

ಬೆಂಗಳೂರು: ಆಯುರ್ವೆದ ಚಿಕಿತ್ಸೆಗೆಂದು ದಕ್ಷಿಣ ಆಫ್ರಿಕಾಕ್ಕೆ ತೆರಳಿರುವ ಹಕ್ಕಿಪಿಕ್ಕಿ ಕ್ಯಾಂಪ್ನ 44 ಜನರು ಲಾಕ್ಡೌನ್ ಕಾರಣದಿಂದ ಸಮಸ್ಯೆಗೆ ಸಿಲುಕುವಂತಾಗಿದೆ. ಮಾ. 24ರಂದು ಭಾರತದಲ್ಲಿ ಲಾಕ್ಡೌನ್ ಘೋಷಿಸಲಾಯಿತು. ಅದಕ್ಕೂ ಮುನ್ನವೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸ್ಥಗಿತಗೊಳಿಸಲಾಯಿತು. ಅಲ್ಲದೆ ಮಾ. 27ರಂದು ದಕ್ಷಿಣ ಆಫ್ರಿಕಾದಲ್ಲಿ ಲಾಕ್ಡೌನ್ ಮಾಡಲಾಯಿತು. ಹೀಗಾಗಿ ಎರಡೂ ದೇಶಗಳ ನಡುವಿನ ವಿಮಾನಯಾನ ಸಂಪರ್ಕ ಕಡಿತಗೊಂಡಿದ್ದು, ಅಲ್ಲಿರುವ ಭಾರತೀಯರು ಇಲ್ಲಿಗೆ ಬರದ ಸ್ಥಿತಿ ನಿರ್ವಣವಾಗಿದೆ. ಭಾರತೀಯರಿಗೆ ಆಯುರ್ವೆದ ಚಿಕಿತ್ಸೆ ನೀಡುವುದು, ಮಸಾಜ್ ಮಾಡುವ ಸಲುವಾಗಿ ತೆರಳಿದ್ದ ಶಿವಮೊಗ್ಗದ ಹಕ್ಕಿಪಿಕ್ಕಿ ಕ್ಯಾಂಪ್ನ 44 ಮಂದಿ ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿ ಹಾಕಿಕೊಳ್ಳುವಂತಾಗಿದೆ.
17 ದಿನಗಳಿಂದ ಹೋಟೆಲ್ನಲ್ಲಿ ಉಳಿದಿರುವ ಇವರು, ಊಟ ಮತ್ತು ಹಣವಿಲ್ಲದೆ ಸಮಸ್ಯೆ ಅನುಭವಿಸುವಂತಾಗಿದೆ. ಅದರಲ್ಲೂ ಜೊಹಾನ್ಸ್ಬರ್ಗ್ನಲ್ಲಿರುವ 16 ಜನರನ್ನು ಹಣ ಪಾವತಿಸದಿದ್ದರೆ ಹೋಟೆಲ್ನಿಂದ ಹೊರಹಾಕುವುದಾಗಿ ಮಾಲೀಕರು ಹೇಳುತ್ತಿದ್ದಾರೆ. ಭಾರತೀಯ ಮೂಲದ ಕೆಲವರು ಅವರಿಗೆ ಆಹಾರ ನೀಡುತ್ತಿದ್ದಾರಾದರೂ, ವಸತಿಗಾಗಿ ಇರುವ ಹೋಟೆಲ್ ಬಿಲ್ ಪಾವತಿಸಲಾಗದೆ ಸಮಸ್ಯೆಗೆ ಸಿಲುಕುವಂತಾಗಿದೆ.
ರಾಯಭಾರಿ ಕಚೇರಿ ಭರವಸೆ: ತಮಗಾಗಿರುವ ಸಮಸ್ಯೆ ಕುರಿತು ದಕ್ಷಿಣ ಆಫ್ರಿಕಾದಲ್ಲಿನ ಭಾರತದ ರಾಯಭಾರಿ ಕಚೇರಿಯನ್ನು ಸಂರ್ಪಸಿದ್ದಾರೆ. ಅವರನ್ನು ವಾಪಸ್ ಕಳುಹಿಸುವ ಕುರಿತು ರಾಯಭಾರಿ ಕಚೇರಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಆದರೆ, ಭಾರತದಲ್ಲೂ ಲಾಕ್ಡೌನ್ ಇರುವುದರಿಂದ ಅವರನ್ನು ಅಲ್ಲಿಂದ ಕಳುಹಿಸುವುದು ಹೇಗೆ ಎಂಬ ಯೋಚನೆ ಅಧಿಕಾರಿಗಳದ್ದು.
ಆಫ್ರಿಕಾದಲ್ಲಿರುವ ಭಾರತೀಯರಿಗೆ ಮಸಾಜ್, ಆಯುರ್ವೆದ ಚಿಕಿತ್ಸೆ ನೀಡಲು ಬಂದಿದ್ದೆವು. ದಕ್ಷಿಣ ಆಫ್ರಿಕಾದಲ್ಲಿ ಲಾಕ್ಡೌನ್ ಮಾಡಿದ್ದರಿಂದ ನಾವೆಲ್ಲ ಇಲ್ಲಿಯೇ ಸಿಕ್ಕಿಕೊಳ್ಳುವಂತಾಗಿದೆ. ಭಾರತ ಸರ್ಕಾರ ನಮ್ಮನ್ನು ದೇಶಕ್ಕೆ ಕರೆಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. | ರಾಜು ಹಿಮಾಲಯ, ದಕ್ಷಿಣ ಆಫ್ರಿಕಾದಲ್ಲಿ ಸಿಕ್ಕಿ ಹಾಕಿಕೊಂಡಿರುವವರು