

ಹನೂರು: ಇಲ್ಲಿನ ತಾಲೂಕು ಪಂಚಾಯಿತಿ ರಚನೆಯಾಗಿ 3 ವರ್ಷ ಕಳೆದಿದೆ. ಆದರೆ ಸ್ವಂತ ಕಟ್ಟಡ ಇಲ್ಲದ ಪರಿಣಾಮ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇದರಿಂದ ಅಧಿಕಾರಿಗಳು ಹಾಗೂ ನೌಕರರ ಸಮರ್ಪಕ ಕೆಲಸ ಕಾರ್ಯಗಳ ನಿರ್ವಹಣೆಗೆ ತೊಡುಕಾಗಿ ಪರಿಣಮಿಸಿದೆ.
ಜಿಲ್ಲೆಯಲ್ಲಿಯೇ ಹೆಚ್ಚು ವಿಸ್ತೀರ್ಣ ಹೊಂದಿರುವ ಹನೂರು ತಾಲೂಕು 2018ರಲ್ಲಿ ಕೊಳ್ಳೇಗಾಲ ತಾಲೂಕಿನಿಂದ ಪ್ರತ್ಯೇಕಗೊಂಡು ಹೊಸದಾಗಿ ರಚನೆಯಾಯಿತು. ಬಳಿಕ ಕ್ಷೇತ್ರದ ಜನಪ್ರತಿನಿಧಿಗಳು ಹಾಗೂ ಜನತೆಯ ಆಶಯದಂತೆ 2019 ರಲ್ಲಿ ಕೊಳ್ಳೇಗಾಲ ತಾಲೂಕು ಪಂಚಾಯಿತಿಯಿಂದ ಬೇರ್ಪಟ್ಟು 17 ತಾಪಂ ಕ್ಷೇತ್ರ ಹಾಗೂ 25 ಗ್ರಾಪಂ ಒಳಗೊಂಡಂತೆ ಹನೂರು ತಾಲೂಕು ಪಂಚಾಯಿತಿಯನ್ನು ಪ್ರತ್ಯೇಕವಾಗಿ ರಚಿಸಲಾಯಿತು. ಅಧ್ಯಕ್ಷ, ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ಆದರೆ ಕಚೇರಿಯನ್ನು ತೆರೆಯಲು ಸ್ಥಳಾವಕಾಶದ ಕೊರತೆ ಎದುರಾಯಿತು. 2020ರಲ್ಲಿ ಪಟ್ಟಣದ ಮೈಸೂರು ಮಾರಮ್ಮನ ದೇಗುಲಕ್ಕೆ ತೆರಳುವ ರಸ್ತೆಯಲ್ಲಿರುವ ಖಾಸಗಿ ಕಟ್ಟಡದ ಮೇಲಂತಸ್ತಿನ ವಿಶಾಲವಾದ ಹಾಲ್‌ನಲ್ಲಿ ಕಚೇರಿಯನ್ನು ಆರಂಭಿಸಲಾಯಿತು. ಇಲ್ಲಿ ತಾಪಂ ಕಾರ್ಯನಿರ್ವಾಹಕ ಅಧಿಕಾರಿ, ಸಹಾಯಕ ನಿರ್ದೇಶಕ, ವ್ಯವಸ್ಥಾಪಕ ಸೇರಿದಂತೆ 15ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಈ ಕಟ್ಟಡದಲ್ಲಿ ಅಗತ್ಯ ಮೂಲ ಸೌಕರ್ಯವಿಲ್ಲ. ಜತೆಗೆ, ಅಧಿಕಾರಿಗಳು ಹಾಗೂ ನೌಕರರು ಕಾರ್ಯನಿರ್ವಹಿಸಲು ಪ್ರತ್ಯೇಕ ಕೊಠಡಿ ಅಥವಾ ಕೌಂಟರ್ ವ್ಯವಸ್ಥೆ ಇಲ್ಲ. ಆದಾಗ್ಯೂ ವಿಧಿಯಿಲ್ಲದೆ ಕಾರ್ಯನಿರ್ವಹಿಸುತ್ತಿರುವುದು ವಿಪರ್ಯಾಸ.
ಕಾರ್ಯನಿರ್ವಹಣೆಗೆ ತೊಡುಕು:
ವಿಶಾಲವಾದ ಹಾಲ್‌ನಲ್ಲಿ ತೆರೆದಿರುವ ಈ ಕಚೇರಿಯಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸೇರಿದಂತೆ ಇನ್ನಿತರ ಅಧಿಕಾರಿ ಹಾಗೂ ವಸ್ತು ವಿಷಯ ನಿರ್ವಹಣೆ ಸಿಬ್ಬಂದಿಗೆ ಯಾವುದೇ ಪ್ರತ್ಯೇಕ ಕೊಠಡಿ ವ್ಯವಸ್ಥೆ ಇಲ್ಲ. ಪರಿಣಾಮ, ತೆರೆದ ವಾತಾವರಣದಲ್ಲಿ ಅಲ್ಲಲ್ಲಿ ಟೇಬಲ್‌ಗಳನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಲಾಗುತ್ತಿದೆ. ಜತೆಗೆ, ಸ್ಥಳಾವಕಾಶ ಇಲ್ಲದ ಪರಿಣಾಮ ಅಲ್ಮೇರಾ ಹಾಗೂ ಅಗತ್ಯ ಸಾಧನ, ಸಾಮಗ್ರಿಗಳನ್ನು ಇಟ್ಟುಕೊಳ್ಳಲು ಸಮಸ್ಯೆಯಾಗಿದೆ. ಕಡತಗಳನ್ನು ಜೋಡಿಸಿಡುವುದು ಸೇರಿದಂತೆ ಇನ್ನಿತರ ಕಡತ ಸಂಬಂಧಿ ಕೆಲಸ ಕಾರ್ಯಗಳಿಗೆ ತೊಂದರೆಯಾಗಿದೆ.
ಬೇಕಿದೆ ಸ್ವಂತ ಕಟ್ಟಡ:
ಈಗಿರುವ ಕಚೇರಿಯಲ್ಲಿ ಪ್ರತ್ಯೇಕ ಕೊಠಡಿ ಹಾಗೂ ಸಭಾಂಗಣ ವ್ಯವಸ್ಥೆ ಇಲ್ಲದಿರುವುದರಿಂದ ತಾಪಂ ಅಧಿಕಾರಿಗಳು, ಸಿಬ್ಬಂದಿ ಸಭೆ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆ, ರಾಷ್ಟ್ರೀಯ ಹಬ್ಬಗಳು, ಮಹನೀಯರ ಜಯಂತಿ ಹಾಗೂ ಇನ್ನಿತರ ಕಾರ್ಯಕ್ರಮಗಳನ್ನು ಹಾಲ್‌ನಲ್ಲಿನ ಇಕ್ಕಟ್ಟಾದ ಜಾಗದಲ್ಲಿಯೇ ಆಯೋಜಿಸುತ್ತಿರುವುದು ಒಂದಡೆಯಾದರೆ, ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುವ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಕುಳಿತುಕೊಳ್ಳಲು ಪ್ರತ್ಯೇಕ ಆಸನ ವ್ಯವಸ್ಥೆ ಇಲ್ಲ. ಇತ್ತ ಕಚೇರಿಯಲ್ಲಿ ಶೌಚಗೃಹವನ್ನು ಹೊರತುಪಡಿಸಿದರೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಈ ದಿಸೆಯಲ್ಲಿ ತಾಪಂ ಕಚೇರಿಗೆ ಸ್ವಂತ ಕಟ್ಟಡ ಅವಶ್ಯಕತೆ ಇದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರಿಂದ ತೀವ್ರ ಒತ್ತಾಯ ಕೇಳಿಬಂದಿದೆ.
ಮೆಟ್ಟಿಲುಗಳನ್ನೇರುವುದೇ ತ್ರಾಸದಾಯಕ:
ಮೇಲಂತಸ್ತಿನಲ್ಲಿರುವ ಕಚೇರಿಗೆ ತೆರಳುವ ಸಲುವಾಗಿ ಕಬ್ಬಿಣದ ಸಲಾಕೆಗಳಿಂದ ಮೆಟ್ಟಿಲುಗಳನ್ನು ಅಳವಡಿಸಲಾಗಿದೆ. ಆದರೆ ಈ ಮೆಟ್ಟಿಲುಗಳು ಇಳಿಜಾರಿನಿಂದ ಕೂಡಿರದೆ ಎತ್ತರದಿಂದ ಕೂಡಿವೆ. ಇದರಿಂದ ಸಾರ್ವಜನಿಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಹತ್ತಿ, ಇಳಿಯುವುದೇ ಬಲು ತ್ರಾಸದಾಯಕವಾದ ಕೆಲಸವಾಗಿದೆ. ಅದರಲ್ಲೂ ಕೆಲಸ ಕಾರ್ಯಗಳ ನಿಮಿತ್ತ ಕಚೇರಿಗೆ ಆಗಮಿಸುವ ವಿಕಲಚೇತನರು, ವಯೋವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ತಾಪಂ ಕಚೇರಿಗೆ ತೆರಳುವುದೇ ಪ್ರಯಾಸದ ಕೆಲಸವಾಗಿದೆ.
ಪಾರ್ಕಿಂಗ್ ವ್ಯವಸ್ಥೆ ಇಲ್ಲ:
ಕಚೇರಿಗೆ ಸಾರ್ವಜನಿಕರು, ಅಧಿಕಾರಿಗಳು ಹಾಗೂ ನೌಕರರು ಬಹುತೇಕ ಬೈಕ್ ಇಲ್ಲವೇ ಕಾರಿನ ಮೂಲಕ ಆಗಮಿಸುತ್ತಾರೆ. ಆದರೆ ಇಕ್ಕಟ್ಟಾದ ಸ್ಥಳದಲ್ಲಿ ಕಚೇರಿ ಇರುವುದರಿಂದ ಪಾರ್ಕಿಂಗ್ ಸೌಕರ್ಯವಿಲ್ಲ. ಹಾಗಾಗಿ, ಕೆಲವರು ಕಚೇರಿ ಮುಂಭಾಗ ಹಾಗೂ ಇದರ ಆಸುಪಾಸು ವಾಹನಗಳನ್ನು ರಸ್ತೆ ಬದಿಯೇ ನಿಲ್ಲಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಪಾದಚಾರಿಗಳು ಸಂಚರಿಸಲು ಕಿರಿಕಿರಿ ಅನುಭವಿಸುತ್ತಿರುವುದು ಒಂದೆಡೆಯಾದರೆ, ವಾಹನಗಳ ಸುಗಮ ಸಂಚಾರಕ್ಕೂ ತೊಂದೆಯಾಗಿದೆ. ಇನ್ನು ಕೆಲವರು ಮನೆಯ ಮುಂಭಾಗ ವಾಹನಗಳನ್ನು ನಿಲ್ಲಿಸುತ್ತಿದ್ದು, ಆ ಮನೆಯವರು ವಾಹನಗಳನ್ನು ನಿಲ್ಲಿಸದಂತೆ ಹೇಳುವ ಮಾತನ್ನು ನಿತ್ಯ ಕೇಳಬೇಕಿದೆ. ಇದರಿಂದ ಪಾರ್ಕಿಂಗ್ ಸೌಕರ್ಯ ಇಲ್ಲದಿರುವುದು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ತಾಪಂ ಕಚೇರಿಯ ಪ್ರಮುಖ ಸಮಸ್ಯೆಯಾಗಿದೆ.
ವಾರ್ಷಿಕ 3 ಲಕ್ಷ ರೂ. ಬಾಡಿಗೆ:
ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಟ್ಟಡಕ್ಕೆ ತಿಂಗಳಿಗೆ 25 ಸಾವಿರ ರೂ. ಬಾಡಿಗೆ ಪಾವತಿಸಲಾಗುತ್ತಿದ್ದು, ವಾರ್ಷಿಕ 3 ಲಕ್ಷ ರೂ. ವೆಚ್ಚ ತಗುಲುತ್ತಿದೆ. ಇದರಿಂದ ಸರ್ಕಾರದ ಹಣ ಒಂದೆಡೆ ವ್ಯಯವಾಗುತ್ತಿದೆ. ಹಾಗಾಗಿ, ಸ್ವಂತ ಕಟ್ಟಡ ನಿರ್ಮಿಸಿದರೆ ಈ ಹಣವನ್ನು ಕಚೇರಿ ನಿರ್ವಹಣೆ ಹಾಗೂ ಅಭಿವೃದ್ಧಿ ಕಾರ್ಯಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. ಆದ್ದರಿಂದ ಸಂಬಂಧಪಟ್ಟ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಶಾಸಕರು ಈ ಬಗ್ಗೆ ಗಮನಹರಿಸಿ ತಾಪಂ ಕಚೇರಿಗೆ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮ ವಹಿಸುವುದರ ಮೂಲಕ ಅನುಕೂಲ ಕಲ್ಪಿಸಬೇಕಿದೆ.
ಒಟ್ಟಾರೆ ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ತಾಪಂ ಕಚೇರಿಗೆ ಪ್ರತ್ಯೇಕ ಸ್ವಂತ ಕಟ್ಟಡವಿದೆ. ಆದರೆ ಹನೂರಿನಲ್ಲಿ ಇಲ್ಲದಿರುವುದು ವಿಪರ್ಯಾಸ. ಆದ್ದರಿಂದ ಇನಾದ್ನರೂ ಸಂಬಂಧಿಸಿದವರು ಗಮನ ನೀಡಿ ಹನೂರು ತಾಪಂಗೆ ಸ್ವಂತ ಕಟ್ಟಡ ಒದಗಿಸಲು ಕ್ರಮ ಕೈಗೊಳ್ಳಬೇಕಿದೆ.
ಹನೂರು ತಾಲೂಕು ಪಂಚಾಯಿತಿ ಕಚೇರಿಗೆ ಸ್ವಂತ ಕಟ್ಟಡ ಇಲ್ಲದಿರುವುದು ಗಮನದಲ್ಲಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗಿದೆ. ಈ ಸಂಬಂಧ ಹೆಚ್ಚಿನ ಕಾಳಜಿ ವಹಿಸಿದ್ದು, ಆದಷ್ಟು ಬೇಗ ಸ್ವಂತ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಕ್ರಮವಹಿಸಲಾಗಿದೆ.ಎಂ.ಆರ್.ಮಂಜುನಾಥ್, ಹನೂರು ಶಾಸಕ