ಹೆದರಿಸಲಿದ್ದಾರೆ ಹನ್ಸಿಕಾ: ಬ್ಯಾಕ್ ಟು ಬ್ಯಾಕ್ ಸಸ್ಪೆನ್ಸ್-ಥ್ರಿಲ್ಲರ್‌ನಲ್ಲಿ ‘ಬಿಂದಾಸ್’ ಹುಡುಗಿ

ಹನ್ಸಿಕಾ ಮೋಟ್ವಾನಿ
ಹನ್ಸಿಕಾ ಮೋಟ್ವಾನಿ
Published on

ಪ್ರಮುಖ ಮುಖ್ಯಾಂಶಗಳು

  • ವಿಚ್ಛೇದನ ಬಳಿಕ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಹನ್ಸಿಕಾ
  • ಕನ್ನಡದ ಪ್ಯಾರಡಾಕ್ಸ್, ತೆಲುಗಿನ ಕಪಾಲಿ ಚಿತ್ರದಲ್ಲಿ ನಟನೆ
  • ಎರಡು ಚಿತ್ರಗಳು ಸಸ್ಪೆನ್ಸ್-ಥ್ರಿಲ್ಲರ್ ಎನ್ನುವುದು ವಿಶೇಷ
ಕನ್ನಡದ ‘ಬಿಂದಾಸ್’ ಸೇರಿ ತೆಲುಗು, ತಮಿಳು, ಹಿಂದಿಯ 50ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ ಖ್ಯಾತಿ ಹನ್ಸಿಕಾ ಮೋಟ್ವಾನಿಗೆ ಸಲ್ಲುತ್ತದೆ. ಇಂತಹ ಹನ್ಸಿಕಾ ಕಳೆದ ಎರಡು ವರ್ಷಗಳಿಂದ ಬೆಳ್ಳಿತೆರೆ ಮೇಲೆ ಕಾಣಿಸಿಕೊಂಡಿಲ್ಲ. 2024ರಲ್ಲಿ ತೆರೆಕಂಡಿದ್ದ ತಮಿಳಿನ ‘ಗಾರ್ಡಿಯನ್’ ಚಿತ್ರವೇ ಅವರು ಕಾಣಿಸಿಕೊಂಡಿದ್ದ ಕೊನೆಯ ಸಿನಿಮಾ. ಇದಾದ ಬಳಿಕ ನಟಿಯ ದಾಂಪತ್ಯ ಬದುಕಿನಲ್ಲಿ ಬಿರುಗಾಳಿ ಬೀಸಿತು. ಕೆಲ ತಿಂಗಳ ಹಿಂದೆಯಷ್ಟೇ ಪತಿ ಸೊಹೇಲ್ ಖತುರಿಯಾ ಜತೆಗಿನ ವೈವಾಹಿಕ ಜೀವನಕ್ಕೆ ಗುಡ್‌ಬೈ ಹೇಳಿದ್ದರು. ಇದೀಗ ವಿಚ್ಛೇದನ ಬೆನ್ನಲ್ಲೇ ನಟಿ ಹನ್ಸಿಕಾ ಕುಗ್ಗದೆ ಹೊಸ ಜೀವನ ಆರಂಭಿಸಿದ್ದು, ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದರಲ್ಲೂ ಅವರ ಮುಂದಿನ ಎರಡು ಸಿನಿಮಾಗಳು ಸಸ್ಪೆನ್ಸ್-ಥ್ರಿಲ್ಲರ್ ಎನ್ನುವುದು ವಿಶೇಷ. ಸದ್ಯ ಹನ್ಸಿಕಾ ತೆಲುಗಿನ ಸೈಕಲಾಜಿಕಲ್ ಹಾರರ್ ಥ್ರಿಲ್ಲರ್ ‘ಕಪಾಲಿ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರದ ಫಸ್ಟ್ ಲುಕ್ ರಿವೀಲ್ ಮಾಡಲಾಗಿದೆ. ಪೋಸ್ಟರ್‌ಗೆ ‘ಅಪರಿಚಿತನ ಪಯಣ’ ಎಂಬ ಅಡಿಬರಹ ನೀಡಲಾಗಿದೆ. ಸದ್ಯ ಇದರಲ್ಲಿ ಹನ್ಸಿಕಾ ಪಾತ್ರದ ಕುರಿತಂತೆ ಹೆಚ್ಚು ಮಾಹಿತಿ ಹಂಚಿಕೊಂಡಿಲ್ಲವಾದರೂ, ಅವರು ಹೆದರಿಸುವ ಅವತಾರದಲ್ಲಿದ್ದಾರೆ ಎಂದು ವರದಿಯಾಗಿದೆ. ಒಂದು ಕಾಲದಲ್ಲಿ ಲವ್‌ಗರ್ಲ್, ಗ್ಲಾಮರ್ ಹುಡುಗಿಯಾಗಿ ಕಾಣಿಸಿಕೊಳ್ಳುತ್ತಿದ್ದ ಹನ್ಸಿಕಾ ಸದ್ಯ ಹಾರರ್, ಥ್ರಿಲ್ಲರ್, ಕ್ರೈಂ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ‘ದ ಟ್ರಯಲ್’ ಚಿತ್ರದ ಬರಹಗಾರರಾಗಿ ಗುರುತಿಸಿಕೊಂಡಿದ್ದ ರಾಮ್ ಗನ್ನಿ ನಿರ್ದೇಶನದ ಚಿತ್ರವಾಗಿದ್ದು, ತೆಲುಗು ನಟ ನಾರಾ ರೋಹಿತ್ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿದ್ದಾರೆ. ಹಾರರ್ ಜತೆಗೆ ಪೊಲೀಸ್ ಹಿನ್ನೆಲೆಯ ಸ್ಟೋರಿ ಇದಾಗಿದೆ. ಇದೇ ವರ್ಷ ಸಿನಿಮಾ ತೆರೆಗೆ ಬರಲಿದೆ. -ಏಜೆನ್ಸೀಸ್

ಕನ್ನಡಕ್ಕೆ ಕಮ್‌ಬ್ಯಾಕ್

ಪುನೀತ್ ರಾಜಕುಮಾರ್ ಅಭಿನಯದ 2008ರಲ್ಲಿ ತೆರೆಕಂಡಿದ್ದ ‘ಬಿಂದಾಸ್’ ಬಳಿಕ ಹನ್ಸಿಕಾ ಮೋಟ್ವಾನಿ ಮತ್ತೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸಾಗುತ್ತಿದ್ದಾರೆ. ಸದ್ಯ ಅವರು ಕನ್ನಡ ಸೇರಿ ಪ್ಯಾನ್ ಇಂಡಿಯಾವಾಗಿ ನಿರ್ಮಾಣವಾಗುತ್ತಿರುವ ‘ಪ್ಯಾರಡಾಕ್ಸ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ‘ಪ್ಯಾರಡಾಕ್ಸ್’ ಕೂಡ ಸಸ್ಪೆನ್ಸ್-ಥ್ರಿಲ್ಲರ್ ಚಿತ್ರವಾಗಿದ್ದು, ನೃತ್ಯ ನಿರ್ದೇಶಕ ಕಿಶೋರ್ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರದ ಚಿತ್ರೀಕರಣ ಆರಂಭವಾಗಿದೆ. 18 ವರ್ಷಗಳ ಬಳಿಕ ನಟಿ ಕನ್ನಡಕ್ಕೆ ಮರುಪ್ರವೇಶ ಪಡೆದಿರುವುದರಿಂದ ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net