ಮಲ್ಲೇಶಪ್ಪನವರ ವ್ಯಕ್ತಿತ್ವ ಯುವ ಪೀಳಿಗೆಗೆ ಮಾದರಿಯಾಗಲಿ; ಸದಾಶಿವ ಶ್ರೀ

15-RNR-03
Published on

ಹಾವೇರಿ: ಪ್ರಗತಿಪರ ರೈತರು, ಸಾಮಾಜಿಕ ಕಳಕಳಿ ಹೊಂದಿರುವ ಅಂಗಡಿ ಮಲ್ಲೇಶಪ್ಪನವರ ಆದರ್ಶಗಳು ಕೇವಲ ತಮ್ಮ ಮನೆತನಕ್ಕೆ ಸೀಮಿತಗೊಳ್ಳದೆ, ಪುಸ್ತಕ ರೂಪದಲ್ಲಿ ಅವರ ವ್ಯಕ್ತಿತ್ವ ಅನಾವಣಗೊಂಡಿರುವುದು ಭವಿಷ್ಯದ ಯುವ ಪೀಳಿಗೆಗೆ ಮಾದರಿಯಾಗಲಿದೆ ಎಂದು ಹುಕ್ಕೇರಿಮಠದ ಸದಾಶಿವ ಸ್ವಾಮೀಜಿ ಹೇಳಿದರು.

ತಾಲೂಕಿನ ಹೊಸರಿತ್ತಿ ಗ್ರಾಮದ ಜಿ.ವಿ.ಹಳ್ಳೀಕೆರಿ ಕಾಲೇಜ್​ನ ಸಭಾಂಗಣದಲ್ಲಿ ಭಾನುವಾರ ಏರ್ಪಡಿಸಿದ್ದ ಸಮಾರಂಭದಲ್ಲಿ ಪರೋಪಕಾರಿ ಅಂಗಡಿ ಮಲ್ಲೇಶಪ್ಪನವರ ವ್ಯಕ್ತಿತ್ವ ದರ್ಶನ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ಸಾಹಿತಿ ಸಿ.ಎಸ್​.ಮರಳಿಹಳ್ಳಿ ಅವರು ಅಂಗಡಿ ಮಲ್ಲೇಶಪ್ಪನವರ ಬದುಕಿನ ಎಲ್ಲ ಮಜಲುಗಳನ್ನು ಅಕ್ಷರರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಿದ್ದಾರೆ. ಗ್ರಾಮೀಣ ಭಾಗದಲ್ಲಿ ಜೀವನ ನಡೆಸುತ್ತಿರುವ ಮಲ್ಲೇಶಪ್ಪನವರ ವ್ಯಕ್ತಿತ್ವ ಪುಸ್ತಕ ರೂಪದಲ್ಲಿ ಅನಾವಣಗೊಂಡಿದ್ದು ಅವರು ಹುಟ್ಟಿದ್ದು ಸಾರ್ಥಕವಾಗಿದೆ. ಮಲ್ಲೇಶಪ್ಪನವರು ಅಳವಡಿಸಿಕೊಂಡಿರುವ ಆದರ್ಶಗಳೇ ಅವರ ಬದುಕಿಗೆ ದಾರಿದೀಪವಾಗಿದೆ. ಪರೋಪಕಾರಿ ಎಂಬ ಪದವನ್ನು ಎಲ್ಲರಿಗೂ ಬಳಸಲು ಸಾಧ್ಯವಿಲ್ಲ. ಯಾರು ತಮ್ಮ ಬದುಕನ್ನು ಪರರಿಗಾಗಿ ಮೀಸಲಾಗಿ ಇಟ್ಟಿರುತ್ತಾರೆಯೋ ಅವರಿಗೆ ಮಾತ್ರ ಆ ಶಬ್ಧ ಬಳಸಲು ಸಾಧ್ಯ ಎಂದರು.

ಅಗಡಿ ಅಕ್ಕಿಮಠದ ಗುರುಲಿಂಗ ಸ್ವಾಮೀಜಿ ಮಾತನಾಡಿ, ಜೀವನದಲ್ಲಿ ಏನಾದರು ಸಾಧಿಸುವುದು ಬಹಳ ಮುಖ್ಯ. ಆದರೆ ನಾವು ಜೀವನವನ್ನು ಸಾಗಿಸುವ ಜನರನ್ನು ಬಹಳಷ್ಟು ನೋಡುತ್ತವೆ. ಜೀವನ ಸಾಗಿಸುವ ಬದಲು ಜೀವನದಲ್ಲಿ ಸಾಧನೆ ಮಾಡುವುದು ಮುಖ್ಯ. ಮಲ್ಲೇಶಪ್ಪನವರು ಜೀವನ ಸಾಗಿಸುವ ಬದಲು ಜೀವನದಲ್ಲಿ ಸಾಧಿಸಿದ್ದಾರೆ. ತುಳಿದು ಬದುಕುವುದಕ್ಕಿಂತ ತಿಳಿದು ಬದುಕುವುದು ನಿಜವಾದ ಜೀವನ. ಜೀವನದ ಪ್ರತಿಯೊಂದು ಹೆಜ್ಜೆಯಲ್ಲಿ ಯಾರನ್ನು ತುಳಿಯದೇ ತಿಳಿದು ಬದುಕಿದ್ದು ಮಲ್ಲೇಶಪ್ಪನವರ ಆದರ್ಶ ಬದುಕೇ ಸಾಕ್ಷಿಯಾಗಿದೆ. ಜೀವನ ಸಾರ್ಥಕವಾಗಬೇಕಾದರೆ ಅದು ಅಂಗಡಿ ಮಲ್ಲೇಶಪ್ಪನವರ ರೀತಿ ಬದುಕಿನಲ್ಲಿ ಪರೋಪಕಾರಿಯಾಗಿದ್ದರೆ ಮಾತ್ರ ಸಾಧ್ಯ ಎಂದರು.

ಗುದ್ಲೇಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ಸಂಸ್ಥಾಪಕ ಧರ್ಮದಶಿರ್ ವೀರಣ್ಣ ಚಕ್ಕಿ ಮಾತನಾಡಿ, ಮಲ್ಲೇಶಪ್ಪ ಅಂಗಡಿ ಅವರು ಹಾವೇರಿ ಎಪಿಎಂಸಿ ಅಧ್ಯಕ್ಷರಾಗಿ, ರಾಷ್ಟ್ರೀಯ ಶಿಕ್ಷಣ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿ ಅನೇಕ ಕೊಡುಗೆ ನೀಡಿದ್ದಾರೆ. ಹಾವೇರಿ ತಾಲೂಕಿನ ಪೂರ್ವಭಾಗದಲ್ಲಿ ಅಭಿವೃದ್ಧಿ ಪರ ಕಾರ್ಯಗಳಿಂದ ಹೆಸರುವಾಗಿಯಾಗಿದ್ದು, ಇಂತಹ ಹಿರಿಯ ವ್ಯಕ್ತಿಗಳ ಆದರ್ಶಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.

ಅಗಡಿ ಪ್ರಭುಸ್ವಾಮಿ ಮಠದ ಗುರುಸಿದ್ದ ಸ್ವಾಮೀಜಿ ಆಶೀರ್ವಚನ ನೀಡಿದರು. ಪುಸ್ತಕ ರಚಿಸಿದ ಸಾಹಿತಿ ಸಿ.ಎಸ್​. ಮರಳಿಹಳ್ಳಿ ಹಾಗೂ ಪುಸ್ತಕ ಪ್ರಕಟಿಸಲು ಸಹಕರಿಸಿದ ನಿವೃತ್ತ ಉಪ ತಹಸೀಲ್ದಾರ್​ ವೀರಯ್ಯ ಹಿರೇಮಠ ಅವರನ್ನು ಸನ್ಮಾನಿಸಲಾಯಿತು.

ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ವರ್ತಕ ನಿರಂಜನಪ್ಪ ಪಾವಲಿ, ವಿಶ್ರಾಂತ ಜಿಲ್ಲಾ ಮುಖ್ಯ ನ್ಯಾಯಾಧೀಶ ಸಿ.ವಿ. ಮರಗೂರ, ಬಿಜೆಪಿ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ, ಕಸಾಪ ಪ್ರಥಮ ಜಿಲ್ಲಾಧ್ಯಕ್ಷ ಡಾ. ಕೆ.ಎಚ್​. ಮುಕ್ಕಣ್ಣನವರ, ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ರುದ್ರಪ್ಪ ಹಳ್ಳಿಕೇರಿ, ರಮೇಶ ಏಕಬೋಟೆ, ಸಿದ್ದರಾಜ ಕಲಕೋಟಿ, ಶ್ರೀನಿವಾಸ ಏಕಬೋಟೆ, ಗಿರೀಶ ಅಂಕಲಕೋಟಿ, ಮರಿಗೆಪ್ಪ ಅಂಗಡಿ, ದಾನಪ್ಪ ಅಂಗಡಿ, ಬಸವರಾಜ ಅಂಗಡಿ, ಶಿದ್ರಾಮಪ್ಪ ಅಂಗಡಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net