ಕರಕುಶಲ ಮೇಳ ಹೊಸ ಆಲೋಚನೆಗೆ ದಾರಿ

sor mela
ಸೊರಬದಲ್ಲಿ ಆಯೋಜಿಸಿದ್ದ ಆಹಾರ ಮತ್ತು ಕರಕುಶಲ ಮೇಳ ಸಮಾರೋಪ ಸಮಾರಂಭದಲ್ಲಿ ತಾಲೂಕ ಕಸಾಪ ಮಾಜಿ ಅಧ್ಯಕ್ಷ ಡಾ. ಎಂ.ಕೆ.ಭಟ್ ಮಾತನಾಡಿದರು. ಕೆ.ಅಜ್ಜಪ್ಪ, ಷಣ್ಮುಖಾಚಾರ್, ಪ್ರಭು ಮೇಸ್ತ್ರಿ, ಸದಸ್ಯ ಮಧುರಾಯ್ ಜಿ. ಶೇಟ್, ಸರಸ್ವತಿ ನಾವುಡ ಇತರರಿದ್ದರು.
Published on

ಸೊರಬ: ಆಹಾರ ಹಾಗೂ ಕರಕುಶಲ ಮೇಳ ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಜನರಲ್ಲಿ ಯೋಚನೆ ಮತ್ತು ಯೋಜನೆ ರೂಪಿಸುವಂತೆ ಮಾಡಿದೆ ಎಂದು ತಾಲೂಕು ಕಸಾಪ ಮಾಜಿ ಅಧ್ಯಕ್ಷ ಡಾ. ಎಂ.ಕೆ.ಭಟ್ ಅಭಿಪ್ರಾಯಪಟ್ಟರು.

ಪಟ್ಟಣದ ಹೊಸಪೇಟೆ ಬಡಾವಣೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ಜಗಲಿ, ಯಕ್ಷರಂಗ, ಬಾಲನಂದನ ಟ್ರಸ್ಟ್‌ನಿಂದ ಭಾನುವಾರ ಹಮ್ಮಿಕೊಂಡಿದ್ದ ಆಹಾರ ಮೇಳ ಹಾಗೂ ಕರಕುಶಲ ಮೇಳದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಈ ಮೇಳದ ಮೂಲಕ ಸಾವಿರಾರು ಜನರು ಮತ್ತು ವ್ಯಾಪಾರಸ್ಥರು ಆರ್ಥಿಕ ಚಟುವಟಿಕೆಯನ್ನು ವಿಸ್ತರಿಸಿಕೊಂಡಿದ್ದಾರೆ. ಸಾಂಪ್ರದಾಯಿಕ ತಿನಿಸುಗಳು ಯುವಜನರ ಮನಸ್ಸನ್ನು ಪರಿವರ್ತನೆ ಮಾಡಲು ಉತ್ತಮ ವೇದಿಕೆಯಾಗಿದೆ. ಇಂತಹ ಕಾರ್ಯಕ್ರಮಗಳಿಂದ ತಾಲೂಕಿನ ಸಂಸ್ಕೃತಿ ಎಲ್ಲೆಡೆ ಪಸರಿಸಲು ಸಾಧ್ಯವಾಗುತ್ತದೆ. ಆಲೋಚನೆಗಳನ್ನು ಇಮ್ಮಡಿಗೊಳಿಸುತ್ತವೆ. ಹಾಗೆಯೇ ಇದೇ ವೇದಿಕೆಯಲ್ಲಿ ಕನ್ನಡದಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಿದ್ದು ಸ್ಮರಣೀಯ ಎಂದರು.

ತಾಪಂ ಮಾಜಿ ಸದಸ್ಯ ಕೆ.ಅಜ್ಜಪ್ಪ ಮಾತನಾಡಿ, ತಾಲೂಕಿನಲ್ಲಿ ಸಾಹಿತ್ಯ ಪರಿಷತ್ ಕ್ರಿಯಶೀಲವಾಗಿದೆ ಎಂಬುದಕ್ಕೆ ಆಹಾರ ಮೇಳ ಕಾರ್ಯಕ್ರಮ ಸಾಕ್ಷಿ. ಪ್ರತಿಯೊಬ್ಬರೂ ಕನ್ನಡದ ನೆಲ, ಜಲ ಹಾಗೂ ಸಂಸ್ಕೃತಿಯ ಉಳುವಿಗೆ ಅಳಿಲು ಸೇವೆ ಸಲ್ಲಿಸಬೇಕು. ಈ ಮೂಲಕ ಕನ್ನಡವನ್ನು ಸದೃಢವಾಗಿ ಕಟ್ಟಲು ಸಾಧ್ಯ. ಮಕ್ಕಳನ್ನು ಸರ್ಕಾರಿ ಕನ್ನಡ ಶಾಲೆಗೆ ಸೇರಿಸುವ ಮೂಲಕ ಭಾಷೆ ಉಳಿವಿಗೆ ಕೊಡುಗೆ ನೀಡಬೇಕು ಎಂದರು.

ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ಸಿರಿಗೌರಿ ಹಾಗೂ ಕನ್ನಡ ಭಾಷೆಯಲ್ಲಿ ಪೂರ್ಣಾಂಕ ಗಳಿಸಿದ 75ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ತಾಲೂಕು ಕಸಾಪ ಷಣ್ಮುಖಾಚಾರ್, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತ್ರಿ, ಸದಸ್ಯ ಮಧುರಾಯ್ ಜಿ. ಶೇಟ್, ತಾಲೂಕು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್, ಜಿಲ್ಲಾ ಪರಿಷತ್ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಕಸಾಪ ಮಾಜಿ ಅಧ್ಯಕ್ಷ ಎಸ್.ಆರ್.ಕುಮಾರಸ್ವಾಮಿ, ಯಕ್ಷರಂಗ ಟ್ರಸ್ಟ್ ಅಧ್ಯಕ್ಷ ದಿವಾಕರ ಭಾವೆ, ಸರಸ್ವತಿ ನಾವುಡ, ಮಹೇಶ್ ಖಾರ್ವಿ, ಮಾಲತೇಶ್, ಸುಬ್ರಹ್ಮಣ್ಯ ಗುಡಿಗಾರ್, ಲಿಂಗರಾಜ್ ಗೌಡ, ವೀಣಾ ಶ್ರೀಧರ್, ರೇವಣಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net