ಅರ್ಧ ರಾಜ್ಯಕ್ಕೆ ಜಲಪ್ರಳಯದ ಭೀತಿ: 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭಾರಿ ಮಳೆ, ನದಿಗಳ ರೌದ್ರಾವತಾರ, ಬದುಕು ತತ್ತರ..

front 1
ಕಾರವಾರದ ಬೋಳ್ವೆಯಲ್ಲಿ ಜಲಾವೃತವಾಗಿದ್ದ ಮನೆಯಿಂದ ಜನರ ರಕ್ಷಣೆ
Published on

ಬೆಂಗಳೂರು: ಮಲೆನಾಡು, ಕೊಡಗು, ಉತ್ತರ ಕನ್ನಡ, ಸೇರಿದಂತೆ 12ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಬಿಟ್ಟೂ ಬಿಡದೆ ಆರ್ಭಟಿಸುತ್ತಿರುವ ಮಳೆ ಹಾಗೂ ಅತಿವೃಷ್ಟಿ ಕಾಣುತ್ತಿರುವ ಮಹಾರಾಷ್ಟ್ರದಿಂದ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಸತತ 3ನೇ ವರ್ಷ ಜಲಪ್ರಳಯದ ಆತಂಕ ಮರುಕಳಿಸಿದೆ. ಜಲ ಸಂಕಷ್ಟದ ಈ ತುರ್ತು ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತ ವದಂತಿ, ಚರ್ಚೆಗಳು ಸಂತ್ರಸ್ತರ ಪಾಲಿಗೆ ಅಭದ್ರತೆ, ಆತಂಕ ಹೆಚ್ಚಿಸಿವೆ. ಮಳೆಯಿಂದಾಗಿ ರಸ್ತೆಗಳು, ಕೃಷಿ ಭೂಮಿಗಳು ಜಲಾವೃತವಾಗಿ ಅಪಾರ ಹಾನಿಯಾಗಿದೆ. ಭೂಕುಸಿತ ಹಾಗೂ ಹಳ್ಳಿಹಳ್ಳಿಗಳೇ ಜಲಾವೃತಗೊಂಡಿರುವ ಕಾರಣ ನೂರಾರು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ಇನ್ನು ನೆರೆಪೀಡಿತ ಜಿಲ್ಲೆಗಳಿಗೆ ತುರ್ತು ಸ್ಪಂದನೆ ನೀಡಿರುವ ಸಿಎಂ ಯಡಿಯೂರಪ್ಪ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಿಗೆ ಕ್ಷೇತ್ರಗಳಿಗೆ ತೆರಳುವಂತೆ ತಾಕೀತು ಮಾಡಿದ್ದಾರೆ. ನೆರೆ ಜಿಲ್ಲೆಗಳ ಡಿಸಿಗಳ ಜತೆ ಸಭೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದ್ದಾರೆ.

5 ದಿನ ಆತಂಕ: ಸದ್ಯಕ್ಕೆ ಗಂಭೀರ ಅನಾಹುತ ಆಗದಿದ್ದರೂ ಇನ್ನೂ ಐದು ದಿನ ಭಾರಿ ಮಳೆ ಮುಂದುವರಿಯುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿರುವುದು ಆತಂಕ ಹೆಚ್ಚಿಸಿದೆ.

ಆರು ಮಂದಿ ಸಾವು: ರಾಜ್ಯದಲ್ಲಿ ಶುಕ್ರವಾರ ಸಂಭವಿಸಿದ ಮಳೆ ಸಂಬಂಧಿ ಅವಘಡಗಳಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ತಾಲೂಕು ಕ್ಯಾತನಬೀಡು ಗ್ರಾಮದಲ್ಲಿ ದನದ ಕೊಟ್ಟಿಗೆ ಕುಸಿದು ವೃದ್ಧ ಬಸವೇಗೌಡ (65) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿಯ ಕಾಪೋಲಿ ಕೆಜಿ ಗ್ರಾಮದಲ್ಲಿ ಜಲಾವೃತಗೊಂಡಿದ್ದ ಮೋಟರ್ ತೆರವುಗೊಳಿಸಲು ತೆರಳಿದ್ದ ರೈತ ಅರವಿಂದ ಶಂಕರ ದೇಸಾಯಿ (38) ವಿದ್ಯುತ್ ರ್ಸ³ಸಿ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ದೊಡ್ನಳ್ಳಿ ಹೋಬಳಿಯ ಚಿನ್ನಾಪುರ ಕೆರೆ ದಂಡೆಯ ಮೇಲೆ ಬೈಕ್​ನಲ್ಲಿ ತೆರಳುತ್ತಿದ್ದ ಗಂಗಾಧರ ಗೌಡ(28) ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ. ಹೊನ್ನಾವರ ಮೋಳ್ಕೋಡ ಗ್ರಾಮದಲ್ಲಿ ಶರಾವತಿ ನದಿಯಲ್ಲಿ ಮೀನುಗಾರಿಕೆಗೆ ತೆರಳಿದ್ದ ಮಾದೇವಿ ಸುಬ್ರಾಯ ಅಂಬಿಗಾ (48) ನೀರು ಪಾಲಾಗಿದ್ದು, ಆಕೆಯ ಪತಿ ಸುಬ್ರಾಯ ಅಂಬಿಗ ಈಜಿ ದಡ ಸೇರಿದ್ದಾರೆ. ಅಂಕೋಲಾ ತಾಲೂಕಿನ ಶಿರೂರಿನ ಮನೆಯಲ್ಲಿ ನೀರು ತುಂಬಿದ್ದರಿಂದ ಕಾಳಜಿ ಕೇಂದ್ರಕ್ಕೆ ಬರುತ್ತಿದ್ದಾಗ ದೋಣಿ ಮಗುಚಿ ಬೀರು ಮಾರು ಗೌಡ(67) ಎಂಬ ಮಹಿಳೆ ಹಾಗೂ ಗಂಗಾಧರ ದೇವು ಗೌಡ ನೀರುಪಾಲಾಗಿದ್ದಾರೆ.

ಹಾಸನ: ಸಕಲೇಶಪುರದಲ್ಲಿ ಹೇಮಾವತಿ ನದಿಯ ನೀರು ಅಕ್ಕಪಕ್ಕದ ಗದ್ದೆ ಬಯಲಿಗೆ ನುಗ್ಗಿ ಬೆಳೆ ಹಾನಿ; ಮರ ಉರುಳಿ ಸಂಚಾರಕ್ಕೆ ಅಡ್ಡಿ, ಹಳ್ಳಿಕಡೆ ವಿದ್ಯುತ್ ಸ್ಥಗಿತ; ಬೇಲೂರು ತಾಲೂಕಿನ ನಾರ್ವೆಪೇಟೆ ಸೇತುವೆ ಮುಳುಗಡೆ.

ಚಿಕ್ಕಮಗಳೂರು: ತುಂಗಾ, ಭದ್ರಾ, ಹೇಮಾವತಿ ನದಿಗಳ ರೌದ್ರಾವತಾರ, ರಸ್ತೆಗೆ ಗುಡ್ಡಗಳು ಜರಿದು ಸಂಚಾರ ಸ್ಥಗಿತ, ಗದ್ದೆ, ತೋಟಗಳು ಜಲಾವೃತ, ಬೆಳೆ ಹಾನಿ.

ಶಿವಮೊಗ್ಗ: ತುಂಗಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ಹೊರಕ್ಕೆ, ಶಿವಮೊಗ್ಗದಲ್ಲಿ ಪ್ರವಾಹದ ಆತಂಕ, ಜಿಲ್ಲೆಯ ಹಲವೆಡೆ ಅಪಾರ ಕೃಷಿ ಭೂಮಿ ಜಲಾವೃತ, ಬೆಳೆ ಹಾನಿ.

ಕೊಡಗು: ಮುಂದುವರಿದ ಮಳೆ ಅಬ್ಬರ, ಭಾಗಮಂಡಲ ಜಲಾವೃತ, ಹಲವೆಡೆ ಗುಡ್ಡಿ ಜರಿತ, ಸಂಪರ್ಕ ಸ್ಥಗಿತ, ಮೈದುಂಬಿದ ನದಿಗಳು.

ದಾವಣಗೆರೆ: ಗಭದ್ರಾ ನದಿಯ ನೀರಿನ ಮಟ್ಟ ಏರಿಕೆ, ಭತ್ತದ ಗದ್ದೆ, ತೋಟಗಳು ಜಲಾವೃತ, ಅಪಾರ ನಷ್ಟ

ಉತ್ತರ ಕನ್ನಡ: 79 ಗ್ರಾಮಗಳಿಗೆ ನುಗ್ಗಿದ ನೀರು, 62 ಕಾಳಜಿ ಕೇಂದ್ರಗಳ ಆರಂಭ 4305 ಜನರ ಸ್ಥಳಾಂತರ , ಕುಮಟಾ-ಶಿರಸಿ, ಯಲ್ಲಾಪುರ-ಅಂಕೋಲಾ, ಕಾರವಾರ-ಜೊಯಿಡಾ, ಕುಮಟಾ-ಸಿದ್ದಾಪುರ ಮಾರ್ಗಗಳಲ್ಲಿ ಗುಡ್ಡ ಕುಸಿತ , ದ್ವೀಪದಂತಾದ ಕಾರವಾರ.

ಯಾದಗಿರಿ: ಮೈದುಂಬಿದ ಕೃಷ್ಣಾ ನದಿ, ನಾರಾಯಣಪುರದ ಬಸವ ಸಾಗರ ಜಲಾಶಯದಿಂದ 3 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ

ಹಾವೇರಿ: 20ಕ್ಕೂ ಹೆಚ್ಚು ಗ್ರಾಮಗಳಿಗೆ ನರೆ ಭೀತಿ, 92ಕ್ಕೂ ಅಧಿಕ ಮನೆ ಕುಸಿತ

ಹುಬ್ಬಳ್ಳಿ: ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗ ವ್ಯಾಪ್ತಿಯ ಘಟ್ಟ ಪ್ರದೇಶದಲ್ಲಿ ಎರಡು ಕಡೆ ಭೂ ಕುಸಿತ , ರೈಲು ಸಂಚಾರ ವ್ಯತ್ಯಯ, ಪ್ರಯಾಣಿಕರ ಪರದಾಟ

ರಾಯಚೂರು: ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ 3 ಲಕ್ಷ ಕ್ಯೂಸೆಕ್ ನೀರು ಹೊರಕ್ಕೆ ,ನೆರೆ ಸೃಷ್ಟಿ.

ಬೆಳಗಾವಿ: ಗೋಕಾಕ, ಮೂಡಲಗಿ, ಮುಧೋಳ ತಾಲೂಕಿನ 80ಕ್ಕೂ ಅಧಿಕ ಗ್ರಾಮಗಳಿಗೆ ನುಗ್ಗಿದ ನೀರು, ಚಿಕ್ಕೋಡಿ ತಾಲೂಕಿನ 9 ಸೇತುವೆಗಳು ಜಲಾವೃತ, ಖಾನಾಪುರ ತಾಲೂಕಿನಲ್ಲಿ ರಸ್ತೆ, ಭೂ ಕುಸಿತದಿಂದಾಗಿ ವಾಹನ, ರೈಲು ಸಂಚಾರ ಸಂಪೂರ್ಣ ಸ್ಥಗಿತ, ನಿಪ್ಪಾಣಿ ತಾಲೂಕಿನ ಕೋಡ್ನಿ ಗ್ರಾಮದ 2 ಸಾವಿರಕ್ಕೂ ಹೆಚ್ಚು ಜನರ ಸ್ಥಳಾಂತರ

ರಾಜ್ಯದಲ್ಲಿ 2019ರಿಂದ ದೊಡ್ಡ ಮಟ್ಟದಲ್ಲಿ ಮಳೆ ಅನಾಹುತ ಸಂಭವಿಸುತ್ತಿದೆ. ಆದರೆ ಅತಿವೃಷ್ಟಿಯ ಕಾಲದಲ್ಲಿ ಬಿಜೆಪಿ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮುಖ್ಯಮಂತ್ರಿ ಬದಲಾವಣೆಯಲ್ಲೇ ಮುಳುಗಿದೆ.

| ಎಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net