್ಯವೇ?
ಭಾವನೆಗಳ ಹಂಗಿಗೆ ಒಳಗಾಗದೆ ತಾನು, ತನ್ನ ಸಂತೋಷ ಎಂದು ಬದುಕುವ ಕಠಿಣ ಹೃದಯಿಯನ್ನು ಕೂಡ ನೋವು, ನಷ್ಟ-ಕಷ್ಟಗಳು ಅಲುಗಾಡಿಸುತ್ತವೆ. ಲೋಕದಲ್ಲಿ ಯಾರೂ ಸುಖಿಗಳಲ್ಲ. ಪ್ರತಿಯೊಬ್ಬರ ಹೃದಯದಲ್ಲೂ ಒಂದಿಲ್ಲೊಂದು ನೋವು ಹೆಪ್ಪುಗಟ್ಟಿರುತ್ತದೆ. ಯಾವುದೇ ಸಮಸ್ಯೆಯನ್ನು ವ್ಯಕ್ತಿಯು ಹೇಗೆ ಸ್ವೀಕರಿಸುತ್ತಾನೆ ಎನ್ನುವುದರ ಮೇಲೆ ಅದರ ಗಂಭೀರತೆಯು ಸ್ಪಷ್ಟವಾಗುತ್ತದೆ. ಏನಿಲ್ಲದಿದ್ದರೂ ಇತರರ ಸಂಕಟವನ್ನು ಕಂಡು ಮರುಗುತ್ತಾನೆ, ಖಿನ್ನನಾಗುತ್ತಾನೆ. ಹಾಗಾಗಿ ಸಾರ್ವಲೌಕಿಕ ಸೌಖ್ಯವು ಇರಲು ಸಾಧ್ಯವಿಲ್ಲ. ಸೌಖ್ಯವೆನ್ನುವ ಪೂರ್ಣತೆಯನ್ನು ಹೊಂದುವುದಕ್ಕೆ ಮನುಷ್ಯನು ನಿರಂತರವಾಗಿ ಮಾಡುವ ಪ್ರಯತ್ನವೇ ಜೀವನ. ಒಂದೊಮ್ಮೆ ಈ ಯತ್ನದಲ್ಲಿ ವ್ಯಕ್ತಿಯು ಸೋತನಾದರೆ ಆತನ, ಸಂಕಟದ ನಿಟ್ಟುಸಿರು ವಿಷದ ಗಾಳಿಯಂತೆ ಭೂಮಿಯನ್ನು ಮುಸುಕುತ್ತದೆ. ಹಲವರ ಅಶಾಂತಿಗೆ ಕಾರಣವಾಗುತ್ತದೆ. ಹತಾಶ ಮನಸ್ಸು ದ್ವೇಷ-ನಾಶದೆಡೆಗೆ ವಾಲಿದರಂತೂ ಸುತ್ತಲಿರುವ ಸಮಾಜವು ತೊಂದರೆಯನ್ನು ಅನುಭವಿಸಬೇಕಾಗುತ್ತದೆ.
ತಿನ್ನುವ ಆಹಾರದಿಂದ ತೊಡಗಿ ಜೀವನದ ಮೂಲ ಅವಶ್ಯಕತೆಗಳಿಗೆಲ್ಲದಕ್ಕೂ ವ್ಯಕ್ತಿಯು ಲೋಕಸಂಸಾರದಲ್ಲಿ ಮಿಳಿತನಾಗಲೆಬೇಕು. ಒಂದು ಮನೆಯ ಸ್ವಾಸ್ಥ್ಯವನ್ನು ಕಾಪಾಡುವ ಹೊಣೆಯು ಆ ಮನೆಯ ಎಲ್ಲ ಸದಸ್ಯರ ಮೇಲೆಯೂ ಇದೆ. ಅವರಲ್ಲಿ ಒಬ್ಬರು ಸ್ವಾರ್ಥಿಗಳಾದರೂ ಸಾಕು, ಮನೆಯು ಒಡೆದು ಹೋಗುತ್ತದೆ, ನೆಮ್ಮದಿಯು ಮರೆಯಾಗುತ್ತದೆ. ಅಂತೆಯೇ ಲೋಕವೆಂಬ ಮನೆಯೊಳಗೆ ಪ್ರತಿಯೊಬ್ಬರೂ ತಮ್ಮ ಹೊಣೆಯನ್ನು ಅರಿತು ನಡೆಯಬೇಕು. ಲೋಕ ಪ್ರಗತಿಯಲ್ಲಿ ತನ್ನ ಪ್ರಗತಿ, ಲೋಕದ ಸೌಖ್ಯದಲ್ಲಿ ತನ್ನ ಸೌಖ್ಯವೆನ್ನುವುದನ್ನು ಅರಿತಿರಬೇಕು.
ಪ್ರತಿಯೊಬ್ಬರಿಗೂ ಮನಸ್ಸು, ಇಂದ್ರಿಯಗಳಿಗೆ ಸೀಮಿತವಾದ ವೈಯಕ್ತಿಕ ವ್ಯಕ್ತಿತ್ವ ಮತ್ತು ಶಿಕ್ಷಣ, ಉದ್ಯೋಗ, ಅಧಿಕಾರಕ್ಕೆ ಸಂಬಂಧಿಸಿದ ಸಾಮಾಜಿಕ ವ್ಯಕ್ತಿತ್ವವಿರುತ್ತದೆ. ಈ ಎರಡು ಬಗೆಯಲ್ಲೂ ವ್ಯಕ್ತಿಯು ಸ್ವಾರ್ಥವನ್ನು ಮೆರೆಯುತ್ತಾ ಸ್ವಕೇಂದ್ರಿತವಾಗಿಯೇ ಯೋಚಿಸುವುದರಿಂದಾಗಿ ಜಗತ್ತಿನಲ್ಲಿ ದುಃಖವು ಹೆಚ್ಚಾಗಿದೆ. ಯಾವಾಗ ವ್ಯಕ್ತಿಯು ತನ್ನ ಸ್ವಾರ್ಥದ ಪರಿಧಿಯನ್ನು ಮೀರಿ ವಿಶ್ವವ್ಯಾಪಿಯಾಗಿ ಯೋಚಿಸುತ್ತಾನೆಯೋ, ವಿಶ್ವವು ತನ್ನ ಕುಟುಂಬ ಎಂಬ ಭಾವದಿಂದ ಬಾಳುತ್ತಾನೋ ಆಗ ಸುಖ ಸಂತೋಷವನ್ನು ಅನುಭವಿಸುತ್ತಾನೆ. ಆ ಆನಂದವನ್ನು ಹೊಂದಲು ವ್ಯಕ್ತಿಯು ಮಾಡುವ ಪ್ರಯತ್ನವು ಆತನನ್ನು ಧನ್ಯತೆಯತ್ತ ಮುನ್ನಡೆಸುತ್ತದೆ.