

ದಾವಣಗೆರೆ: ಮೌಢ್ಯ, ಕಂದಾಚಾರ ಹಾಗೂ ಕರ್ಮ ಸಿದ್ಧಾಂತಗಳ ವಿರುದ್ಧ ಮಾಧ್ಯಮಗಳು ಜನರನ್ನು ನಿರಂತರವಾಗಿ ಎಚ್ಚರಿಸಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸಲಹೆ ನೀಡಿದರು. ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂದಿರದಲ್ಲಿ ಶನಿವಾರ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವ, ಜಿಲ್ಲಾ ಸಂಘದ ಆತಿಥ್ಯ, ಜಿಲ್ಲಾ ವರದಿಗಾರರ ಕೂಟದ ಸಹಯೋಗದಲ್ಲಿ ಆರಂಭವಾದ ಎರಡು ದಿನಗಳ 38ನೇ ರಾಜ್ಯಮಟ್ಟದ ಪತ್ರಕರ್ತರ ಸಮ್ಮೇಳನಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನದ ಆರ್ಟಿಕಲ್ 19ರಲ್ಲಿ ನೀಡಿದ ಅಭಿವ್ಯಕ್ತಿ ಸ್ವಾತಂತ್ರ್ಯನ್ನು ಸಮರ್ಥವಾಗಿ ಬಳಸುವ ಮೂಲಕ ಅಸಮಾನತೆ ತೊಡೆದು ಹಾಕಬೇಕು ಎಂದರು. ಜನಸಾಮಾನ್ಯರಿಗೆ ಮಾಧ್ಯಮಗಳಿಂದ ನ್ಯಾಯ ಸಿಗುತ್ತದೆ ಎಂಬ ನಿರೀಕ್ಷೆ ಇದೆ. ಅವರ ನಂಬಿಕೆ ಹುಸಿ ಆಗದಂತೆ ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಕೆಲ ಪಟ್ಟಭದ್ರರು ಬಡತನ, ಅಸಮಾನತೆ ಜೀವಂತವಿಡುವ ಮೂಲಕ ಇಂದಿಗೂ ಶೋಷಣೆ ಮುಂದುವರಿಸಿದ್ದಾರೆ. ಅಂತಹವರನ್ನು ಮಟ್ಟ ಹಾಕುವ ನಿಷ್ಠುರತೆ ಬೇಕು ಎಂದು ಪ್ರತಿಪಾದಿಸಿದರು.
ಆಡಳಿತ-ವಿರೋಧ ಪಕ್ಷಗಳು ಏನೇ ಮಾತನಾಡಲಿ, ಅದರಲ್ಲಿರುವ ಸತ್ಯ- ಮಿಥ್ಯ ಗುರುತಿಸಬೇಕು. ಶೇ.90ರಷ್ಟಾದರೂ ನಿಜಾಂಶ ಇರುವ ವರದಿ ಪ್ರಕಟಿಸಬೇಕು ಎಂದು ಆಶಿಸಿದರು. ಸರ್ಕಾರ ಜಾರಿಗೊಳಿಸಿರುವ ಗ್ಯಾರಂಟಿ ಯೋಜನೆಗಳನ್ನು ಯಾರೋ ಬಿಟ್ಟಿ ಭಾಗ್ಯ ಎಂದು ಕರೆದರೆ ನೀವು ಕೂಡ ಹಾಗೆಯೇ ಪ್ರಕಟಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಿಎಂ ಪ್ರಶ್ನಿಸಿದರು. ಪತ್ರಕರ್ತರ ಸಂಘದ ವೆಬ್ಸೈಟ್ ಉದ್ಘಾಟಿಸಿದ ಸಿಎಂ, ಪತ್ರಕರ್ತರ 5ನೇ ಗ್ರಾಮ ವಾಸ್ತವ್ಯದ ಪೋಸ್ಟರ್ ಬಿಡುಗಡೆ ಮಾಡಿದರು. ‘ಕೃತಕ ಬುದ್ಧಿಮತ್ತೆ ಮತ್ತು ಮಾಧ್ಯಮಗಳ ಭವಿಷ್ಯ’, ‘ಸ್ಥಳೀಯ ಪತ್ರಿಕೆಗಳು: ಹಿಂದೆ-ಇಂದು-ಮುಂದು’ ವಿಷಯಗಳ ಕುರಿತು ಗೋಷ್ಠಿಗಳು ನಡೆದವು.
ಗ್ರಾಮೀಣ ಪತ್ರಕರ್ತರಿಗೆ ಬಸ್ಪಾಸ್: ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು ಮನವಿಗೆ ಸ್ಪಂದಿಸಿ ಮುಂಬರುವ ಬಜೆಟ್ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ಪಾಸ್ ನೀಡುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಪ್ರಕಟಿಸಿದರು. ಫೆ.16 ರಂದು ಬಜೆಟ್ ಮಂಡಿಸುವೆ. ಅಲ್ಲಿಯವರೆಗೆ ಕಾದು ನೋಡಿ. ನಿಮಗೆಲ್ಲ ಆಲ್ ದಿ ಬೆಸ್ಟ್ ಎಂಬ ಸಿಂಬಲ್ ಪ್ರದರ್ಶಿಸಿದರು. ಪತ್ರಕರ್ತರ ಮಾಸಾಶನವನ್ನು 6ರಿಂದ12 ಸಾವಿರ ರೂ.ಗೆ ಏರಿಸಲಾಗಿದೆ. ಪಿಂಚಣಿ ಪಡೆಯುವ ಪತ್ರಕರ್ತರು ನಿಧನರಾದರೆ ಅವರ ಕುಟುಂಬಕ್ಕೆ ಕೊಡುವ ಮಾಸಾಶನವನ್ನು 3 ರಿಂದ 6 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ಪತ್ರಿಕಾ ವಿತರಕರಿಗೆ ವಿಮೆ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿದ್ದು ನಮ್ಮ ಸರ್ಕಾರ ಎಂದರು.
ಇಂದು ಸಮಾರೋಪ: ಭಾನುವಾರ ಬೆಳಗ್ಗೆ 10.30ಕ್ಕೆ ‘ಮಾಧ್ಯಮ ಮತ್ತು ಸರ್ಕಾರ’ ಕುರಿತು ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಸಂಘದಿಂದ ಕೊಡಮಾಡುವ ಪ್ರಶಸ್ತಿಗಳನ್ನು ವಿಜೇತರಿಗೆ ಪ್ರದಾನ ಮಾಡಲಾಗುವುದು. ಡಿಸಿಎಂ ಡಿ.ಕೆ. ಶಿವಕುಮಾರ್ ಸಮಾರೋಪ ನುಡಿಗಳನ್ನಾಡುವರು. ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ, ಸಭಾಪತಿ ಬಸವರಾಜ ಹೊರಟ್ಟಿ, ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಇತರರು ಪಾಲ್ಗೊಳ್ಳಲಿದ್ದಾರೆ.
ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ: ವಿಜಯವಾಣಿಯ ಹುಬ್ಬಳ್ಳಿ ಆವೃತ್ತಿಯ ಸ್ಥಾನಿಕ ಸಂಪಾದಕ ಪ್ರಕಾಶ್ ಶೇಟ್, ಚಿತ್ರದುರ್ಗ ಆವೃತ್ತಿಯ ಸ್ಥಾನಿಕ ಸಂಪಾದಕ ನವೀನ ಎಂ.ಬಿ., ವರದಿಗಾರ ಬಿ.ಸಿ.ಚನ್ನೇಗೌಡ, ಹಿರಿಯ ಪತ್ರಕರ್ತರಾದ ಗುರುರಾಜ ಕುಲಕರ್ಣಿ, ನಿರ್ಮಲಾ ಎಲಿಗಾರ ಸೇರಿ ಹಲವರಿಗೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು.
ಮುದ್ರಣ ಮಾಧ್ಯಮಕ್ಕೆ ಅದರದೇ ಆದ ಘನತೆ ಇದೆ. ಪತ್ರಕರ್ತರಿಗೂ ನೀತಿ, ನಿಯಮಗಳ ಚೌಕಟ್ಟಿದೆ. ತ್ವರಿತ ಸುದ್ದಿ ನೀಡುವ ಧಾವಂತದಲ್ಲಿ ಸುಳ್ಳು ಮತ್ತು ಸತ್ಯದ ತರ್ಕಕ್ಕೆ ಅವಕಾಶ ಇಲ್ಲದಂತೆ ಸುದ್ದಿ ಪ್ರಸಾರ ಮಾಡಬಾರದು.
| ಎಸ್.ಎಸ್.ಮಲ್ಲಿಕಾರ್ಜುನ್ ಜಿಲ್ಲಾ ಉಸ್ತುವಾರಿ ಸಚಿವ