ಹನೂರು ತಲುಪಿದ ಪಾದಯಾತ್ರೆ

24 HANUR 4
Published on

ಹನೂರು: ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಜಿಲ್ಲಾ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಮಲೆಮಹದೇಶ್ವರ ಬೆಟ್ಟದಿಂದ ಚಾಮರಾಜನಗರದವರೆಗೆ ಕೈಗೊಂಡಿರುವ ರೈತರ ಪಾದಯಾತ್ರೆಯು ಬುಧವಾರ ಹನೂರು ಪಟ್ಟಣಕ್ಕೆ ಆಗಮಿಸಿತು.

ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಆಗಮಿಸಿದ ಪಾದಯಾತ್ರಿಗಳು ಮಾನವ ಸರಪಳಿ ರಚಿಸಿ ಜನಪ್ರತಿನಿಧಿಗಳು ಹಾಗೂ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಜತೆಗೆ ಹಸಿರು ಟವಲ್ ಬೀಸುತ್ತಾ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಮ.ಬೆಟ್ಟ ಸೇರಿದಂತೆ ತಾಲೂಕಿನ ಕಾಡಂಚಿನ ಗ್ರಾಮಗಳಲ್ಲಿ ಮೂಲ ಸೌಕರ್ಯದ ಕೊರತೆ ಇದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಲಾಗಿದೆ. ಆದರೆ ಈವೆರೆಗೆ ಯಾವುದೇ ಪ್ರಯೋಜನವಾಗಿಲ್ಲ. ಈ ದಿಸೆಯಲ್ಲಿ ಪಾದಯಾತ್ರೆ ಕೈಗೊಳ್ಳಲಾಗಿದೆ ಎಂದರು.

ಸ್ಥಳೀಯ ಶಾಸಕ ಎಂ.ಆರ್.ಮಂಜುನಾಥ್ ಅವರ ಹೆಸರನ್ನು ಪ್ರಸ್ತಾಪಿಸದೆ ಚುನಾವಣೆ ವೇಳೆ ಕ್ಷೇತ್ರದ್ಯಾಂತ ಪ್ರವಾಸ ಮಾಡಿದ್ದೀರಾ? ಯಾವ ಗ್ರಾಮಕ್ಕೆ ಬಸ್ ಸೌಕರ್ಯ ಇಲ್ಲ, ವಿದ್ಯುತ್ ಇಲ್ಲ. ರಸ್ತೆ ಇಲ್ಲ ಎಂಬುದು ತಿಳಿದಿಲ್ಲವೇ? ಇತ್ತ ನದಿ ಮೂಲದಿಂದ ನೀರು ತುಂಬಿಸುವ ಯೋಜನೆಯಡಿ ಹುಬ್ಬೆಹುಣಸೆ ಡ್ಯಾಂಗೆ ನೀರು ತುಂಬಿಸುವ ಕಾರ್ಯ ನನೆಗುದಿಗೆ ಬಿದ್ದಿದೆ. ಹಾಗಾಗಿ ಇತ್ತ ಗಮನಹರಿಸಿ ಸಮಸ್ಯೆಗಳನ್ನು ಬಗೆಹರಿಸಲು ಮುಂದಾಗಬೇಕು. ಕ್ಷೇತ್ರದ ಜನರು ನಿಮ್ಮಲ್ಲಿ ವಿಶ್ವಾಸವಿಟ್ಟು ಆಶೀರ್ವದಿಸಿ ಗೆಲ್ಲಿಸಿದ್ದಾರೆ. ಆದ್ದರಿಂದ 5 ವರ್ಷಗಳ ಕಾಲ ಉತ್ತಮ ಕೆಲಸ ಮಾಡಿ. ಇಲ್ಲವಾದಲ್ಲಿ ಜನರೇ ತೀರ್ಮಾನಿಸುತ್ತಾರೆ ಎಂದು ಪರೋಕ್ಷವಾಗಿ ಎಚ್ಚರಿಸಿದರು.

ಬಳಿಕ ರೈತರು ಕೊಳ್ಳೇಗಾಲದತ್ತ ಪಾದಯಾತ್ರೆಯನ್ನು ಮುಂದುವರಿಸಿದರು. ಈ ಸಂದರ್ಭದಲ್ಲಿ ರೈತ ಮುಖಡರಾದ ಶಾಂತಕುಮಾರ್, ಶ್ರೀನಿವಾಸ್, ಚಿಕ್ಕರಾಜು, ಶಿವಪ್ಪ, ಜಗದೀಶ್, ಪ್ರಕಾಶ್, ಸೆಲ್ವಕುಮಾರ್ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net