

ಕಡೂರು: ಇತರ ಕಾರ್ಮಿಕರಿಗೆ ದೊರೆಯುವ ಸವಲತ್ತುಗಳು ಹಮಾಲಿ ಕಾರ್ಮಿಕರಿಗೂ ದೊರೆಯಬೇಕೆಂಬುದು ನಮ್ಮ ಆಶಯ ಎಂದು ಶಾಸಕ ಕೆ.ಎಸ್.ಆನಂದ್ ಹೇಳಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಭಾನುವಾರ ವಿನಾಯಕ ಹಮಾಲಿ ಕಾರ್ಮಿಕರ ಸಂಘದಿಂದ ಶಾಸಕರಿಗೆ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದರು.
ನಿತ್ಯ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರಿಗೆ ಯಾವುದೇ ಸೇವಾ ಭದ್ರತೆ ದೊರೆಯುತ್ತಿಲ್ಲ ಎಂಬುದು ಬೇಸರದ ಸಂಗತಿ. ಅವರಿಗೆ ಸೇವಾ ಭದ್ರತೆ, ಆರೋಗ್ಯ ಮತ್ತು ಅಪಘಾತ ವಿಮೆ, ಅವರ ಮಕ್ಕಳಿಗೆ ವಿದ್ಯಾರ್ಥಿ ವೇತನ ಮುಂತಾದ ಅಗತ್ಯ ಸೌಲಭ್ಯಗಳು ದೊರೆಯಲೇಬೇಕು. ಈ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯುವೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಹಮಾಲಿ ಕಾರ್ಮಿಕರ ಸಂಘಕ್ಕೆ ನಿವೇಶನ ನೀಡಬೇಕೆಂಬ ಬೇಡಿಕೆಯಿದೆ. ಶಾಸಕರ ಜತೆ ಚರ್ಚಿಸಿ ಅಗತ್ಯ ಕ್ರಮವನ್ನು ಪುರಸಭೆ ತನ್ನ ಇತಿಮಿತಿಯಲ್ಲಿ ತೆಗೆದುಕೊಳ್ಳಲಿದೆ. ಸಂಘದ ಅಭಿವೃದ್ಧಿಗೂ ನಮ್ಮ ಸಹಕಾರ ನಿರಂತರವಾಗಿರಲಿದೆ ಎಂದರು.
ಜಿಪಂ ಮಾಜಿ ಸದಸ್ಯ ಶರತ್ ಕೃಷ್ಣಮೂರ್ತಿ ಮಾತನಾಡಿ, ಅಸಂಘಟಿತ ಕಾರ್ಮಿಕರಿಗೆ ಸಿಗಬೇಕಾದ ಆರೋಗ್ಯ ವಿಮೆ ಮುಂತಾದ ಸವಲತ್ತುಗಳು ಹಮಾಲಿ ಕಾರ್ಮಿಕರಿಗೆ ದೊರೆಯಬೇಕು ಎಂದು ಹೇಳಿದರು.
ವಿನಾಯಕ ಹಮಾಲಿ ಕಾರ್ಮಿಕರ ಸಂಘದ ಅಧ್ಯಕ್ಷ ಯೋಗೀಶ್, ಪದಾಧಿಕಾರಿಗಳಾದ ಅಂಜನಪ್ಪ, ಎಚ್.ಎ.ಆನಂದ್, ಕೆ.ಎಂ.ರವಿ, ಶ್ರೀನಿವಾಸ್, ಎಚ್.ಎಸ್.ಮಂಜುನಾಥ್, ಕೆ.ಟಿ.ರಾಜಣ್ಣ, ಪುರಸಭೆ ಸದಸ್ಯ ಕೆ.ಎಂ.ಮೋಹನ್‌ಕುಮಾರ್, ಪಂಗ್ಲಿ ಮಂಜುನಾಥ್, ವಿನಾಯಕ, ಕೆ.ಎಂ.ಹರೀಶ್, ಧರ್ಮರಾಜ್ ಮತ್ತಿತರರಿದ್ದರು.