ಹಂಪಿ ಉತ್ಸವದಲ್ಲಿ ಕೃಷಿಕರಿಗೆ ಆದ್ಯತೆ

24 MANJU 01
Published on

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ

ಹಂಪಿ ಉತ್ಸವದಲ್ಲಿ ಕೃಷಿಕರಿಗೆ ಆದ್ಯತೆ ನೀಡಲು ವಿಜಯನಗರ ಜಿಲ್ಲಾಡಳಿತ ವಿವಿಧ ಕಾರ್ಯಕ್ರಮಗಳ ಆಯೋಜನೆಗೆ ಸಿದ್ಧತೆ ಕೈಗೊಂಡಿದೆ.

ಹಂಪಿ ಉತ್ಸವದಲ್ಲಿ ಆಕರ್ಷಕ ಜೋಡಿ ಎತ್ತು, ಸಿರಿಧಾನ್ಯ ಮೇಳ, ಕುರಿ, ಶ್ವಾನಗಳ ಪ್ರದರ್ಶನ ಆಕರ್ಷಣೆಯಾಗಲಿದೆ. ಮೀನುಗಾರಿಕೆ ಇಲಾಖೆಯಿಂದ ಮತ್ಸಮೇಳ, ತೋಟಗಾರಿಕೆ ಇಲಾಖೆಯಿಂದ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಈ ಮೂಲಕ ಉತ್ಸವಕ್ಕೆ ದೇಸಿ ಸೊಗಡಿನ ಟಚ್ ನೀಡಲು ಜಿಲ್ಲಾಡಳಿತ ಯೋಜನೆ ರೂಪಿಸಿದ್ದು, ಭರದ ಸಿದ್ಧತೆ ನಡೆಯುತ್ತಿದೆ.

ಜಾಗತಿಕ ಯುಗದಲ್ಲಿ ಸಾಂಪ್ರದಾಯಿಕ ಪದ್ಧತಿಗಳು ನಶಿಸಿ ಹೋಗುತ್ತಿರುವ ಹೊತ್ತಿನಲ್ಲಿ ಈ ಉತ್ಸವದಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಜೋಡಿ ಎತ್ತಿನ ಉತ್ಸವ ಮಾಡುವ ಮೂಲಕ ಗ್ರಾಮೀಣ ಪರಂಪರೆಗೆ ಉತ್ತೇಜನ ಒದಗಿಸಲು ಸಿದ್ಧತೆ ಕೈಗೊಂಡಿದೆ. ಕೆಲ ರೈತರು ಸಾಂಪ್ರದಾಯಿಕ ಪದ್ಧತಿ ಇನ್ನೂ ಅನುಸರಿಸುತ್ತಿದ್ದು, -2 ಪ್ರವಾಸಿಗರು ಇವುಗಳ ಜತೆ ಹಂಪಿಯ ಸ್ಮಾರಕಗಳನ್ನು ವೀಕ್ಷಿಸಲಿದ್ದಾರೆ. ಕುರಿ ಹಾಗೂ ಶ್ವಾನಗಳ ಪ್ರದರ್ಶನ ಇರಲಿದೆ.

ಬಹುಮಾನ ಮೊತ್ತ ಹೆಚ್ಚಿಸುವ ಸಾಧ್ಯತೆ

ಉತ್ಸವದಲ್ಲಿ ಮೂರು ದಿನ ಜೋಡಿ ಎತ್ತು, ಕುರಿ, ಶ್ವಾನಗಳ ಪ್ರದರ್ಶನಕ್ಕೆ ಪಶುಸಂಗೋಪನಾ ಇಲಾಖೆ ಹೊಣೆ ವಹಿಸಿಕೊಂಡಿದೆ. ಕಳೆದ ಬಾರಿ ಜಿಲ್ಲಾಡಳಿತದಿಂದ ಮೊದಲ ಬಹುಮಾನ 10 ಸಾವಿರ ರೂ., ಎರಡನೇ ಬಹುಮಾನ 7.5 ಸಾವಿರ ರೂ., ಮೂರನೇ ಬಹುಮಾನ 5 ಸಾವಿರ ರೂ. ನೀಡಲಾಗಿತ್ತು. ಈ ಬಾರಿ ನಗದು ಬಹುಮಾನ ಹೆಚ್ಚು ಮಾಡುವ ಸಾಧ್ಯತೆಯಿದೆ.

ರೈತರಿಗೆ ಉಪನ್ಯಾಸ

ರೈತರಿಗಾಗಿ ಸಿರಿಧಾನ್ಯ, ಸಾವಯವ ಕೃಷಿ ಹಾಗೂ ಲಾಭದಾಯಕ ಕೃಷಿ ಮಾಡುವ ವಿಧಾನಗಳ ಉಪನ್ಯಾಸ ಕಾರ್ಯಕ್ರಮ ಮಾ.1ರಂದು ಕೃಷಿ ಇಲಾಖೆ ಅಧಿಕಾರಿಗಳು 1 ಹಮ್ಮಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ತಾಲೂಕುವಾರು ರೈತರಿಗೆ ಆಹ್ವಾನ ನೀಡಿದ್ದು, ಸಾರಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಕೃಷಿ ಇಲಾಖೆ ಜೆಡಿ ಶರಣಪ್ಪ ಮುದಗಲ್ ತಿಳಿಸಿದ್ದಾರೆ.

ಕೃಷಿಕರಿಗೆ ಆದ್ಯತೆ ನೀಡಲು ಹಂಪಿ ಉತ್ಸವದಲ್ಲಿ ಹಲವು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಉಪನ್ಯಾಸ, ಸಿರಿಧಾನ್ಯ ಮೇಳ, ಜೋಡಿ ಎತ್ತು, ಕುರಿ, ಶ್ವಾನ ಪ್ರದರ್ಶನ ನಡೆಸಲಾಗುತ್ತದೆ. ರೈತಾಪಿ ವರ್ಗ ಈ ಕಾರ್ಯಕ್ರಮದ ಸದುಪಯೋಗ ಪಡೆಯಬೇಕು. | ಎಂ.ಎಸ್.ದಿವಾಕರ ಜಿಲ್ಲಾಧಿಕಾರಿ, ವಿಜಯನಗರ ರೈತರಿಗೆ ಉತ್ಸವಲ್ಲಿ ಜಿಲ್ಲಾಡಳಿತದಿಂದ ಸಿರಿಧಾನ್ಯ ಮೇಳ, ಸಾವಯವ ಕೃಷಿ ಹಾಗೂ ಲಾಭದಾಯಕ ಕೃಷಿ ಮಾಡುವ ವಿಧಾನಗಳ ಉಪನ್ಯಾಸ ಸೇರಿ ಇತರ ಕಾರ್ಯಕ್ರಮಗಳು ನಡೆಯಲಿವೆ. ಹೆಚ್ಚಿನ ರೈತರು ಭಾಗವಹಿಸುವ ಸಾಧ್ಯತೆಯಿದೆ. | ಶರಣಪ್ಪ ಮುದಗಲ್ ಜಂಟಿ ಕೃಷಿ ನಿರ್ದೇಶಕ, ವಿಜಯನಗರ ಹಂಪಿ ಉತ್ಸವದಲ್ಲಿ ಜೋಡೆತ್ತು, ಕುರಿ, ಶ್ವಾನಗಳ ಪ್ರದರ್ಶನ ನಡೆಯಲಿವೆ. ಇದರಿಂದ ಕೃಷಿಕರಿಗೆ, ಸಾಂಪ್ರದಾಯಿಕ ಪದ್ಧತಿಗೆ ಪ್ರೇರಣೆ ನೀಡಿದಂತಾಗುತ್ತದೆ. | ಫೋಮ್‌ಸಿಂಗ್‌ ಪಶುಸಂಗೋಪನೆ ಇಲಾಖೆ ಉಪನಿರ್ದೇಶಕ, ವಿಜಯನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net