

ನವದೆಹಲಿ: (Air India) ಅಹಮದಾಬಾದ್ನಿಂದ ಲಂಡನ್ನ ಗ್ಯಾಟ್ವಿಕ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ಮೇಘನಾನಿ ನಗರದಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನವಾಗಿ ಘನಘೋರ ದುರಂತ ಸಂಭವಿಸಿತ್ತು. ಏರ್ ಇಂಡಿಯಾ ವಿಮಾನ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ. ಈ ಪೈಕಿ 241 ಮಂದಿ ವಿಮಾನದಲ್ಲಿ ಇದ್ದವರಾಗಿದ್ದರೆ, ಇನ್ನುಳಿದವರು ವೈದ್ಯಕೀಯ ಕಾಲೇಜು ಹಾಸ್ಟೆಲ್ನಲ್ಲಿ ಇದ್ದವರು ಹಾಗೂ ಸ್ಥಳೀಯ ನಿವಾಸಿಗಳು ಎಂಬುದು ತಿಳಿದು ಬಂದಿದೆ. ಜೂನ್ 12 ರಂದು ಲಂಡನ್‌ಗೆ ಹಾರಲು ಯೋಜಿಸಿದ್ದ ಏರ್ ಇಂಡಿಯಾ ವಿಮಾನವನ್ನು ರದ್ದುಗೊಳಿಸಿ ಪ್ರಾಣಾಪಾಯದಿಂದ ಪಾರಾಗಿರುವ ಗುಜರಾತ್‌ನ ವೈದ್ಯರೊಬ್ಬರು ತಮ್ಮ ಪತ್ನಿ ಮತ್ತು ಕುಟುಂಬ ಸದಸ್ಯರಿಗೆ ಧನ್ಯವಾದ ತಿಳಿಸಿದ್ದಾರೆ.
ಉಮಂಗ್ ಪಟೇಲ್ ವೃತ್ತಿಯಲ್ಲಿ ವೈದ್ಯ.ಅವರು ಕಳೆದ ಐದು ವರ್ಷಗಳಿಂದ ಲಂಡನ್ನ ನಾರ್ಥಾಂಪ್ಟನ್ನಲ್ಲಿ ವಾಸವಿದ್ದಾರೆ. ಉಮಂಗ್ ಅವರ ತಂದೆ ಕೂಡ ವೈದ್ಯರೇ ಆದರೆ ಅವರು ಪಾರ್ಶ್ವವಾಯುವಿಗೆ ತುತ್ತಾಗಿದ್ದ ಕಾರಣ ಅನಿವಾರ್ಯವಾಗಿ ಭಾರತಕ್ಕೆ ಬಂದಿದ್ದರು. ಡಾ. ಉಮಾಂಗ್ ಪಟೇಲ್ ಅವರು ಯುಕೆಯಿಂದ ತಮ್ಮ ಪತ್ನಿ, ಪುತ್ರರೊಂದಿಗೆ ಮೇ 24 ರಂದು ಗುಜರಾತ್‌ನ ಮಹಿಸಾಗರ್ ಜಿಲ್ಲೆಯ ಕೊಯ್ಡಮ್ ಗ್ರಾಮದಲ್ಲಿರುವ ತಮ್ಮ ಪೂರ್ವಜರ ಮನೆಗೆ ಬಂದರು. ಭಾರತದಲ್ಲಿ ತಮ್ಮ ಕುಟುಂಬವನ್ನು ಬಿಟ್ಟು ಜೂನ್ 12 ರಂದು ಬ್ರಿಟನ್‌ನ ನಾರ್ಥಾಂಪ್ಟನ್‌ಗೆ ಮರಳಲು ಅವರು ಯೋಜಿಸಿದ್ದರು. ಜೂನ್ 12ರಂದು ಪತ್ನಿಯನ್ನು ಇಲ್ಲೇ ಬಿಟ್ಟು ಲಂಡನ್‌ಗೆ ಹೋಗಲು ಟಿಕೆಟ್ ಬುಕ್ ಮಾಡಿದ್ದರು. ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ಬುಕ್ ಮಾಡಿದ್ದರು. ಆದರೆ ಈ ಹೊತ್ತಿಗೆ ಅವರಿಗೆ ತೀವ್ರ ಜ್ವರವಿತ್ತು, ನಡೆದಾಡುವುದೂ ಕಷ್ಟವಾಗಿತ್ತು.
ನೀವು ಯುಕೆಗೆ ಹೋಗುವುದು ಬೇಡ ಟಿಕೆಟ್ ಕ್ಯಾನ್ಸಲ್ ಮಾಡಿಬಿಡಿ ಎಂದು ಪತ್ನಿ ತುಂಬಾ ಒತ್ತಾಯ ಮಾಡಿದ್ದರು. ಉಮಂಗ್ ಅದಕ್ಕೆ ಒಪ್ಪಿ ಜೂನ್ 12ರಂದು ಬುಕ್ ಮಾಡಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿದ್ದು, ಲಂಡನ್‌ಗೆ ಪ್ರಯಾಣ ಬೆಳೆಸಿರಲಿಲ್ಲ. ಹೀಗಾಗಿ ಅವರು ಜೀವಂತವಾಗಿದ್ದಾರೆ.
ತಾನು ಜೂನ್ 12 ರ ಟಿಕೆಟ್ ಅನ್ನು ರದ್ದುಗೊಳಿಸಿ, ಜೂನ್ 15 ಕ್ಕೆ ಇನ್ನೊಂದು ಟಿಕೆಟ್ ಬುಕ್ ಮಾಡಿದ್ದೆ, ಅದಾದ ಬಳಿಕ ವಿಮಾನ ಅಪಘಾತದ ಸುದ್ದಿ ಕೇಳಿದೆ. ದೇವರೇ ಹೆಂಡತಿಯ ರೂಪದಲ್ಲಿ ಬಂದು ನನ್ನನ್ನು ರಕ್ಷಿಸಿದ್ದಾನೆ ಎಂದು ಉಮಂಗ್ ಹೇಳಿದ್ದಾರೆ.