

ನವದೆಹಲಿ: ಇಸ್ರೇಲ್ನಲ್ಲಿ 1,300 ಕ್ಕೂ ಹೆಚ್ಚು ಜನರನ್ನು ಬಲಿಪಡೆದು ಯುದ್ಧಕ್ಕೆ ಕಾರಣವಾದ ಅ.7 ರ ದಾಳಿಯ ಸಂದರ್ಭ 199ಮಂದಿ ಇಸ್ರೇಲಿಗರು ಒತ್ತೆಯಾಳಾದರು. ಇದರಲ್ಲಿ ಒಬ್ಬ ಇಸ್ರೇಲ್ ಮಹಿಳೆಯ ವೀಡಿಯೊವನ್ನು ಹಮಾಸ್ ಈಗ ಬಿಡುಗಡೆ ಮಾಡಿದೆ.
ಹಮಾಸ್‌ನ ಮಿಲಿಟರಿ ವಿಂಗ್ ಇಜ್ ಅದ್-ದಿನ್ ಅಲ್-ಕಸ್ಸಾಮ್ ಬ್ರಿಗೇಡ್ಸ್ ಸೋಮವಾರ 21 ವರ್ಷದ ಮಿಯಾ ಸ್ಕೆಮ್ ವೀಡಿಯೊ ಬಿಡುಗಡೆ ಮಾಡಿದೆ. ಇದರಲ್ಲಿ ಆಕೆ ಮಾತನಾಡಿದ್ದು, ಮುರಿದ ಆಕೆ ತೋಳಿಗೆ ಬ್ಯಾಂಡೇಜ್ ಸುತ್ತಲಾಗಿದೆ.
ಗಾಜಾ ಗಡಿ ಸಮೀಪದ ಇಸ್ರೇಲ್ನ ಸ್ಡೆರೋಟ್‌ನಿಂದ ಬಂದವಳು ಎಂದು ಹೇಳಿದ್ದಾಳೆ. "ದಾಳಿಯ ದಿನದಂದು ನಾನು ಪಾರ್ಟಿಯಲ್ಲಿ ಇದ್ದೆ. ಸಂಗೀತ ಉತ್ಸವದಲ್ಲಿ ಭಾಗವಹಿಸಿದ್ದಾಗ ಹಮಾಸ್ ಕಾರ್ಯಕರ್ತರು ದಾಳಿ ಮಾಡಿದರು. ಅಲ್ಲಿ ಕನಿಷ್ಠ 260 ಜನರು ಕೊಲ್ಲಲ್ಪಟ್ಟರು. ನಾನೂ ಸೇರಿದಂತೆ ಹಲವರನ್ನು ಒತ್ತೆಯಾಳುಗಳಾಗಿ ತೆಗೆದುಕೊಳ್ಳಲಾಯಿತು"
"ಪ್ರಸ್ತುತ ಗಾಯಕ್ಕೆ ಗಾಜಾದಲ್ಲಿ ಚಿಕಿತ್ಸೆ ಮಾಡಿಸಿಕೊಂಡಿದ್ದೇನೆ. ಗಾಯಕ್ಕೆ ಮೂರು ಗಂಟೆಗಳ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೇನೆ. ಅವರು ನನ್ನನ್ನು ನೋಡಿಕೊಳ್ಳುತ್ತಿದ್ದಾರೆ, ಅವರು ನನಗೆ ಚಿಕಿತ್ಸೆ, ಔಷಧಿಗಳನ್ನು ನೀಡುತ್ತಿದ್ದಾರೆ. ಎಲ್ಲವೂ ಸರಿಯಾಗಿದೆ" ಎಂದು ಅವರು ಹೇಳುತ್ತಾರೆ. ನನ್ನ ಕುಟುಂಬಕ್ಕೆ, ನನ್ನ ಹೆತ್ತವರಿಗೆ, ನನ್ನ ಒಡಹುಟ್ಟಿದವರಿಗೆ ಆದಷ್ಟು ಬೇಗ ಮನೆಗೆ ಹಿಂತಿರುಗಬೇಕೆಂದು ನಾನು ಕೇಳುತ್ತೇನೆ. ದಯವಿಟ್ಟು ನಮ್ಮನ್ನು ಇಲ್ಲಿಂದ ಆದಷ್ಟು ಬೇಗ ಕರೆದೊಯ್ಯಿರಿ" ಎಂದು ಕೇವಲ ಒಂದು ನಿಮಿಷದ ವೀಡಿಯೊದಲ್ಲಿ ಮಿಯಾ ಕೇಳಿಕೊಂಡಿದ್ದಾಳೆ.
ಕಳೆದ ವಾರ ಮಿಯಾಳನ್ನು ಅಪಹರಿಸಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು ಖಚಿತಪಡಿಸಿವೆ. ಅಧಿಕಾರಿಗಳು ಮಿಯಾ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಇಸ್ರೇಲ್ ಮಿಲಿಟರಿ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಹಮಾಸ್ ಪ್ರಕಟಿಸಿದ ವೀಡಿಯೊದಲ್ಲಿ, ಅವರು ತಮ್ಮನ್ನು ಮಾನವೀಯತೆ ಮೆರೆವವರು ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ. ಶಿಶುಗಳು, ಮಕ್ಕಳು, ಪುರುಷರು, ಮಹಿಳೆಯರು ಮತ್ತು ವೃದ್ಧರ ಹತ್ಯೆ ಮತ್ತು ಅಪಹರಣ ಮಾಡುವಾಗ ಮನಸ್ಸು ಎಲ್ಲಿ ಹೋಗಿತ್ತು ಎಂದು ಇಸ್ರೇಲ್ ಅಧಿಕಾರಿಗಳು ಪ್ರಶ್ನಿಸುತ್ತಿದ್ದಾರೆ.