ಶ್ರೀಕಿಗೆ ಎಸ್ಸೆಸ್ಸೆಲ್ಸಿಯಲ್ಲೇ ಇತ್ತು ಹ್ಯಾಕ್ ಶೋಕಿ; ಆಸ್ಟ್ರೇಲಿಯಾ ಸ್ನೇಹಿತನ ಜತೆಗೂಡಿ ಸಾವಿರಾರು ಡಾಲರ್ ವ್ಯವಹಾರ, ಸಿಸಿಬಿ ಮುಂದೆ ತಪ್ಪೊಪ್ಪಿಗೆ

asdasdasdfdgb
Published on

ಬೆಂಗಳೂರು: ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಎಸ್​ಎಸ್​ಎಲ್​ಸಿ ಓದುವಾಗಲೇ ಆಸ್ಪ್ರೇಲಿಯಾದ ಸ್ನೇಹಿತನ ಜತೆ ಸೇರಿ ಗೇಮಿಂಗ್ ವೆಬ್​ಸೈಟ್ ಹ್ಯಾಕ್ ಮಾಡಿ ಸಾವಿರಾರು ಡಾಲರ್ ವ್ಯವಹಾರ ನಡೆಸಿದ್ದ! ಶಾಲಾ ದಿನಗಳಲ್ಲೇ ಸೈಬರ್ ಕ್ರೖೆಂ ಬಗ್ಗೆ ಆಸಕ್ತಿ ತೋರಿದ್ದ ಜಯನಗರದ ಶ್ರೀಕಿ, 4ನೇ ತರಗತಿಯಲ್ಲೇ ವೆಬ್​ಸೈಟ್ ಶೋಧ ಮಾಡುವ ಬಗ್ಗೆ ಕಲಿತಿದ್ದ. 10ನೇ ತಗರತಿಗೆ ಬರುವಷ್ಟರಲ್ಲಿ ಹ್ಯಾಕಿಂಗ್ ಆರಂಭಿಸಿದ್ದ. ಶ್ರೀಕಿಯೇ ಖುದ್ದು ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಈ ಹೇಳಿಕೆ ಕೊಟ್ಟಿದ್ದಾನೆ. ಮಾಡರೇಟರ್ ಆಡ್ಮಿನಿಸ್ಟ್ರೇಟರ್ ಆಗಿ ಶ್ರೀಕಿ ನೆಟ್​ನಲ್ಲಿಯೂ ವಿದೇಶಿ ಹ್ಯಾಕರ್​ಗಳ ಸ್ನೇಹ ಗಳಿಸಿದ್ದ. ಆಸ್ಟ್ರೇಲಿಯಾದ ಸಿಡ್ನಿ ಸ್ನೇಹಿತನ ಜತೆ ಸೇರಿ ಗೇಮಿಂಗ್ ಪೋರ್ಟಲ್ ಹ್ಯಾಕ್ ಮಾಡಿ ಸಾವಿರಾರು ಡಾಲರ್ ದೋಚಿದ್ದರು ಎಂಬುದು ಸಿಸಿಬಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.

ಪಿಯುಸಿ ಓದುವಾಗ ಧೂಮಪಾನ, ಡ್ರಗ್ಸ್, ಮದ್ಯಪಾನ ಕಲಿತ. ಡಾರ್ಕ್ ವೆಬ್​ಸೈಟ್​ನಲ್ಲಿ ಡ್ರಗ್ಸ್ ವ್ಯವಹಾರ ಶುರು ಮಾಡಿದ್ದ. ಇದಕ್ಕಾಗಿ ಬಿಟ್ ಕಾಯಿನ್ ಬಳಕೆ ಮಾಡುತ್ತಿದ್ದ. ಸತತ 2 ವರ್ಷಗಳ ಕಾಲ ಡಾರ್ಕ್ ವೆಬ್​ಸೈಟ್​ನಲ್ಲಿ ಡ್ರಗ್ಸ್ ದಂಧೆ ಮುಂದುವರಿಸಿ ತನ್ನ ಸ್ನೇಹಿತರ ಮೂಲಕ ರೇವ್ ಪಾರ್ಟಿ, ಪೇಜ್-3 ಪಾರ್ಟಿಗಳಲ್ಲಿ ಬಳಕೆ ಮಾಡುತ್ತಿದ್ದ. 17ನೇ ವಯಸ್ಸಿಗೆ ಮನೆ ಬಿಟ್ಟು ಸ್ನೇಹಿತರ ಜತೆ ಹಿಮಾಲಯಕ್ಕೆ ಹೋಗಿ ಬದ್ರಿನಾಥದಲ್ಲಿ ತಂಗಿದ್ದ. ಈ ಬಗ್ಗೆ ಪಾಲಕರು ಸಿದ್ದಾಪುರ ಠಾಣೆಗೆ ಕಾಣೆಯಾದ ದೂರು ನೀಡಿದ್ದರು.

ಮಥುರದಲ್ಲಿ ಶ್ರೀಕಿ ಇರುವ ವಿಚಾರ ತಿಳಿದು ಪಾಲಕರು ಬೆಂಗಳೂರಿಗೆ ಕರೆತಂದು ಪಿಯುಸಿಗೆ ಸೇರಿಸಿದ್ದರು. ಪಿಯುಸಿ ಮುಗಿಸಿ ಇಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು ಬಿಎಸ್ಸಿ ಓದಲು ವಿದೇಶಕ್ಕೆ ಹೋಗಿದ್ದ. ಸ್ಥಳೀಯ ಹ್ಯಾಕರ್ಸ್ ಜತೆ ಸೇರಿ ಹ್ಯಾಕಿಂಗ್​ನಲ್ಲಿ ಪರಿಣಿತನಾಗಿದ್ದ. 2015ರಲ್ಲಿ ಬೆಂಗಳೂರಿಗೆ ಬಂದು ಸ್ನೇಹಿತರ ಜತೆ ಸೇರಿ ಐಪಿಎಲ್, ಹೈಫೈ ಪಾರ್ಟಿ, ಸಿನಿಮಾ ಟಿಕೆಟ್ ಹ್ಯಾಕಿಂಗ್ ಮಾಡುತ್ತಿದ್ದ. ಸ್ನೇಹಿತರ ಜತೆ ಮಾತನಾಡಲು ಸ್ಕೈಪ್ ಆಪ್ ಹ್ಯಾಕ್ ಮಾಡಿ ವಿದೇಶಿ ಪೆಡ್ಲರ್​ಗಳೊಂದಿಗೆ ವ್ಯವಹಾರ ನಡೆಸಿ, ವಿದೇಶಿ ಡ್ರಗ್ಸ್​ಗಳನ್ನು ಖರೀದಿಸುತ್ತಿದ್ದ. 2017ರಲ್ಲಿ ಬಿಐಟಿ ಕ್ಲಬ್​ನಲ್ಲಿ ಸರ್ವರ್ ಹ್ಯಾಕ್ ಮಾಡಿ 100 ಬಿಟ್ ಕಾಯಿನ್ ಕದ್ದು, ಬೇರೊಂದು ವ್ಯಾಲೆಟ್​ಗೆ ವರ್ಗಾವಣೆ ಮಾಡಿಕೊಂಡು ಬಳಸಿದ್ದಾಗಿ ಶ್ರೀಕಿ, ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾನೆ.

ರಾಹುಲ್ ಗಾಂಧಿ, ಮಲ್ಯ ಖಾತೆ ಹ್ಯಾಕ್: 2016ರಲ್ಲಿ ಉದ್ಯಮಿ ವಿಜಯ್ ಮಲ್ಯ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿ ಗಣ್ಯರ ಟ್ವಿಟರ್, ಫೇಸ್​ಬುಕ್ ಖಾತೆ ಹ್ಯಾಕ್ ಮಾಡಿರುವುದಾಗಿ ಶ್ರೀಕಿ ಹೇಳಿಕೊಂಡಿದ್ದಾನೆ. ಈ ಬಗ್ಗೆ ದೆಹಲಿ ಸೈಬರ್ ಕ್ರೖೆಂ ಠಾಣೆಯಲ್ಲಿ ಪ್ರಕರಣ ದಾಖಲಾಗಿವೆ.

2.37 ಲಕ್ಷ ಡಾಲರ್ ದೋಚಲು ಯತ್ನ: 2020ರಲ್ಲಿ 2.37 ಲಕ್ಷ ಡಾಲರ್ ಅನ್ನು ರೂಪಾಯಿಗೆ ವರ್ಗಾವಣೆ ಮಾಡಿಕೊಳ್ಳಲು ವಿಫಲ ಯತ್ನ ನಡೆಸಿದ್ದ. ಇದಾದ ಮೇಲೆ ಅತಿ ಹೆಚ್ಚು ಬಿಟ್ ಕಾಯಿನ್ ಇರುವ ವ್ಯಾಲೆಟ್ ಪತ್ತೆ ಮಾಡಿ ಹ್ಯಾಕ್​ಗೆ ಮುಂದಾದಾಗ, ಕಂಪನಿಗೆ ಗೊತ್ತಾಗಿ ಲಾಕ್ ಮಾಡುತ್ತಾರೆ. ಬಹುತೇಕ ಆನ್​ಲೈನ್ ಗೇಮಿಂಗ್ ಆಪ್​ಗಳೇ ಟಾರ್ಗೆಟ್ ಆಗಿದ್ದವು. ಹ್ಯಾಕ್ ಮಾಡಲು ಶ್ರೀಕಿ ಸ್ನೇಹಿತರು ಪಾರ್ಟಿ ಆಯೋಜನೆ ಮಾಡಿ ವೇದಿಕೆ ಸಜ್ಜು ಮಾಡುತ್ತಿದ್ದರು.

ಸ್ನೇಹಿತರ ಜತೆ ಮೋಜು-ಮಸ್ತಿ: ಹ್ಯಾಕ್ ಮಾಡಿ ದೋಚುತ್ತಿದ್ದ ಬಿಟ್ ಕಾಯಿನ್​ಗಳನ್ನು ಶ್ರೀಕಿ, ತನ್ನ ಪಶ್ಚಿಮ ಬಂಗಾಳದ ಸ್ನೇಹಿತ ರಾಬಿನ್ ಖಂಡೆಲ್ ವಾಲ್​ಗೆ ವರ್ಗಾವಣೆ ಮಾಡುತ್ತಿದ್ದ. ರಾಬಿಲ್ ತನ್ನ ಅಧಿಕೃತ ಬಿಟ್ ಕಾಯಿನ್ ಟ್ರೇಡಿಂಗ್​ನಲ್ಲಿ ಮಾರಾಟ ಮಾಡಿ ಬಂದ ಹಣವನ್ನು ಶ್ರೀಕಿ ಹೇಳಿದ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡುತ್ತಿದ್ದ. 2008ರಿಂದ 2020ವರೆಗೆ ಶ್ರೀಕಿ ಸೂಚಿಸಿದವರಿಗೆ 4.98 ಕೋಟಿ ರೂ. ವರ್ಗಾವಣೆ ಮಾಡಿದ್ದಾನೆ. ಬಹುತೇಕ ಬ್ಯಾಂಕ್ ಖಾತೆಗಳು ದೇಶದ ಪಂಚತಾರಾ ಹೋಟೆಲ್, ರೆಸಾರ್ಟ್, ಕಂಪನಿಗಳು, ಸ್ನೇಹಿತರ ಬ್ಯಾಂಕ್ ಖಾತೆಗಳಾಗಿವೆ.

ಸಿಐಡಿಗೆ ವಹಿಸುವುದು ಸೂಕ್ತ: ಬಿಟ್ ಕಾಯಿನ್ ಪ್ರಕರಣವನ್ನು ಸಿಐಡಿಗೆ ನೀಡುವುದು ಸೂಕ್ತ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದರು. ಈ ವಿಚಾರದಲ್ಲಿ ಪ್ರತಿದಿನ ಆಪಾದನೆ ಬರುತ್ತಲೇ ಇದೆ. ರಾಜಕಾರಣಿಗಳ ಮಕ್ಕಳು, ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಮಕ್ಕಳೂ ಇದ್ದಾರೆ ಎನ್ನುವ ಆರೋಪ ಕೇಳಿಬರುತ್ತಿರುವುದರಿಂದ ತನಿಖೆಯಾಗಲಿ ಎಂದರು. ಶ್ರೀಕಿ ಕಾಪಾಡಿದವರು ಯಾರು? ಎನ್ನುವುದು ಬಿರಿಯಾನಿ ಕೊಟ್ಟವರಿಗೆ ಚೆನ್ನಾಗಿ ಗೊತ್ತಿದೆ. ಬಿಟ್ ಕಾಯಿನ್ ರಿಯಾಲಿಟಿ ಜನಕ್ಕೆ ಗೊತ್ತಾಗಬೇಕು. ಬಸವರಾಜ ಬೊಮ್ಮಾಯಿ ಉತ್ತಮ ಕೆಲಸ ಮಾಡುತ್ತಿದ್ದು, ಅವರಿಗೆ ಬ್ರೇಕ್ ಹಾಕಲು ಕಾಂಗ್ರೆಸ್ಸಿಗರು ಬಿಟ್ ಕಾಯಿನ್ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಬಿಟ್ ಕಾಯಿನ್ ವಿಷಯದಲ್ಲಿ ಕಾಂಗ್ರೆಸ್​ನವರು ಸುಳ್ಳನ್ನು ನೂರು ಬಾರಿ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಶ್ರೀಕಿಗೆ ಪ್ರಾಣ ಬೆದರಿಕೆಯಿದೆ ಎಂದು ಪದೇಪದೆ ಸಿದ್ದರಾಮಯ್ಯ ಹೇಳೋದ್ರಲ್ಲೇ ನನಗೆ ಅನುಮಾನ ಇದೆ. ಕಾಂಗ್ರೆಸ್​ನವರೇ ಏನಾದರೂ ಮಾಡಿ ನಮ್ಮ ತಲೆಗೆ ಕಟ್ತಾರೇನೊ ಅಂತ ಅನ್ನಿಸುತ್ತಿದೆ. ಈ ಬಗ್ಗೆ ಸಿಎಂ ಜತೆ ಮಾತಾಡ್ತೇನೆ.

| ಆರಗ ಜ್ಞಾನೇಂದ್ರ ಗೃಹ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net