

ಹನಗೋಡು: ನಾಗರಹೊಳೆ ಉದ್ಯಾನವ ವ್ಯಾಪ್ತಿಯಲ್ಲಿ ಸುರಿಯುತ್ತಿರುವ ಸತತ ಮಳೆಯಿಂದಾಗಿ ಲಕ್ಷ್ಮಣತೀರ್ಥ ನದಿಯ ಹನಗೋಡು ಅಣೆಕಟ್ಟೆ ಭರ್ತಿಯಾಗಿದ್ದು, ಆಣೆಕಟ್ಟೆಯಿಂದ ನೀರು ಹರಿಯುವ ದೃಶ್ಯ ಮನಮೋಹಕವಾಗಿದೆ.
ಈ ಬಾರಿ ಬೇಸಿಗೆಯಲ್ಲಿ ಲಕ್ಷ್ಮಣತೀರ್ಥ ನದಿಯಲ್ಲಿ ನೀರಿನ ಹರಿವು ಸ್ಥಗಿತವಾಗಿತ್ತು. ನದಿಯಲ್ಲಿರುವ ಅಲ್ಲಲ್ಲಿ ಗುಂಡಿಗಳಲ್ಲಿ ಮಾತ್ರ ಅಲ್ಪ ಪ್ರಮಾಣದ ನೀರು ಕಾಣುತ್ತಿತ್ತು. ಏಪ್ರಿಲ್‌ನಲ್ಲಿ ಮಳೆಯೇ ಬೀಳಲಿಲ್ಲ. ಇದರಿಂದ ಬೇಸಿಗೆ ಬೆಳೆಗೆ ಹಾಗೂ ಜಾನುವಾರುಗಳಿಗೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿತ್ತು.
ಮೇ ತಿಂಗಳಲ್ಲಿ ಕೊಡಗು ಹಾಗೂ ನಾಗರಹೊಳೆ ಉದ್ಯಾನದಲ್ಲಿ ಸುರಿದ ಸತತ ಮಳೆಯಿಂದಾಗಿ 15 ದಿನಗಳಲ್ಲಿ ನದಿಯ ಉದ್ದಕ್ಕೂ ಎಲ್ಲಾ ಗುಂಡಿಗಳನ್ನು ತುಂಬಿಕೊಂಡು ಎರಡು ದಿನಗಳ ಹಿಂದೆಯಷ್ಟೇ ಹನಗೋಡು ಅಣೆಕಟ್ಟೆ ಮೇಲೆ ನೀರು ಹರಿಯಲಾರಂಭಿಸಿದೆ. ಹನಗೋಡಿನಿಂದ ಹುಣಸೂರಿನವರೆಗೆ ನೀರು ತಲುಪಿದೆ. ಹನಗೋಡು ಅಣೆಕಟ್ಟೆಯಿಂದ ತಾಲೂಕಿನ 40 ಕೆರೆಗಳಿಗೆ ನೀರು ತುಂಬಿಸಲಾಗುವುದಲ್ಲದೆ, 30 ಸಾವಿರ ಎಕರೆಗೂ ಹೆಚ್ಚು ಆಚ್ಚುಕಟ್ಟು ಪ್ರದೇಶಕ್ಕೆ ನೀರುಣಿಸಲಿದೆ. ಮುಖ್ಯ ಕಾಲುವೆ ಹಾಗೂ ಕೈಗಾಲುವೆಗಳ ದುರಸ್ತಿ ಕಾರ್ಯ ನಡೆಯುತ್ತಿದ್ದು, ದುರಸ್ತಿ ಕಾರ್ಯ ಮುಗಿದ ನಂತರ ಕಾಲುವೆಗೆ ನೀರು ಹರಿಸಿ ಕೆರೆ-ಕಟ್ಟೆಗಳನ್ನು ತುಂಬಿಸಲಾಗುವುದೆಂದು ಹನಗೋಡು ಹಾರಂಗಿ ಕಚೇರಿಯ ಎಇಇ ಅಶೋಕ್ ತಿಳಿಸಿದ್ದಾರೆ.
ನದಿಯ ಮುಖ್ಯ ಕಾಲುವೆಗೆ ನೀರು ಹರಿಸುವ ಗೇಟ್‌ಗೆ ಅಳವಡಿಸಿರುವ ಕಬ್ಬಿಣದ ತಡೆಗೋಡೆಗೆ ಸಾಕಷ್ಟು ಪ್ರಮಾಣದಲ್ಲಿ ಮರಗಳು ಸಿಲುಕಿಕೊಂಡಿದ್ದು , ನೀರಿನ ಸರಾಗ ಹರಿವಿಗೆ ಅಡಚಣೆಯಾಗಲಿದೆ. ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾದ ತಕ್ಷಣ ತೆರವುಗೊಳಿಸಲಾಗುವುದು. ನಂತರ ಕಾಲುವೆಗೆ ನೀರು ಹರಿಸಲಾಗುವುದು ಎಂದು ಹಾರಂಗಿ ಇಲಾಖೆಯ ಎಇಇ ತಿಳಿಸಿದರು.