

ಹನೂರು: ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಿ ಓದಿನ ಕಡೆ ಹೆಚ್ಚು ಗಮನ ನೀಡುವುದರ ಜತೆಗೆ ವಿವಿಧ ಕ್ಷೇತ್ರಗಳ ಸಾಧಕರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು. ಇದರಿಂದ ಜೀವನದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಶಾಸಕ ಎಂ.ಆರ್.ಮಂಜುನಾಥ್ ಸಲಹೆ ನೀಡಿದರು.
ತಾಲೂಕಿನ ಕೌದಳ್ಳಿ ಗ್ರಾಮದ ಶಾದಿಮಹಲ್‌ನಲ್ಲಿ ಗುರುವಾರ ಸಾರ್ವಜನಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ವತಿಯಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತಾ ಸಂಬಂಧ ಗುರುವಾರ ಆಯೋಜಿಸಿದ್ದ ಭರವಸೆ ತುಂಬುವ ವಿಶೇಷ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ವಿದ್ಯಾರ್ಥಿ ಜೀವನದಲ್ಲಿ ಎಸ್ಸೆಸ್ಸೆಲ್ಸಿ ಪ್ರಮುಖ ಘಟ್ಟ. ಈ ವೇಳೆ ಕೈಗೊಳ್ಳುವ ನಿರ್ಧಾರಗಳು ನಿಮ್ಮ ಭವಿಷ್ಯವ್ನ ನಿರ್ಧಸುತ್ತದೆ. ಹಾಗಾಗಿ, ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಹೊಂದಲು ಸಂಕಲ್ಪ ಮಾಡಬೇಕಿದೆ. ಈ ದಿಸೆಯಲ್ಲಿ ಗುರುಗಳ ಹಾಗೂ ಪಾಲಕರ ಮಾರ್ಗದರ್ಶನ ಮುಖ್ಯ. ಜತೆಗೆ ಶಿಕ್ಷಣ, ಸಾಹಿತ್ಯ, ವೈದ್ಯಕೀಯ, ವಿಜ್ಞಾನ, ತಂತ್ರಜ್ಞಾನ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮೇರು ವ್ಯಕ್ತಿಗಳಿದ್ದಾರೆ. ಸಾಧನೆಗೈಯ್ಯಲು ಇವರು ಸ್ಫೂರ್ತಿಯಾಗಿದ್ದಾರೆ. ಈಗಾಗಲೇ ಎಸ್ಸೆಸ್ಸೆಲ್ಸಿ ಪರೀಕ್ಷಾ ವೇಳಾಪಟ್ಟಿ ಬಿಡುಗಡೆಯಾಗಿದೆ. ಆದ್ದರಿಂದ ಇದರನ್ವಯ ಪ್ರತಿಯೊಬ್ಬರೂ ಸಮಯ ವ್ಯರ್ಥ ಮಾಡದೇ ಸ್ವಯಂ ವೇಳಾಪಟ್ಟಿ ತಯಾರಿಸಿಕೊಂಡು ವಿಷಯವಾರು ಪರೀಕ್ಷೆಗೆ ಸಜ್ಜಾಗಬೇಕು. ಉತ್ತಮ ಅಂಕ ಗಳಿಸುವುದರ ಮೂಲಕ ಶಾಲೆಗೆ, ಪಾಲಕರಿಗೆ ಹಾಗೂ ತಾಲೂಕಿಗೆ ಕೀರ್ತಿ ತೆರಬೇಕು. ಹನೂರು ಶೈಕ್ಷಣಿಕ ವಲಯ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಜಿಲ್ಲೆಯಲ್ಲೇ ಪ್ರಥಮ ಸ್ಥಾನ ಗಳಿಸಬೇಕು ಎಂದು ತಿಳಿಸಿದರು.
ಜನರಿಗೆ ಸೇವೆ ಮಾಡುವ ಉದ್ದೇಶದಿಂದ ನಾನು ಶಾಸಕನಾಗಬೇಕೆಂಬ ಗುರಿಯನ್ನು ಇಟ್ಟುಕೊಂಡು ಛಲ ಹಾಗೂ ಪರಿಶ್ರಮದಿಂದ ಕಾರ್ಯನಿರ್ವಹಿಸಿದೆ. ಅದರ ಫಲ ಇದೀಗ ಶಾಸಕನಾಗಿದ್ದೇನೆ. ಆದ್ದರಿಂದ ಪ್ರತಿಯೊಬ್ಬರೂ ನಿರ್ದಿಷ್ಟ ಗುರಿಯನ್ನು ಇಟ್ಟುಕೊಂಡು ಕಾರ್ಯನಿರ್ವಹಿಸಿದರೆ ಯಶಸ್ಸು ಗಳಿಸಲು ಸಾಧ್ಯ ಎಂದರು.
ಡಿಡಿಪಿಐ ರಾಮಚಂದ್ರರಾಜೇ ಅರಸ್ ಮಾತನಾಡಿ, ಹನೂರು ವಲಯ ಹೆಚ್ಚು ಗುಡ್ಡಗಾಡು ಪ್ರದೇಶದಿಂದ ಕೂಡಿದ್ದು, ಇಲ್ಲಿನ ವಿದ್ಯಾರ್ಥಿಗಳು ಹೆಚ್ಚು ಬುದ್ಧಿವಂತರಿದ್ದಾರೆ. ಉತ್ತಮ ಶಿಕ್ಷಕರಿದ್ದಾರೆ. ಜತೆಗೆ ಸರ್ಕಾರ ಹಲವು ಸವಲತ್ತುಗಳನ್ನು ನೀಡುತ್ತಿದೆ. ಆದ್ದರಿಂದ ಈ ಸಲ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಹನೂರು ಶೈಕ್ಷಣಿಕ ವಲಯ ಜಿಲ್ಲೆಯಲ್ಲಿಯೇ ಪ್ರಥಮ ಸ್ಥಾನ ಗಳಿಸಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಸಂಪನ್ಮೂಲ ಶಿಕ್ಷಕರಿಂದ ಆಯಾ ಭಾಷೆಯ ಪರೀಕ್ಷಾ ಕ್ರಮ, ಸ್ವಮೌಲ್ಯಮಾಪನ, ಹೆಚ್ಚು ಅಂಕ ಗಳಿಸುವ ರೀತಿ, ಓದುವ ಕ್ರಮ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆ ತಯಾರಿ ಬಗ್ಗೆ ಮಕ್ಕಳಿಗೆ ತಿಳಿಸಿಕೊಡಲಾಯಿತು. ಬಿಇಒ ಶಿವರಾಜು, ಶಿಕ್ಷಣ ಸಂಯೋಜಕರಾದ ಕಿರಣ್‌ಕುಮಾರ್, ಕಂದವೇಲು, ವಿವಿಧ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಇದ್ದರು.