ಪುತ್ತೂರು: ಮೀನು ಮಾರುಕಟ್ಟೆ ಸಮೀಪ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ಕಡಬ ನಿವಾಸಿ, ಮಾಜಿ ಸರ್ಕಾರಿ ಉದ್ಯೋಗಿ ಹರೀಶ್ ಎಂಬುವರ ಮೇಲೆ ಕಬ್ಬಿಣದ ಸಲಾಕೆಯಿಂದ ಮಾರಣಾಂತಿಕ ಹಲ್ಲೆ ನಡೆದಿದ್ದು, ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳೀಯ ಹಣಕಾಸು ಸಂಸ್ಥೆ ಮ್ಯಾನೇಜರ್ ಪ್ರಸಾದ್ ಎಂಬಾತ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದೆ. ಇಬ್ಬರ ನಡುವೆ ಹಣಕಾಸಿನ ವಿಚಾರವಾಗಿ ವಾಗ್ವಾದ ನಡೆದಿದ್ದು, ವಿಕೋಪಕ್ಕೆ ತಿರುಗಿ ಪ್ರಸಾದ್ ಏಕಾಏಕಿ ಕಬ್ಬಿಣದ ಸಲಾಕೆಯಿಂದ ಹರೀಶ್ ತಲೆಗೆ ಎರಡು ಬಾರಿ ಹೊಡೆದು ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ. ಹರೀಶ್ ತಲೆಯಿಂದ ತೀವ್ರ ರಕ್ತಸ್ರಾವವಾಗಿದ್ದು, ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.