

ಲಂಡನ್: ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ, ಸೂರತ್ನ 1993ರ ಬಾಂಬ್ ಸ್ಫೋಟ ಪ್ರಕರಣದ ಆರೋಪಿ ಟೈಗರ್ ಹನೀಫ್ನನ್ನು ಭಾರತಕ್ಕೆ ಹಸ್ತಾಂತರಿಸಲು ಬ್ರಿಟನ್ ಸರ್ಕಾರ ಬಹುತೇಕ ಸಿದ್ಧವಿತ್ತು. ಆದರೆ ಬ್ರಿಟನ್ನ ಅಂದಿನ ಗೃಹ ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವಿದ್ ಭಾರತದ ಮನವಿಗೆ ತಡೆ ನೀಡಿದ್ದರು ಎಂದು ಬ್ರಿಟನ್ ಗೃಹ ಸಚಿವಾಲಯ ತಿಳಿಸಿದೆ.ಟೈಗರ್ ಹನೀಫ್ ಅಲಿಯಾಸ್ ಮೊಹಮ್ಮದ್ ಹನೀಫ್ ಉಮರ್ಜಿ ಪಟೇಲ್ನನ್ನು 2010ರ ಫೆಬ್ರವರಿಯಲ್ಲಿ ಬ್ರಿಟನ್ ಪೊಲೀಸರು ಬಂಧಿಸಿದ್ದರು. ಆ ಬಳಿಕ 2012ರ ಜೂನ್ನಲ್ಲಿ ಅಂದಿನ ಗೃಹ ಸಚಿವೆ ಥೆರೆಸಾ ಮೇ ಆತನ ಹಸ್ತಾಂತರಕ್ಕೆ ಒಪ್ಪಿಗೆ ನೀಡಿದ್ದರು.
ನಂತರ ಹನೀಫ್ ಮಾಡಿದ್ದ ಎಲ್ಲ ಮನವಿಗಳೂ ತಿರಸ್ಕೃತವಾಗಿ ಕಳೆದ ವರ್ಷ ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ಬಹುತೇಕ ಅಂತಿಮಘಟ್ಟ ತಲುಪಿತ್ತು. ಆದರೆ ಆಗ ಗೃಹ ಸಚಿವರಾಗಿದ್ದ ಪಾಕ್ ಮೂಲದ ಸಾಜಿದ್ ಜಾವಿದ್ ಈ ಕಡತಕ್ಕೆ ಸಹಿ ಹಾಕಲಿಲ್ಲ ಎಂದು ತಿಳಿದುಬಂದಿದೆ. ತನ್ನನ್ನು ಭಾರತಕ್ಕೆ ಹಸ್ತಾಂತರಿಸಿದರೆ ಅಲ್ಲಿ ಚಿತ್ರಹಿಂಸೆ ನೀಡಲಾಗುತ್ತದೆ ಎಂದು ಹನೀಫ್ ಹೇಳಿಕೊಂಡಿದ್ದ.