

ಹೊಸಪೇಟೆ: ಹಂಪಿ ಉತ್ಸವದ ಹಿನ್ನೆಲೆಯಲ್ಲಿ ಧಾರ್ಮಿಕ ಕ್ಷೇತ್ರ ಹಂಪಿಯ ತುಂಗಭದ್ರಾ ನದಿಯಲ್ಲಿ ತುಂಗಭದ್ರಾ ಆರತಿ ಕಾರ್ಯಕ್ರಮಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹ್ಮದ್ ಖಾನ್ ಬುಧವಾರ ರಾತ್ರಿ ಗಂಗಾ ಪೂಜೆ ನೆರವೇರಿಸಿ ನಂತರ ತುಂಗಭದ್ರೆಗೆ ಬಾಗಿನ ಅರ್ಪಿಸುವ ಮೂಲಕ ಹಂಪಿ ಉತ್ಸವಕ್ಕೆ ಅಧಿಕೃತ ಚಾಲನೆ ನೀಡಿದರು.
ಅದಕ್ಕೂ ಮುನ್ನ ನದಿದಡದಲ್ಲೇ ಸುಂದರ ಮಂಟಪ ನಿರ್ಮಿಸಿ ತಾಯಿ ಭುವನೇಶ್ವರಿಯನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಪವಿತ್ರ ತುಂಗಭದ್ರಾ ನದಿಯ ದಡದ ಎಲ್ಲಿ ನೋಡಿದರಲ್ಲಿ ದೀಪಗಳ ಸಾಲು ಸಾಲು, ಬೆಳಕಿನ ವೈಭವ. ನದಿಯಲ್ಲಿ ತೇಲುತ್ತ ಸಾಗಿದ ಸಾವಿರಾರು ದೀಪಗಳು. ನದಿಯಲ್ಲಿನ ಬಂಡೆಗಳ ಮೇಲೂ ಉರಿದ ಹಣತೆ…ನದಿಗೆ ಬಾಗಿನ ಸಮರ್ಪಣೆ ಕಂಡು ಬಂತು.
ಭುವನೇಶ್ವರಿ ದೇವಿಗೆ ಪೂಜೆ ಸಲ್ಲಿಸಿ, ನಾನಾ ಬಗೆಯ ಆರತಿಯನ್ನು ಬೆಳಗಿ ಬಳಿಕ ಬಾಗಿನ ಅರ್ಪಿಸಿದರು. ಭುವನೇಶ್ವರಿ ದೇವಿ ಹಾಗೂ ತುಂಗಭಧ್ರೆಗೆ ಕುಂಭ ಆರತಿ, ಅಲಿಗೆ ಆರತಿ, ಧೂಪದ ಆರತಿ ಸೇರಿದಂತೆ ವಿವಿಧ ಬಗೆಯ ಆರತಿಯನ್ನು ಬೆಳಗಲಾಯಿತು. ತುಂಗಭದ್ರೆಗೆ ಪೂಜೆ ಸಲ್ಲಿಸಿದ ಬಳಿಕ ಹತ್ತು ಸಾವಿರಾರು ದೀಪಗಳನ್ನು ಹಚ್ಚಿ ನದಿಯಲ್ಲಿ ಬಿಡಲಾಯಿತು. ನದಿದಡ ಕಲ್ಲು-ಬಂಡೆಗಳ ಮೇಲೆ ಒಂದು ಸಾವಿರ ಮಣ್ಣಿನ ಹಣತೆಗಳನ್ನು ಬೆಳಗಿಸಲಾಯಿತು.
ಶಾಸಕ ಎಚ್.ಆರ್.ಗವಿಯಪ್ಪ, ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ, ಜಿಪಂ ಸಿಇಒ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಂ ಷಾ, ಎಸ್ಪಿ ಬಿ.ಎಲ್.ಶ್ರೀಹರಿಬಾಬು, ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಉಪವಿಭಾಗಿಯಾಧಿಕಾರಿ ವಿವೇಕಾನಂದ, ತಹಸೀಲ್ದಾರ್ ಶೃತಿ ಮಳ್ಳಪ್ಪಗೌಡ್ರ, ಡಿವೈಎಸ್ಪಿ ಮಂಜುನಾಥ ಇತರರಿದ್ದರು.
ನನ್ನ ಜೀವನದಲ್ಲೇ ತುಂಗಭದ್ರಾರತಿಯಂತ ಕಾರ್ಯಕ್ರಮ ನೋಡಿಲ್ಲ. ಇದೆ ಮೊದಲ ಬಾರಿಗೆ ಭಾಗವಹಿಸಿದ್ದು, ತುಂಬ ಖುಷಿಯಾಗಿದೆ. ಅಪಾರ ಭಕ್ತರು ಭೇಟಿ ನೀಡುತ್ತಾರೆ. ಆದುದರಿಂದ ಸ್ನಾನ ಘಟ್ಟ ಕಾಮಗಾರಿ ಪೂರ್ಣಕಗೊಳಿಸಲು ಕ್ರಮವಹಿಸುವೆ. ಹಂಪಿ ಅಭಿವೃದ್ಧಿಗೆ ಒತ್ತು ನೀಡುವೆ. - ಜಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ, ವಿಜಯನಗರ