ಭೋರ್ಗರೆಯುತ್ತಿದೆ ತುಂಗಭದ್ರಾ ನದಿ

26 MANJU 01
ಹಂಪಿಯ ಮಾತಂಗ ಪರ್ವತದಿಂದ ತುಂಬಿ ಹರಿಯುತ್ತಿರುವ ತುಂಗಭದ್ರೆಯ ನೋಟ
Published on
  • ರಮಣಿಯ ದೃಶ್ಯ ನೋಡಲು ಪ್ರವಾಸಿಗರು ದಂಡು
  • ಜಿಲ್ಲಾಡಳಿತ ಕಟ್ಟೇಚ್ಚರ

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ತುಂಗಭದ್ರಾ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದು, ಹಂಪಿಯ ಕಲ್ಲು ಬಂಡೆಗಳಲ್ಲಿ ಭೋರ್ಗರೆದು ಹರಿಯುತ್ತಿದೆ. ನದಿ ಪ್ರವಾಹದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಹಂಪಿಯತ್ತ ಪ್ರವಾಸಿಗರು ಮುಖ ಮಾಡುವ ಮೂಲಕ ಪ್ರಸಿದ್ಧ ಸ್ಮಾರಕಗಳನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

ತುAಗಭದ್ರಾ ಜಲಾಶಯದಿಂದ 90 ಸಾವಿರ ಕ್ಯೂಸೆಕ್‌ಗೂ ಅಧಿಕ ನೀರು ನದಿಗೆ ಹರಿಸಲಾಗಿದೆ. ಹಂಪಿಯ ಕಲ್ಲು ಬಂಡೆಗಳ ನಡುವೆ ಸದ್ದು ಮಾಡುತ್ತ ಹರಿಯುತ್ತಿರುವ ನದಿಯ ದೃಶ್ಯ ರಮಣಿಯವಾಗಿದೆ. ನದಿಯ ಪ್ರವಾಹದ ಹಿನ್ನೆಲೆಯಲ್ಲಿ ವಿರೂಪಾಕ್ಷ ದೇವಾಲಯದ ಸ್ನಾನಘಟ್ಟ, ಪುರಂದರ ದಾಸರ ಮಂಟಪ ಪ್ರದೇಶದ ಕಡೆ ಪ್ರವಾಸಿಗರ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಕೋದಂಡರಾಮಸ್ವಾಮಿ ಹಾಗೂ ಯಂತ್ರೋದ್ಧಾರ ಆಂಜನೇಯ ದೇವಾಲಯಕ್ಕೆ ತೆರಳುವ (ಓನಕೆ ಕಿಂಡಿ) ಮಾರ್ಗ ಜಲಾವೃತವಾಗಿರುವುದರಿಂದ ಬದಲಿ ಮಾರ್ಗದ ಮೂಲಕ ಪ್ರವಾಸಿಗರು ತೆರಳುತ್ತಿದ್ದಾರೆ. ಕೊಪ್ಪಳ ಜಿಲ್ಲೆಯ ಆನೆಗುಂದಿಯ ಆಂಜನಾದ್ರಿ ಪರ್ವತಕ್ಕೆ ಭೇಟಿ ನೀಡುವ ಭಕ್ತರು, ಹಂಪಿಗೆ ಭೇಟಿ ನೀಡುತ್ತಿದ್ದಾರೆ. ಆಗಾಗ ಸುರಿಯುವ ಜಡಿ ಮಳೆ ನಡುವೆಯೂ ಪ್ರವಾಸಿಗರು ತಣ್ಣನೆ ಅನುಭೂತಿ ಪಡೆಯುತ್ತಿದ್ದಾರೆ.

ವೀಕೆಂಡ್ ಹಾಗೂ ನಾಲ್ಕನೇ ಶನಿವಾರ ಹಿನ್ನೆಲೆಯಲ್ಲಿ ಶುಕ್ರವಾರವೇ ಸಹಸ್ರಾರು ಸಂಖ್ಯೆಯಲ್ಲಿ ಪ್ರವಾಸಿಗರು ಹಂಪಿಗೆ ಆಗಮಿಸಿದ್ದಾರೆ. ಇನ್ನೂ ಮುಂದಿನ ಎರಡು ದಿನಗಳ ಕಾಲ ಇನಷ್ಟು ಹೆಚ್ಚಿನ ಪ್ರವಾಸಗರು ಬೇಟಿ ನೀಡಲಿದ್ದಾರೆ. ಶ್ರೀ ವಿರೂಪಾಕ್ಷೇಶ್ವರ ದೇವರ ದರ್ಶನ ಜತೆಯಲ್ಲಿ ವಿವಿಧ ಸ್ಮಾರಕಗಳನ್ನು ವೀಕ್ಷಣೆ ಮಾಡಿದರು. ಮಲೆನಾಡು ಸೇರಿದಂತೆ ರಾಜ್ಯದ ಹಲವಡೆ ಮಳೆಯ ಆರ್ಭಟ ಜೋರಾಗಿದೆ. ಕೆಲ ಜಿಲ್ಲೆಯಲ್ಲಿ ಅಂತು ಸಾರ್ವಜನಿಕರು ಮನೆಬಿಟ್ಟು ಹೊರ ಬರದಂತೆ ಪರಿಸ್ಥಿತಿ ನಿರ್ಮಾಣವಾಗಿದೆ. ನಿರಂತರ ಮಳೆಗತೆ ಬೇಸತ್ತು ವಿಕೇಂಡ್‌ನಲ್ಲಿ ಪ್ರವಾಸಿಗರು ಹಂಪಿ ಪ್ರವಾಸ ಕೈಗೊಂಡಿದ್ದಾರೆ. ಹಂಪಿಯಲ್ಲಿ ತಂಪಾದ ವಾತವರಣ, ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ, ಹಸಿರಿನಿಂದ ಕಂಗೊಳಿಸುತ್ತಿರುವ ಬೆಟ್ಟ-ಗುಡ್ಡಗಳ ನಡುವೆ ಸ್ಮಾರಕಗಳ ವೀಕ್ಷಣೆ ಮಾಡುವುದೇ ಕಣ್ಣಿಗೆ ಹಬ್ಬ ಎನ್ನುವಂತಾಗಿದೆ.

ವಿಧಿವಿಧಾನಕ್ಕೆ ಸಮಸ್ಯೆ

ದಕ್ಷಿಣ ಕಾಶಿ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಮೃತಪಟ್ಟವರ ವಿಧಿವಿಧಾನ ಕಾರ್ಯಕ್ರಮ ನಡೆಸುತ್ತಾರೆ. ಆದರೆ, ನದಿಯಲ್ಲಿ ಭಾರಿ ನೀರು ಹರಿಯುತ್ತಿರುವುದರಿಂದ ನದಿ ದಡದಲ್ಲಿದ್ದ ಮೂರು ಮಂಟಪಗಳ ಪೈಕಿ ಒಂದು ಮಂಟಪ ಸಂಪೂರ್ಣ ಮುಳಗಿದೆ. ಇನ್ನೂ ಎರಡು ಮಂಟಪ ಜಲಾವೃತ್ತವಾಗಿದೆ. ಆದ್ದರಿಂದ ವಿಧಿವಿಧಾನ ಕಾರ್ಯಕ್ರಮ ಮೇಲಿನ ಮಂಟಪದಲ್ಲಿ ನಡೆಸಲಾಗುತ್ತಿದೆ. ಇದರಿಂದ ಕಾರ್ಯಕ್ರಮ ನಡೆಸಲು ಸಮಸ್ಯೆ ಆಗುತ್ತಿದೆ.

ಪೊಲೀಸರು ನಿಗಾ

ಹಂಪಿ ಭಾಗದಲ್ಲಿ ತುಂಗಭದ್ರಾ ನದಿ ಜೋರಾಗಿ ಹರಿಯುತ್ತಿರುವುದರಿಂದ ಬೋಟ್‌ಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೊಪ್ಪಳದ ಆನೆಗೊಂದಿ ಹಾಗೂ ಹಂಪಿ ನಡುವೆ ಸಂಚರಿಸುತ್ತಿದ್ದ ಬೋಟ್‌ಗಳನ್ನು ನಿಲ್ಲಿಸಲಾಗಿದ್ದು, ಮೀನುಗಾರರು ತೆಪ್ಪಹಾಕದಂತೆ ನಿರ್ಬಂಧಿಸಲಾಗಿದೆ. ಚಕ್ರತೀರ್ಥ ಹಾಗೂ ಶ್ರೀ ವಿರೂಪಾಕ್ಷೇಶ್ವರ ದೇಗುಲದ ಭಾಗದಲ್ಲಿ ಪ್ರವಾಸಿಗರು ಹಾಗೂ ಭಕ್ತರು ತೆರಳದಂತೆ ಪೊಲೀಸರು ನಿಗಾವಹಿಸಿದ್ದಾರೆ. ಭಾರಿ ಪ್ರಮಾಣದ ನೀರು ಹರಿಬಿಟ್ಟಿರುವುದರಿಂದ ಮುನ್ನೆಚ್ಚರಿಕೆ ಕ್ರಮವಹಿಸಲು ಹಾಗೂ ಕಾಳಜಿ ಕೇಂದ್ರಕ್ಕೆ ತೆರೆಯಲು ಈಗಾಗಲೇ ವಿಜಯನಗರ ಕ್ರಮವಹಿಸಿವೆ.

ಟಿ.ಬಿ,ಡ್ಯಾಂಗೂ ಜನಸಾಗರ

ತುಂಗಭದ್ರಾ ಜಲಾಶಯ ಭರ್ತಿಯಾದ ಹಿನ್ನೆಲೆಯಲ್ಲಿ ಜಲಾಶಯದ ರಮಣೀಯ ದೃಶ್ಯ ಕಣ್ತುಂಬಿಕೊಳ್ಳಲು ಸಾಗರೋಪಾದಿಯಲ್ಲಿ ಪ್ರವಾಸಿಗರು ಟಿ.ಬಿ.ಡ್ಯಾಂಗೆ ಆಗಮಿಸುತ್ತಿದ್ದಾರೆ. ಜಲಾಶಯದ ಗೇಟ್‌ಗಳಿಂದ ಬೋರ್ಗರೆದು ದುಮುಕುವ ನೀರಿನ ನರ್ತನ ಕಂಡು ಪುಳಕೀತರಾಗುತ್ತಿದ್ದಾರೆ. ಕೆಳಭಾಗದ ಉದ್ಯಾನವನದಲ್ಲಿ ಸಂಗೀತ ಕಾರಂಜಿ ವೀಕ್ಷಿಸಿ, ಸಂಭ್ರಮಿಸುತ್ತಿದ್ದಾರೆ. ಜಲಾಶಯ ಹಿನ್ನೀರಿನ ಪ್ರದೇಶದಲ್ಲಿ ನೀರಿನ ಅಲೆಯ ಕಲರವಕ್ಕೆ ಮನಸೋಲುತ್ತಿದ್ದಾರೆ. ಟಿ.ಬಿ.ಡ್ಯಾಂ, ಸುರಂಗ ಮಾರ್ಗದ ರಸ್ತೆ ಹಾಗೂ ಮುನಿರಾಬಾದ್ ಸೇತುವೆ ರಸ್ತೆಯಲ್ಲಿ ವಾಹನಗಳನ್ನು ನಿಲ್ಲಿಸಿ ಜಲಾಶಯದ ವಿಹಂಗಮ ದೃಶ್ಯವನ್ನು ಸವಿಯುತ್ತಿದ್ದಾರೆ. ಹುಬ್ಬಳ್ಳಿ, ಧಾರವಾಡ, ಗದಗ, ಕೊಪ್ಪಳ, ಶಿವಮೊಗ್ಗ, ದಾವಣಗೆರೆ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಪ್ರವಾಸಿಗರು ಹಂಪಿ ಮತ್ತು ಟಿ.ಬಿ.ಡ್ಯಾಂನತ್ತ ದಾವಿಸಿ ಬರುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net