

ಈ ಕುರಿತು ಪ್ರತಿಕ್ರಿಯೆ ನೀಡಿದ್ದ ಟ್ರಂಪ್ ‘ಅವರು ಶಾಶ್ವತ ಶಾಂತಿಗೆ ಸಿದ್ಧರಾಗಿದ್ದಾರೆ ಎಂದು ನಾನು ನಂಬುತ್ತೇನೆ. ಇಸ್ರೇಲ್ ತಕ್ಷಣವೇ ಗಾಜಾದ ಮೇಲೆ ಬಾಂಬ್ ದಾಳಿ ನಿಲ್ಲಿಸಬೇಕು. ಆ ಮೂಲಕ ಒತ್ತೆಯಾಳು ಗಳನ್ನು ಸುರಕ್ಷಿತವಾಗಿ ಮತ್ತು ತ್ವರಿತವಾಗಿ ಹೊರಗೆ ಕರೆದುಕೊಂಡು ಬರಬಹುದು. ಬಾಂಬ್ ದಾಳಿ ಮುಂದುವರಿಸುವುದು ಅಪಾಯಕಾರಿ, ನಾವು ಈಗಾಗಲೇ ಪ್ರಸ್ತಾವನೆಯ ವಿವರಗಳ ಕುರಿತು ಚರ್ಚೆ ನಡೆಸುತ್ತಿ ದ್ದೇವೆ’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.
ಯುದ್ಧಾಂತ್ಯಕ್ಕೆ ಸಿದ್ಧತೆ: ಹಮಾಸ್ ದಾಳಿಗೆ ಅಕ್ಟೋಬರ್ 7ರಂದು 2 ವರ್ಷ ಪೂರೈಸುತ್ತಿದ್ದು, ಅದಕ್ಕೂ ಮುನ್ನ ಯುದ್ಧ ನಿಲ್ಲಿಸಲು ಇಸ್ರೇಲ್ ಬದ್ಧವಾಗಿದೆ ಎಂದು ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೆತನ್ಯಾಹು ಕಚೇರಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಇಸ್ರೇಲ್ ಸೇನೆ ಸಹ ಕದನ ವಿರಾಮ ಜಾರಿಗೊಳಿಸಲು ಸಿದ್ಧತೆ ನಡೆಸುತ್ತಿದ್ದೇವೆ ಎಂದು ತಿಳಿಸಿದೆ.
67 ಸಾವಿರ ಜನರ ಸಾವು
2023ರ ಅಕ್ಟೋಬರ್ 7ರ ಬಳಿಕ ಇಸ್ರೇಲ್ ಸೇನೆ ಹಮಾಸ್ ಉಗ್ರರ ವಿರುದ್ಧ ಗಾಜಾದಲ್ಲಿ ನಡೆಸಿದ ದಾಳಿಯಲ್ಲಿ ಇದುವರೆಗೆ ಉಗ್ರರು ಹಾಗೂ ನಾಗರಿಕರು ಸೇರಿದಂತೆ 67 ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಮೃತರಲ್ಲಿ ಮಕ್ಕಳು ಮತ್ತು ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
ಟ್ರಂಪ್ ಕದನ ವಿರಾಮ ಸೂತ್ರಕ್ಕೆ ಹಮಾಸ್ ಭಾಗಶಃ ಒಪ್ಪಿಗೆ ನೀಡಿರುವ ಹಿನ್ನೆಲೆಯಲ್ಲಿ ಇಸ್ರೇಲ್ ಮತ್ತು ಹಮಾಸ್ನ ತಂಡಗಳು ಮಾತುಕತೆ ನಡೆಸಲು ಸಿದ್ಧತೆ ನಡೆಸುತ್ತಿವೆ. ಮಾತುಕತೆ ದಿನಾಂಕ ಮತ್ತು ಸ್ಥಳ ನಿಗದಿ ಆಗಬೇಕಿದೆ. ಹಮಾಸ್ ಬಳಿ ಇರುವ ಒತ್ತೆಯಾಳುಗಳು ಮತ್ತು ಇಸ್ರೇಲ್ ಬಂಧನದಲ್ಲಿರುವ ನೂರಾರು ಪ್ಯಾಲೆಸ್ತೀನಿ ಕೈದಿಗಳ ವಿನಿಮಯಕ್ಕೆ ಶೀಘ್ರದಲ್ಲೇ ಅಂತಿಮ ಸೂತ್ರ ಸಿದ್ಧಗೊಳ್ಳಲಿದೆ. ಇದೇ ವೇಳೆ ಗಾಜಾದ ಭವಿಷ್ಯದ ಯೋಜನೆಗಳ ಕುರಿತೂ ಚರ್ಚೆಗಳು ನಡೆಯಲಿವೆ ಎಂದು ಕದನ ವಿರಾಮದ ಮಾತುಕತೆಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿರುವ ಈಜಿಪ್ಟ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಟ್ರಂಪ್ ನಾಯಕತ್ವಕ್ಕೆ ಮೋದಿ ಸ್ವಾಗತ
ಇಸ್ರೇಲ್ ಮತ್ತು ಹಮಾಸ್ ನಡುವಿನ ಸಂಘರ್ಷ ನಿಲ್ಲಿಸುವ ಮೂಲಕ ಗಾಜಾದಲ್ಲಿ ಶಾಂತಿ ಸ್ಥಾಪಿಸುವಲ್ಲಿ ಗಮನಾರ್ಹ ಪಾತ್ರ ವಹಿಸುತ್ತಿರುವ ಟ್ರಂಪ್ ನಾಯಕತ್ವವನ್ನು ನಾವು ಸ್ವಾಗತಿಸುತ್ತೇವೆ. ಒತ್ತೆಯಾಳುಗಳ ಬಿಡುಗಡೆಯ ಸೂಚನೆ ಸಿಕ್ಕಿದ್ದು, ಇದು ಮಹತ್ವದ ಹೆಜ್ಜೆಯಾಗಿದೆ. ಶಾಶ್ವತ ಮತ್ತು ನ್ಯಾಯಯುತ ಶಾಂತಿಗಾಗಿ ಎಲ್ಲ ಪ್ರಯತ್ನಗಳನ್ನು ಭಾರತ ಬಲವಾಗಿ ಬೆಂಬಲಿಸುತ್ತದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಗಾಜಾದಲ್ಲಿ 6 ಜನರ ಸಾವು
ಗಾಜಾ ಮೇಲೆ ಬಾಂಬ್ ದಾಳಿ ನಡೆಸದಂತೆ ಟ್ರಂಪ್ ಸೂಚಿಸಿದ ಬಳಿಕವೂ ಇಸ್ರೇಲ್ ಸೇನೆ ಗಾಜಾದ ಹಲವೆಡೆ ಬಾಂಬ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಒಟ್ಟು 6 ಜನರು ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.