

ಮಂಜುನಾಥ ಅಯ್ಯಸ್ವಾಮಿ ಹೊಸಪೇಟೆ
ಮೈಸೂರು ದಸರಾ ಮಾದರಿಯಲ್ಲೇ ವಿಜಯನಗರ ಗತ ವೈಭವ ಸಾರುವ ಹಂಪಿ ಉತ್ಸವಕ್ಕೂ ಶಾಶ್ವತ ದಿನಾಂಕ ನಿಗದಿ ಮಾಡಬೇಕೆಂಬ ಬೇಡಿಕೆ ಈಡೇರದಿರುವುದು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದ ಅಸಮಾಧಾನಕ್ಕೆ ಕಾರಣವಾಗಿದೆ.
ವಿಜಯನಗರ ಅರಸರ ವಾಸ್ತುಶಿಲ್ಪಗಳಿಂದಾಗಿ ಹಂಪಿ ವಿಶ್ವವಿಖ್ಯಾತವಾಗಿದೆ. ಹಂಪಿ ಉತ್ಸವವನ್ನು ಕಾಂಗ್ರೆಸ್ ಸರ್ಕಾರ ಬಹುತೇಕ ನವೆಂಬರ್ 3. 4. 5ರಂದು ಆಚರಣೆ ಮಾಡುತ್ತಿತ್ತು. ಬಿಜೆಪಿ ಸರ್ಕಾರ ಜನವರಿಯಲ್ಲಿ ಆಚರಣೆ ಮಾಡುತ್ತಿತ್ತು. ಆದರೆ, 2024ರಲ್ಲಿ ಫೆ.2, 3, 4ರಂದು ಹಂಪಿ ಉತ್ಸವಾಯೋಜಿಸಲಾಗಿತ್ತು.
ಫೆ.28, ಮಾ.1 ಮತ್ತು 2ರಂದು ಆಚರಣೆ ಮಾಡಲು ಸಿದ್ಧತೆ ನಡೆಸಲಾಗಿದೆ. ಸರ್ಕಾರಗಳು ಬದಲಾದಂತೆ ಹಂಪಿ ಉತ್ಸವದ ದಿನಾಂಕ ಬದಲಾಗುತ್ತಿವೆ. ಮೈಸೂರು ದಸರಾಕ್ಕೆ ನೀಡುವ ಆದ್ಯತೆ ಹಂಪಿ ಉತ್ಸವಕ್ಕೂ ನೀಡಲಿ ಎಂಬ ಬೇಡಿಕೆಗೆ ಸ್ಪಂದನೆ ಇಲ್ಲದಂತಾಗಿದೆ. ಹಂಪಿಯಲ್ಲಿ ಪ್ರತಿ ವರ್ಷ ಉತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇಶದ ವಿವಿಧೆಡೆಯಿಂದ ಕಲಾವಿದರನ್ನು ಕರೆಯಿಸಲಾಗುತ್ತದೆ. ಆದರೆ ಸ್ಥಳೀಯ ವಾತಾವರಣಕ್ಕೆ ಪೂರಕವಾಗಿ ನವೆಂಬರ್‌ನಲ್ಲಿ ಉತ್ಸವ ಆಚರಣೆ ಮಾಡುವುದು ಸೂಕ್ತ ಎಂಬ ಅಭಿಪ್ರಾಯಗಳಿವೆ. ರಾಜಕೀಯ ಕಾರಣಗಳಿಂದಾಗಿ ಬರಗಾಲ ಮತ್ತಿತರ ಕಾರಣಗಳನ್ನು ಹೇಳಿ ಪ್ರತಿ ಬಾರಿ ಹಂಪಿ ಉತ್ಸವ ಆಚರಣೆ ದಿನಾಂಕ ಬದಲಾಯಿಸಲಾಗುತ್ತಿದೆ. ಕೆಲ ವರ್ಷ ಆಚರಣೆ ಕೂಡ ಮಾಡುವುದಿಲ್ಲ. ಉತ್ಸವ ಆಚರಿಸುವಂತೆ ಹೋರಾಟ ಮಾಡಿದ ಉದಾಹರಣೆ ಬಹಳಷ್ಟಿವೆ. ಮೈಸೂರು ದಸರಾಕ್ಕೆ ಪ್ರೇರಣೆಯೇ ಹಂಪಿಯಾಗಿದೆ. ಆದರೆ, ಮೈಸೂರು ದಸರಾಕ್ಕೆ ಸಿಗುವ ಮನ್ನಣೆ ಹಂಪಿ ಉತ್ಸವಕ್ಕೆ ಸಿಗುತ್ತಿಲ್ಲ.
ಹಂಪಿ ಉತ್ಸವಕ್ಕೆ ಸರ್ಕಾರದ ಮಟ್ಟದಲ್ಲಿ ನಿಶ್ಚಿತ ಸ್ವರೂಪ ನೀಡಿ, ಪ್ರತಿ ವರ್ಷ ನವೆಂಬರ್‌ನಲ್ಲಿ ಮೂರು ದಿನ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ. 2001ರಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಬರಗಾಲ ಎದುರಾಗಿದ್ದರಿಂದ ಜಿಲ್ಲಾ ಉತ್ಸವದ ಮಾದರಿಯಲ್ಲಿ ಒಂದೇ ವೇದಿಕೆಯಲ್ಲಿ ಉತ್ಸವ ಆಚರಿಸಲಾಯಿತು. ಬರಗಾಲ ಮುಂದುವರಿದ ಕಾರಣ 2002ರ ಉತ್ಸವವನ್ನು 2003ರ ಜ.26 ರಿಂದ 28ರವರೆಗೆ ಆಚರಿಸಲಾಯಿತು. ಮೊದಲ ದಿನವೇ ಹೊಸಪೇಟೆ ತಾಪಂ ಅಧ್ಯಕ್ಷ ಎಂ.ಸೂರ್ಯನಾರಾಯಣ ನಿಧನರಾದ ಹಿನ್ನೆಲೆ ಕಾರ್ಯಕ್ರಮ ರದ್ದುಗೊಳಿಸಲಾಯಿತು. 2003ರಲ್ಲೇ ನ.3ರಿಂದ 5ರವರೆಗೆ ಆಚರಿಸಲಾಯಿತು. 2003-2009ರ ವರೆಗೆ ನವೆಂಬರ್‌ನಲ್ಲೇ ಉತ್ಸವ ಆಚರಿಸಲಾಯಿತು.
ಶ್ರೀಕೃಷ್ಣದೇವರಾಯರ 500ನೇ ಪಟ್ಟಾಭಿಷೇಕ ಮಹೋತ್ಸವದ ನಿಮಿತ್ತ 2010ರಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಿ.ಜನಾರ್ದನ ರೆಡ್ಡಿ 75 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಜ.27 ರಿಂದ 29 ರವರೆಗೆ ಜನರ ಗಮನ ಸೆಳೆಯುವಂತೆ ಅದ್ದೂರಿಯಾಗಿ ಉತ್ಸವ ಆಚರಿಸಿದರು. ಬಳಿಕ 2011ರಲ್ಲಿ ಉತ್ಸವ ನಡೆಸಲಾಯಿತು. 2012ರಲ್ಲಿ ಬರಗಾಲದ ಹಿನ್ನೆಲೆಯಲ್ಲಿ ಉತ್ಸವ ರದ್ದಾಯಿತು. 2014 ಮತ್ತು 2015ರಲ್ಲಿ ಸಚಿವರಾಗಿದ್ದ ಪಿ.ಟಿ. ಪರಮೇಶ್ವರನಾಯ್ಕ ನೇತೃತ್ವದಲ್ಲಿ ಉತ್ಸವ ನಡೆಸಲಾಯಿತು. 2016 ಮತ್ತು 2017ರಲ್ಲಿ ಕಾರ್ಮಿಕ ಸಚಿವ ಸಂತೋಷ ಲಾಡ್ ನೇತೃತ್ವದಲ್ಲಿ ನಡೆಯಿತು. 2019ರ ಮಾಚ್ ್ರನಲ್ಲಿ ಎರಡು ದಿನ, 2020ರಲ್ಲಿ ಒಂದು ದಿನಕ್ಕೆ ಉತ್ಸವ ಸೀಮಿತಗೊಳಿಸಲಾಗಿತ್ತು. 2021ರಲ್ಲಿ ಉತ್ಸವ ಆಚರಿಸಲಿಲ್ಲ. 2022ರ ಜ.27, 28, 29 ಆಚರಿಸಲಾಯಿತು. 2023ರಲ್ಲಿ ಫೆ.2, 3 ಮತ್ತು 4 ರಂದು ಆಚರಿಸಿದ ರಾಜ್ಯ ಸರ್ಕಾರ ಈಗ ಫೆ.28, ಮಾ.1 ಮತ್ತು 2ರಂದು ಆಚರಿಸಲು ಮುಂದಾಗಿದೆ.
ಯಾವುದೇ ಆಚರಣೆ ಗಳನ್ನು ಸರ್ಕಾರ ತಾರತಮ್ಯ ವಿಲ್ಲದೆ ಬೆಂಬಲಿಸಲಿದೆ. ಹಂಪಿ ಉತ್ಸವ ನವೆಂಬರ್‌ನಲ್ಲಿ ನಡೆಯಬೇಕಿದ್ದು, ಕಾರಣಾಂತರಗಳಿಂದ ಮುಂದೂಡಲಾಗಿತ್ತು. ಕಳೆದ ಬಾರಿ ಫೆಬ್ರವರಿ ಮೊದಲ ವಾರದಲ್ಲಿ ಆಚರಣೆ ಮಾಡಲಾಗಿತ್ತು. ಈಗ ಸಿಎಂ ಫೆ.28ರಿಂದ ಆಚರಣೆಗೆ ಒಪ್ಪಿಗೆ ನೀಡಿದ್ದಾರೆ. ಜನರ ಆಸೆಯಂತೆ ಉತ್ಸವ ಆಚರಣೆಗೆ ನಿಗದಿ ಮಾಡಲಾಗಿದೆ. ಶಾಶ್ವತ ದಿನಾಂಕ ನಿಗದಿಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ಮಾಡಲಾಗುವುದು. - ಬಿ.ಝಡ್.ಜಮೀರ್ ಅಹ್ಮದ್ ಖಾನ್, ಜಿಲ್ಲಾ ಉಸ್ತುವಾರಿ ಸಚಿವ, ವಿಜಯನಗರ