ರಾಷ್ಟ್ರಕ್ಕೆ ಎಚ್‌ಎಎಲ್ ಘಟಕ ಸಮರ್ಪಣೆ; ಇಂದು ದೇಶದ ಅತಿದೊಡ್ಡ ಹೆಲಿಕಾಪ್ಟರ್ ಘಟಕಕ್ಕೆ ಮೋದಿ ಚಾಲನೆ


ಬಿದರೆಹಳ್ಳಕಾವಲ್‌ನ ಸಮೀಪ ನಿರ್ಮಾಣಗೊಂಡಿರುವ ಎಚ್‌ಎಲ್ ಹೆಲಿಕಾಪ್ಟರ್ ಘಟಕಉದ್ಘಾಟನಾ ಕಾರ್ಯಕ್ರಮಕ್ಕೆ ಭಾನುವಾರ ನಡೆದ ಭರದ ಸಿದ್ಧತೆ.
ಬಿದರೆಹಳ್ಳಕಾವಲ್‌ನ ಸಮೀಪ ನಿರ್ಮಾಣಗೊಂಡಿರುವ ಎಚ್‌ಎಲ್ ಹೆಲಿಕಾಪ್ಟರ್ ಘಟಕಉದ್ಘಾಟನಾ ಕಾರ್ಯಕ್ರಮಕ್ಕೆ ಭಾನುವಾರ ನಡೆದ ಭರದ ಸಿದ್ಧತೆ.
Published on

ತುಮಕೂರು: ದೇಶದ ಸೇನಾ ಸಾಮರ್ಥ್ಯಕ್ಕೆ ಬಲ ತುಂಬುವ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್)ನ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಫೆ.6ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ.

ವಿಶ್ವಭೂಪಟದಲ್ಲಿ ಕಲ್ಪತರುನಾಡು ತುಮಕೂರು ಜಿಲ್ಲೆಯ ಹೆಸರು ಮೂಡಿಸಲಿರುವ ಜಗತ್ತಿನ 35ನೇ ಹಾಗೂ ದೇಶದ ಅತಿದೊಡ್ಡ ಹೆಲಿಕಾಪ್ಟರ್ ಉತ್ಪಾದನಾ ಘಟಕ ಇದಾಗಿದೆ. ಗುಬ್ಬಿ ತಾಲೂಕು ಬಿದರೆಹಳ್ಳಕಾವಲ್‌ನ 615 ಎಕರೆ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಈ ಘಟಕವನ್ನು ಸೋಮವಾರ ಮಧ್ಯಾಹ್ನ 3.30ಕ್ಕೆ ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಣಾ ಕ್ಷೇತ್ರದಲ್ಲಿ ಆತ್ಮನಿರ್ಭರ ಭಾರತದ ಸಾಧನೆಯನ್ನು ಜಗತ್ತಿಗೆ ಸಾರಲಿದ್ದಾರೆ.

60 ನಿಮಿಷಗಳ ಕಾರ್ಯಕ್ರಮದಲ್ಲಿ ಮೋದಿ ಅವರೊಂದಿಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ಸಿಂಗ್, ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರದ ರಾಜ್ಯ ಸಚಿವ ಎ.ನಾರಾಯಣಸ್ವಾಮಿ, ಸಚಿವರಾದ ಜೆ.ಸಿ.ಮಾಧುಸ್ವಾಮಿ, ಮುರುಗೇಶ್ ನಿರಾಣಿ, ಬಿ.ಸಿ.ನಾಗೇಶ್, ವಿ.ಸೋಮಣ್ಣ , ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್ ವೇದಿಕೆ ಹಂಚಿಕೊಳ್ಳಲಿದ್ದಾರೆ. ಘಟಕದ ಉದ್ಘಾಟನೆ ಜತೆಗೆ ಮೋದಿ ಜಲಜೀವನ್ ಮಿಷನ್, ಚೆನ್ನೈ-ಬೆಂಗಳೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

6,400 ಕೋ.ರೂ.ಯೋಜನಾ ವೆಚ್ಚದ ಎಚ್‌ಎಎಲ್ ಘಟಕದಿಂದ 4 ಸಾವಿರ ಪ್ರತ್ಯಕ್ಷ ಹಾಗೂ 5-6 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆ ಇದ್ದು, ಇಡೀ ಜಿಲ್ಲೆಯ ಚಹರೆಯನ್ನು ಘಟಕ ಬದಲಿಸಲಿದೆ. ಸಮುದಾಯಿತ ಕೇಂದ್ರ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿ (ಸಿಎಸ್‌ಆರ್) ಚಟುವಟಿಕೆ ಅಡಿ ಕೈಗೆತ್ತಿಕೊಳ್ಳಲಿದ್ದು ಈ ಭಾಗದ ಜನಜೀವನ ಬದುಕಿನ ಶೈಲಿಯನ್ನೇ ಬದಲಿಸಲಿದೆ ಎನ್ನುತ್ತಾರೆ ಎಚ್‌ಎಎಲ್ ಸಿಎಂಡಿ ಸಿ.ಬಿ.ಅನಂತಕೃಷ್ಣನ್.

ಬೀಡಿ,ಸಿಗರೇಟ್ ನಿಷಿದ್ಧ: ಮೋದಿ ಕಾರ್ಯಕ್ರಮ ವೀಕ್ಷಿಸಲು ತೆರಳುವರು ಮೊಬೈಲ್ ಹೊರತುಪಡಿಸಿ ಇನ್ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿಲ್ಲ. ಇದಲ್ಲದೆ, ಬೀಡಿ, ಸಿಗರೇಟ್, ಬೆಂಕಿಪೊಟ್ಟಣವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಸೂಚನೆ ನೀಡಿದ್ದಾರೆ.

ಮಾರ್ಗ ಬದಲಾವಣೆ: ಫೆ.6ರಂದು ಬೆಳಗ್ಗೆಯಿಂದ ಸಂಜೆಯವರೆಗೂ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ವಾಹನಗಳ ಸಂಚಾರದ ಮಾರ್ಗ ಬದಲಾವಣೆ ಮಾಡಲಾಗಿದೆ. ವಾಹನ ಚಾಲಕರು, ಸಾರ್ವಜನಿಕರು ಮಾರ್ಗ ಬದಲಾವಣೆ ಬಗ್ಗೆ ಗಮನಹರಿಸಬೇಕು. ಮಾರಶೆಟ್ಟಿಹಳ್ಳಿ ರಸ್ತೆ ಭಾಗದಲ್ಲಿ 150 ಎಕರೆ ಪ್ರದೇಶದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

1000 ಬಸ್‌ಗಳ ನಿಲುಗಡೆ ವ್ಯವಸ್ಥೆ ಇರಲಿದೆ. ಇನ್ನೂ ಸೋಪನಹಳ್ಳಿ-ಯಲ್ಲಾಪುರದ ಕಡೆ ಲಘುವಾಹನಗಳು, ದ್ವಿಚಕ್ರ ವಾಹನಗಳ ಪಾರ್ಕಿಂಗ್‌ಗೆ ವ್ಯವಸ್ಥೆ ಮಾಡಲಾಗಿದೆ. ಪಾರ್ಕಿಂಗ್ ಜಾಗದಲ್ಲೇ ದಾಸೋಹದ ಕೌಂಟರ್ ತೆರೆಯಲಾಗಿದೆ.

60 ನಿಮಿಷ 3 ಯೋಜನೆಗೆ ಚಾಲನೆ: ಪ್ರಧಾನಿ ಮೋದಿ ಭಾಗವಹಿಸಲಿರುವ 60 ನಿಮಿಷದ ಕಾರ್ಯಕ್ರಮದಲ್ಲಿ 3 ಯೋಜನೆಗೆ ಚಾಲನೆ ಸಿಗಲಿದೆ. ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕದಲ್ಲಿ ಎಲ್‌ಯುಎಚ್ ಅನ್ನು ಮೋದಿ ಅನಾವರಣಗೊಳಿಸುವರು. ಈ ಸಂದರ್ಭದಲ್ಲಿ ಎಚ್‌ಎಎಲ್ ಅಧಿಕಾರಿಗಳ ಜತೆ ಕೆಲಕಾಲ ಮಾಹಿತಿ ಪಡೆಯುವರು. ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ತಿಪಟೂರು, ಚಿಕ್ಕನಾಯಕನಹಳ್ಳಿ, ತುರುವೇಕೆರೆ (ಭಾಗಶಃ) ತಾಲೂಕಿನ ಮನೆ ಮನೆಗೆ ಗಂಗೆ ಹರಿಸುವ 550 ಕೋಟಿ ರೂ., ಹಾಗೂ ಜಿಲ್ಲೆಯ 2,600 ಹಳ್ಳಿಗಳಿಗೆ, 5,500 ಜನವಸತಿ ಪ್ರದೇಶಗಳ ಮನೆಗಳಿಗೆ ನೀರು ಹರಿಸುವ 1950 ಕೋಟಿ ರೂ., ಮೊತ್ತದ ಜಲ್ ಜೀವನ್ ಮಿಷನ್ ಶಂಕುಸ್ಥಾಪನೆಯನ್ನು ಮೋದಿ ನೆರವೇರಿಸಲಿದ್ದಾರೆ. ಜತೆಗೆ 1701 ಕೋ.ರೂ., ವೆಚ್ಚದ ಚೆನ್ನೈ-ಬೆಂಗಳೂರು ಇನ್ಫಾಸ್ಟ್ರಕ್ಚರ್ ಕಾರಿಡಾರ್ (ಸಿಬಿಐಸಿ) ಯೋಜನೆಗೂ ಮೋದಿ ಶಿಲನ್ಯಾಸ ನೆರವೇರಿಸುವರು.

ಗೃಹ ಸಚಿವರ ನೇತೃತ್ವದಲ್ಲಿ ಸಭೆ ಪ್ರಧಾನಿ ಮೋದಿ ಆಗಮನ ಹಾಗೂ ಈ ಕಾರ್ಯಕ್ರಮಕ್ಕೆ 1 ಲಕ್ಷಕ್ಕು ಹೆಚ್ಚು ಜನ ಸೇರುವ ಸಾಧ್ಯತೆ ಹಿನ್ನೆಲೆಯಲ್ಲಿ ಗೃಹ ಸಚಿವ ಆರಗಜ್ಞಾನೇಂದ್ರ ನೇತೃತ್ವದಲ್ಲಿ ಭಾನುವಾರ ಸಂಜೆ ಕಾನೂನು ಸುವ್ಯವಸ್ಥೆ ಹೆಚ್ಚವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, ಕೇಂದ್ರವಲಯದ ಐಜಿಪಿ ರವಿಕಾಂತೇಗೌಡ ಹಾಗೂ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿ ಯಾವುದೇ ರೀತಿಯಲ್ಲೂ ಭದ್ರತಾ ಲೋಪವಾಗದಂತೆ, ಸಾರ್ವಜನಿಕರಿಗೆ ತೊಂದರೆ ಆಗದಂತೆ ಬಂದೋಬಸ್ತ್ ಕೈಗೊಳ್ಳುವಂತೆ ಸೂಚನೆ ನೀಡಿದರು. ಅಲ್ಲದೆ, ಸಮಾರಂಭದ ಸ್ಥಳ ಬಿದರೆಹಳ್ಳಕಾವಲ್‌ಗೆ ಭೇಟಿ ನೀಡಿ ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು.

ಎಚ್‌ಎಎಲ್ ಹೆಲಿಕಾಪ್ಟರ್ ಘಟಕ:

ಬಿದರೆಹಳ್ಳಕಾವಲ್‌ನ ಸಮೀಪ ನಿರ್ಮಾಣಗೊಂಡಿರುವ ಎಚ್‌ಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನಾ ಕಾರ್ಯಕ್ರಮಕ್ಕೆ ಭಾನುವಾರ ನಡೆದ ಭರದ ಸಿದ್ಧತೆ.
ಉತ್ಪಾದನಾ ಘಟಕ ವಿಸ್ತೀರ್ಣ: 615 ಎಕರೆ ಯೋಜನಾ ವೆಚ್ಚ: 6400 ಕೋಟಿ ರೂ., ಮಂಜೂರಾತಿ: 2009-10ರ ಯಪಿಎ ಸರ್ಕಾರದಲ್ಲಿ ಮಂಜೂರಾತಿ ಶಂಕುಸ್ಥಾಪನೆ: ಜ.3, 2016 ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ: ಫೆ.6, 2023 ಪ್ರಧಾನಿ ಮೋದಿ ಅವರಿಂದ

ಒನ್ ಸ್ಟಾಪ್ ಸಲ್ಯೂಷನ್!: ಎಚ್‌ಎಎಲ್ ಘಟಕದಲ್ಲಿ ಭಾರತೀಯ ಭೂ ಹಾಗೂ ವಾಯುಸೇನೆ ಯುದ್ಧ ಬಳಕೆಗೆ ಲಘು ಹೆಲಿಕಾಪ್ಟರ್ ಉತ್ಪಾದನಾ ಮಾಡಲಾಗುವುದು. 3ಟನ್ ತೂಕದ ಯುದ್ಧ ಬಳಕೆ ಲಘು ಹೆಲಿಕಾಪ್ಟರ್ ಘಟಕದಲ್ಲಿ ನಿರ್ಮಾಣವಾಗಲಿದೆ. ಸ್ವದೇಶಿ ನಿರ್ಮಿತ ಕಡಿಮೆ ತೂಕದ ಹೆಲಿಕ್ಯಾಪ್ಟರ್ ಅನ್ನು ಎಚ್‌ಎಎಲ್ ವಿನ್ಯಾಸಗೊಳಿಸಿ, ಅಭಿವೃದ್ಧಿಪಡಿಸಿದೆ. ಮುಂದಿನ ದಿನಗಳಲ್ಲಿ 10 ಟನ್, 12 ಟನ್ ತೂಕದ ಹೆಲಿಕಾಪ್ಟರ್ ಉತ್ಪಾದನಾ ಘಟಕವನ್ನು ಆರಂಭಿಸಲಿದೆ. ಇದಲ್ಲದೆ, ಹೆಲಿಕಾಪ್ಟರ್ ನಿರ್ವಹಣೆ, ರಿಪೇರಿ ಹಾಗೂ ಸರ್ವೀಸ್ (ಎಂಆರ್‌ಒ) ಕೂಡ ಒಂದೇ ಸೂರಿನಡಿ (ಒನ್ ಸ್ಟಾಪ್ ಸಲ್ಯೂಷನ್) ಮಾಡಲು ಉದ್ದೇಶಿಸಲಾಗಿದೆ.

ಸಂಸದರಿಂದ ಸಿದ್ದರಾಮೇಶ್ವರ, ಗುಬ್ಬಿಯಪ್ಪನ ಬೆಳ್ಳಿ ಚಿತ್ರ : ಪ್ರಧಾನಿ ಮೋದಿ ಅವರಿಗೆ ಕಾಯಕಯೋಗಿ ಗೋಡೆಕೆರೆಯ ಸಿದ್ದರಾಮೇಶ್ವರ, ಗುಬ್ಬಿ ಚನ್ನಬಸವೇಶ್ವರರ ಬೆಳ್ಳಿಯ ಮೂರ್ತಿಗಳ ಫೋಟೋ ಫ್ರೇಮ್ ಹಾಗೂ ಶಿವಕುಮಾರ ಶ್ರೀಗಳ ಪ್ರತಿಮೆಯನ್ನು ಸಂಸದ ಜಿ.ಎಸ್.ಬಸವರಾಜು ಜಿಲ್ಲೆಯ ಜನತೆ ಪರವಾಗಿ ಅಭಿನಂದನಾಪೂರ್ವಕವಾಗಿ ನೀಡಿ ಗೌರವಿಸಲಿದ್ದಾರೆ. ಎಚ್‌ಎಎಲ್ ಘಟಕ ಜಿಲ್ಲೆಯಲ್ಲಿ ಸ್ಥಾಪನೆಯಾಗುವುದರ ಹಿಂದೆ ಜಿ.ಎಸ್.ಬಸವರಾಜು ಅವರ ಅವಿರತ ಶ್ರಮವಿದೆ.

ಶೋಭಾಯಾತ್ರೆ, ಬೈಕ್ ರ‌್ಯಾಲಿ: ಎಚ್‌ಎಎಲ್ ಘಟಕವು ಜಿಲ್ಲೆಯ ಮುಕುಟಮಣಿಯಾಗಲಿದ್ದು, ಈ ಹೆಮ್ಮೆಯ ಕ್ಷಣ ಸಾಕ್ಷೀಕರಿಸಲು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಬಿಜೆಪಿ ತುಮಕೂರು ಸಂಘಟನಾತ್ಮಕ ಜಿಲ್ಲೆ ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳಾದ ತುಮಕೂರು ನಗರ, ತುಮಕೂರು ಗ್ರಾಮಾಂತರ, ಗುಬ್ಬಿ, ತುರುವೇಕೆರೆ, ಚಿಕ್ಕನಾಯನಹಳ್ಳಿ, ಕುಣಿಗಲ್, ತಿಪಟೂರು ಮಂಡಲಗಳ ಪದಾಧಿಕಾರಿಗಳು, ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಪ್ರಮುಖ ರಸ್ತೆಗಳಲ್ಲಿ ಸಂಭ್ರಮದ ಶೋಭಾಯಾತ್ರೆ ಹಾಗೂ ಬೃಹತ್ ಬೈಕ್ ರ‌್ಯಾಲಿಗಳ ಮೂಲಕ ನಿಟ್ಟೂರಿನ ಬಿದರೆಹಳ್ಳಕಾವಲ್‌ನ ಕಾರ್ಯಕ್ರಮದ ಸ್ಥಳಕ್ಕೆ ಆಗಮಿಸುವುದು ಗಮನಸೆಳೆಯಲಿ

ಮೋದಿ ಕಾರ್ಯಕ್ರಮ ಬಿಜೆಪಿ ಹೈಜಾಕ್!?: ಎಚ್‌ಎಎಲ್ ಘಟಕ ಲೋಕಾರ್ಪಣೆ ಕಾರ್ಯಕ್ರಮವು ಸರ್ಕಾರಿ ಪ್ರಾಯೋಜಿತವಾಗಿದ್ದು ಬಿಜೆಪಿ ಇದನ್ನು ಹೈಜಾಕ್ ಮಾಡಿದೆ. ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಪ್ರಧಾನಿ ಮೋದಿ ಭಾಗವಹಿಸುವ ಕಾರ್ಯಕ್ರಮದ ಸಂಪೂರ್ಣ ಲಾಭ ಪಡೆಯಲು ನಿರ್ಧರಿಸಿದೆ. ಹಾಗಾಗಿ, ಮೋದಿ ಜತೆಗೆ ವೇದಿಕೆ ಹಂಚಿಕೊಳ್ಳಲು ಜಿಲ್ಲೆಯ ಎಲ್ಲಾ ಬಿಜೆಪಿ ಶಾಸಕರು, ಎಂಎಲ್ಸಿಗಳಿಗು ಅವಕಾಶ ಒದಗಿಸಿ ಪ್ರಧಾನಮಂತ್ರಿ ಕಚೇರಿ (ಪಿಎಂಒ) ಕೊನೆಘಳಿಗೆಯಲ್ಲಿ ಗ್ರೀನ್ ಸಿಗ್ನಲ್ ಕೊಟ್ಟಿದೆ. ಮೋದಿ ಭೇಟಿ ಜಿಲ್ಲಾ ಬಿಜೆಪಿಗೆ ಬೂಸ್ಟರ್ ಡೋಸ್ ಆಗುವ ಲೆಕ್ಕಾಚಾರಗಳಿವೆ. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಸಚಿವ ಜೆ.ಸಿ.ಮಾಧುಸ್ವಾಮಿ, ಬಿ.ಸಿ.ನಾಗೇಶ್, ಸಂಸದ ಜಿ.ಎಸ್.ಬಸವರಾಜು, ರಾಜ್ಯಸಭಾ ಸದಸ್ಯ ಜಗ್ಗೇಶ್ ಅಲ್ಲದೆ, ಜಿಲ್ಲೆಯ ಶಾಸಕರಾದ ಜಿ.ಬಿ.ಜ್ಯೋತಿಗಣೇಶ್, ಮಸಾಲಜಯರಾಂ, ಡಾ.ಸಿ.ಎಂ.ರಾಜೇಶ್‌ಗೌಡ, ಎಂಎಲ್ಸಿಗಳಾದ ಚಿದಾನಂದಗೌಡ, ವೈ.ಎ.ನಾರಾಯಣಸ್ವಾಮಿ ಕೂಡ ಮೋದಿ ಜತೆ ಮಿಂಚಲಿದ್ದಾರೆ.

ಶಿಲಾನ್ಯಾಸ ನೆರವೇರಿಸಿದ್ದ ಪ್ರಧಾನಿ ಮೋದಿ!: ಯುಪಿಎ ಸರ್ಕಾರದ ಅವಧಿಯಲ್ಲಿ ಮಂಜೂರಾಗಿದ್ದ ಎಚ್‌ಎಎಲ್ ಘಟಕಕ್ಕೆ ಗುಬ್ಬಿ ತಾಲೂಕು ನಿಟ್ಟೂರು ಹೋಬಳಿ ಬಿದರೆಹಳ್ಳ ಕಾವಲ್‌ನಲ್ಲಿ 610 ಎಕರೆ ಭೂಮಿಯನ್ನು 2014ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿ, ಹಸ್ತಾಂತರ ಮಾಡಿತ್ತು. ಜ.3, 2016ರಲ್ಲಿ ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೇರವೇರಿಸಿದ್ದರು. ಬರೋಬ್ಬರಿ 7 ವರ್ಷಗಳ ಬಳಿಕ ಇದೀಗ ಮೋದಿ ಅವರೇ ಘಟಕದ ಉದ್ಘಾಟನೆ ನೇರವೇರಿಸುತ್ತಿರುವುದು ವಿಶೇಷವೆನಿಸಿದೆ. ಈ ಹೆಮ್ಮೆಯ ಕ್ಷಣವನ್ನು ಸಾಕ್ಷೀಕರಿಸಲು 1 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಎನ್‌ಎಚ್-206ರ ವಾಹನ ಮಾರ್ಗ ಕೂಡ ಬದಲಿಸಲಾಗಿದೆ.

ಶನಿವಾರ, ಭಾನುವಾರ ಊಟಕ್ಕಾಗಿ ಹರಸಾಹಸ ಆಯೋಜಕರಿಗೆ ಹಿಡಿಶಾಪ; ಊಟ, ನೀರಿಗಾಗಿ ಪೊಲೀಸರಿಂದ ಪರದಾಟ

ಪ್ರಧಾನಿ ಮೋದಿ ಕಾರ್ಯಕ್ರಮ ಹಿನ್ನೆಲೆಯಲ್ಲಿ ಗುಬ್ಬಿ ತಾಲೂಕು ಬಿದರೆಹಳ್ಳಕಾವಲ್ ಬಳಿ ಭದ್ರತೆಗೆ ನಿಯೋಜಿಸಿದ್ದ ಪೊಲೀಸರು ಊಟದ ಪೊಟ್ಟಣ ಪಡೆಯಲು ಮುಗಿಬಿದ್ದಿರುವ ದೃಶ್ಯ.

ತುಮಕೂರು: ಪ್ರಧಾನಿ ನರೇಂದ್ರ ಮೋದಿ ಕಾರ್ಯಕ್ರಮದಲ್ಲಿ ಭದ್ರತೆಗಾಗಿ ನಿಯೋಜಿಸಲಾಗಿರುವ ಪೊಲೀಸರು ಕುಡಿಯುವ ನೀರು, ಊಟಕ್ಕಾಗಿ ಪರದಾಡಿದ ಪ್ರಸಂಗ ನಡೆಯಿತು.

ಎಚ್‌ಎಎಲ್ ಹೆಲಿಕಾಪ್ಟರ್ ಉತ್ಪಾದನಾ ಘಟಕ ಲೋಕಾರ್ಪಣೆಯ 1 ಗಂಟೆಯ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗವಹಿಸುತ್ತಿದ್ದು ಶನಿವಾರದಿಂದಲೇ ಭದ್ರತಾ ವ್ಯವಸ್ಥೆಯನ್ನು ಪೊಲೀಸರು ಕೈಗೊಂಡಿದ್ದಾರೆ. 1 ಲಕ್ಷಕ್ಕೂ ಹೆಚ್ಚು ಕಾರ್ಯಕ್ರಮಕ್ಕೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಲೋಪ ಆಗದಂತೆ ಸೂಕ್ತ ಭದ್ರತೆ ಕೈಗೊಳ್ಳಲು 3 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಶನಿವಾರವೇ ಗುಬ್ಬಿ ತಾಲೂಕು ಬಿದರೆಹಳ್ಳ ಕಾವಲ್ ಕಾರ್ಯಕ್ರಮ ನಡೆಯುವ ಸ್ಥಳ ಸೇರಿದಂತೆ ಜನ, ವಾಹನ ಸಂಚಾರ ದಟ್ಟಣೆ ಏರ್ಪಡದೆ ಎಲ್ಲೆಡೆ ಪೊಲೀಸರನ್ನು ನಿಯೋಜಿಸಲಾಗಿದೆ. ಹಾಗಾಗಿ, ಶನಿವಾರ ಸಂಜೆ ಬಂದಿಳಿದಿರುವ ಪೊಲೀಸರು ರಾತ್ರಿ ಊಟಕ್ಕೆ ಪರದಾಡಿದ್ದಾರೆ.

ಅಲ್ಲದೆ, ಭಾನುವಾರ ಬೆಳಗ್ಗೆ ಉಪಹಾರ, ಮಧ್ಯಾಹ್ನ ಊಟ ಅಲ್ಲದೆ ಕುಡಿಯುವ ನೀರು ಇಲ್ಲದೆ ಪೊಲೀಸರು ಬಳಲಿದ್ದಾರೆ. ಪೊಲೀಸರಿಗೆ ಊಟದ ವ್ಯವಸ್ಥೆ ಮಾಡಲು ಕಾರ್ಯಕ್ರಮ ಆಯೋಜಕರು ವಿಫಲರಾಗಿದ್ದು ಹಿಡಿಶಾಪಕ್ಕೆ ಗುರಿಯಾಗಿದ್ದಾರೆ. ಇಲಾಖೆ ವತಿಯಿಂದ ಊಟದ ಪೊಟ್ಟಣ ವ್ಯವಸ್ಥೆ ಮಾಡಿ ಹಂಚಲು ಮುಂದಾದಾಗ ಊಟದ ಪೊಟ್ಟಣ ಪಡೆಯಲು ಪೊಲೀಸರು ಮುಗಿ ಬಿದ್ದಿದ್ದು ಹಸಿವಿನ ನೈಜ ದರ್ಶನವಾಯಿತು.

ಇದೊಂದು ಸಂಭ್ರಮದ ಕ್ಷಣ. ಏಷ್ಯಾದ ಅತಿದೊಡ್ಡ ಹೆಲಿಕಾಪ್ಟರ್ ಘಟಕ ಇದಾಗಿದೆ. ಸಣ್ಣಪುಟ್ಟ ಲೋಪಗಳು, ಹೆಚ್ಚುಕಮ್ಮಿ ಆಗುತ್ತಿರುತ್ತವೆ. ಪೊಲೀಸರಿಗೆ ಅನ್ನ, ಸೀರು ಸಿಗದೆ ಪರದಾಡಿರುವುದು ಬೇಸರದ ಸಂಗತಿ. ನಂತರ ಪರಿಶೀಲಿಸಿ ಎಲ್ಲರಿಗೂ ಸೂಕ್ತ ವ್ಯವಸ್ಥೆ ಮಾಡಲಾಗಿದೆ. | ಆರಗ ಜ್ಞಾನೇಂದ್ರ ಗೃಹ ಸಚಿವ

3 ಸಾವಿರ ಪೊಲೀಸರ ನಿಯೋಜನೆ: ಕೇಂದ್ರವಲಯ ಐಜಿ, 7 ಪೊಲೀಸ್ ವರಿಷ್ಠಾಧಿಕಾರಿಗಳು, 20 ಡಿಎಸ್ಪಿ, 50 ಪೊಲೀಸ್ ಇನ್ಸೆಪೆಕ್ಟರ್‌ಗಳು, 119 ಸಬ್ ಇನ್ಸ್‌ಪೆಕ್ಟರ್‌ಗಳು, 239 ಎಎಸ್‌ಐಗಳು, 1202 ಮುಖ್ಯಪೇದೆ/ ಪೇದೆಗಳು, 400 ಹೋಂಗಾರ್ಡ್‌ಗಳು ಹಾಗೂ 14 ಜಿಲ್ಲಾ ಸಶಸ್ತ್ರ ಮೀಸಲು ಪಡೆ ತುಕುಡಿ, 12 ಕೆಎಸ್‌ಆರ್‌ಪಿ ತುಕುಡಿಗಳನ್ನು ಭದ್ರತಾ ವ್ಯವಸ್ಥೆಗೆ ನಿಯೋಜಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net