

ಹೊಸಪೇಟೆ : ಪ್ರವಾಸೋದ್ಯಮದ ಕೇಂದ್ರ ಸ್ಥಾನವಾದ ಹಂಪಿಯಲ್ಲಿ ಶುಕ್ರವಾರ ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ 7ಕ್ಕೆ ನಡೆಯಿತು. ವಿಶ್ವ ವಿಖ್ಯಾತ ಹಂಪಿಯಲ್ಲಿ ಕಾಟಚಾರದ ಕಾರ್ಯಕ್ರಮ ಮಾಡಬೇಡಿ ಎಂದು ಪ್ರವಾಸಿಗರು ಆಕ್ರೋಶ ವ್ಯಕ್ತಪಡಿಸಿದರು.
ಇದು ಕೇವಲ ಹಂಪಿಯಲ್ಲ, ವಿಶ್ವ ವಿಖ್ಯಾತ ಪಡೆದ ಸ್ಮಾರಕಗಳ ನಗರಿ. ಇದು ರಾಜ್ಯಕ್ಕೆ ಮಾತ್ರ ಮಾದರಿಯಲ್ಲ ದೇಶಕ್ಕೆ ಮಾದರಿಯಾಗಿದೆ. ಆದರೆ, ಇಂದಿನ ಕಾರ್ಯಕ್ರಮ ಸಂಜೆ ನಾಲ್ಕು ಗಂಟೆಯಲ್ಲ, ಸಂಜೆ ನಾಲ್ಕು ಗಂಟೆಯ ನಂತರ ಎಂಬಂತಿತ್ತು. ಕಾರ್ಯಕ್ರಮಕ್ಕೆ ಉದ್ಘಟನೆಗೆ ಸಚಿವರು ಬರಲಿಲ್ಲ, ಶಾಸಕರು ಅಧ್ಯಕ್ಷೆ ವಹಿಸಲಿಲ್ಲ. ಜಿಲ್ಲಾಧಿಕಾರಿ, ಜಿ.ಪಂ. ಸಿಇಒ, ಎಸ್ಪಿ ಯಾರು ಬರಲಿಲ್ಲ. ಕಾರ್ಯಕ್ರಮಕ್ಕೆ ಯಾರು ಬಾರದ ಹಿನ್ನಲೆಯಲ್ಲಿ ಅನಿವಾರ್ಯವಾಗಿ ಉಪವಿಭಾಗಿಯಾಧಿಕಾರಿ ವಿವೇಕಾನಂದ ಕಾರ್ಯಕ್ರಮ 7ರ ನಂತರ ಉದ್ಘಾಟಿಸಿದರು. ಸಂಜೆ 4ರಿಂದ ಪ್ರವಾಸಿಗರು, ಪ್ರವಾಸಿ ಮಿತ್ರರು, ಮಾರ್ಗದರ್ಶಿಗಳು ಶಾಲಾ ಕಾಲೇಜು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಕಾದು ಸುಸ್ತಾದರು. ಕೆಲವರು ವಾಪಾಸ್ ಮನೆಗೆ ಹೋದರು. ಕೆಲ ಪ್ರವಾಸಿ ಮಾರ್ಗದರ್ಶಿಗಳೊಂದಿಗೆ ಕಾರ್ಯಕ್ರಮ ನಡೆಸಿದರು. ನಾಮಕಾವಾಸ್ತೆ ಆಚರಣೆಯಾದ ಪ್ರವಾಸೋದ್ಯಮ ದಿನಾಚರಣೆ ಆಕ್ರೋಶಕ್ಕೆ ಕಾರಣವಾಯಿತು.
ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನ ರಥ ಬೀದಿಯಲ್ಲಿ ಶುಕ್ರವಾರ ಸಂಜೆ ಕೊನೆಗೂ ಆರಂಭವಾದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಕಾರ್ಯಕ್ರಮ ಉಪವಿಭಾಗಿಯಾಧಿಕಾರಿ ವಿವೇಕಾನಂದ ಉದ್ಘಾಟಿಸಿದರು.
ನಂತರ ಮಾತನಾಡಿ, ಪ್ರವಾಸೋದ್ಯಮ ಮತ್ತು ಶಾಂತಿ ಈ ಕಾರ್ಯಕ್ರಮದ ಧ್ಯೇಯ ವಾಕ್ಯ. ಪ್ರವಾಸಿಗರಿಗೆ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಸಿದ್ದ. ಹಂಪಿಯಲ್ಲಿ ಪ್ರವಾಸೋದ್ಯಮ ಮತ್ತಷ್ಟು ಅಭಿವೃದ್ಧಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಹೊಸಪೇಟೆ ಪ್ರಾಧ್ಯಾಪಕ ಡಾ. ಶಿವನಗೌಡ ಸಾತಮಾರ ವಿಶೇಷ ಉಪನ್ಯಾಸ ನೀಡುವರು. ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಪ್ರಭುಲಿಂಗ ಎಸ್. ತಳಕೇರಿ, ನಗರಸಭೆ ಪೌರಾಯುಕ್ತ ಸಿ.ಚಂದ್ರಪ್ಪ, ಧಾರ್ಮಿಕ ಧತ್ತಿ ಇಲಾಖೆ ಇಒ ಹನುಮಂತಪ್ಪ, ಕೆಎಸ್ ಟಿಡಿಸಿ ವ್ಯವಸ್ಥಾಪಕ ಸುನೀಲ್, ಗ್ರಾ.ಪಂ. ಸದಸ್ಯರಾದ ಹನುಮಂತಪ್ಪ, ರೂಪ, ಕಾರ್ಯದರ್ಶಿ ಕೊಟ್ರೇಶ್ ಇತರರಿದ್ದರು.