'ಹೆಂಡತಿ ತಂಬಾಕು ತಿಂತಾಳೆ, ನಂಗೆ ಡಿವೋರ್ಸ್​ ಕೊಡಿಸಿ..' ಗಂಡನ ಬೇಡಿಕೆಗೆ ಕೋರ್ಟ್​ ಹೇಳಿದ್ದೇನು?

tabacco
Published on

ನಾಗ್ಪುರ: ಮದುವೆಯಾದ ಮೇಲೆ ವಿಚ್ಛೇದನ ಪಡೆಯುವುದಕ್ಕೆ ಹಲವಾರು ಕಾರಣಗಳು. ಈ ಒಬ್ಬ ಗಂಡನಿಗೆ ಹೆಂಡತಿ ತಂಬಾಕು ತಿನ್ನುತ್ತಾಳೆ ಎನ್ನುವುದೇ ಒಂದು ಕಾರಣವಾಗಿದೆ. ತಂಬಾಕು ತಿನ್ನುವ ಹೆಂಡತಿಯಿಂದ ನನಗೆ ಮುಕ್ತಿ ಕೊಡಿಸಿ ಎಂದು ನ್ಯಾಯಾಲಯದ ಮೆಟ್ಟಿಲೇರಿದ ಗಂಡನಿಗೆ ನ್ಯಾಯಾಲಯ ಏನು ಹೇಳಿದೆ ಎಂದು ತಿಳಿಯುವುದಕ್ಕೆ ಮುಂದೆ ಓದಿ...

ಅರ್ಜಿದಾರನ ಹೆಂಡತಿಗೆ ತಂಬಾಕು ತಿನ್ನುವ ಅಭ್ಯಾಸವಿದೆಯಂತೆ. ಅದರಿಂದಾಗಿ ಆಕೆಯ ಆರೋಗ್ಯ ಹದಗೆಡುತ್ತಿರುತ್ತದೆಯಂತೆ. ನನ್ನ ಹೆಂಡತಿ ಯಾವಾಗಲೂ ಅನಾರೋಗ್ಯದಲ್ಲೇ ಇರುತ್ತಾಳೆ, ಅಡುಗೆಯನ್ನೂ ಮಾಡುವುದಿಲ್ಲ. ಆಕೆಯನ್ನು ಆಸ್ಪತ್ರೆಗೆ ತೋರಿಸಲು ಹೆಚ್ಚಿನ ಹಣ ಬೇಕಾಗುತ್ತಿದೆ. ಅದಕ್ಕಾಗಿ ನನಗೆ ಆಕೆಯಿಂದ ವಿಚ್ಛೇದನ ಕೊಡಿಸಿ ಬಿಡಿ ಎಂದು ಆತ ಕೇಳಿದ್ದಾನೆ. ಹೆಂಡತಿ ನನಗೆ ಹೇಳದೇ ಕೇಳದೆ ಆಕೆಯ ತವರು ಮನೆಗೆ ಹೋಗಿ ಕುಳಿತಿದ್ದಾಳೆ ಎನ್ನುವ ದೂರನ್ನೂ ಹೇಳಿದ್ದಾನೆ.

ಬಾಂಬೆ ಹೈಕೋರ್ಟ್​ನ ನಾಗ್ಪುರ ನ್ಯಾಯಪೀಠದಲ್ಲಿ ಈ ಪ್ರಕರಣದ ವಿಚಾರಣೆ ನಡೆಸಲಾಗಿದೆ. ನ್ಯಾಯಮೂರ್ತಿಗಳಾದ ಅತುಲ್ ಚಂದುರ್ಕರ್ ಮತ್ತು ಪುಷ್ಪಾ ಗಣದೇವಾಲಾ ಅವರನ್ನೊಳಗೊಂಡ ವಿಭಾಗೀಯ ಪೀಠವು ವಿಚಾರಣೆ ನಡೆಸಿದ್ದು, ವಿಚ್ಛೇದನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದೆ. ಕೇವಲ ತಂಬಾಕು ತಿನ್ನುತ್ತಾಳೆ ಎನ್ನುವುದು ಒಂದು ಪ್ರಮುಖ ಕಾರಣವಾಗುವುದಿಲ್ಲ. ಆಸ್ಪತ್ರೆಗೆ ಖರ್ಚಾಗುತ್ತಿದೆ ಎನ್ನಲಾಗಿದೆ ಆದರೆ ಅದಕ್ಕೆ ಸಂಬಂಧಿಸಿದ ಯಾವುದೇ ದಾಖಲೆಯಿಲ್ಲ. ಹಾಗಾಗಿ ಅದನ್ನು ನಾವು ಪರಿಗಣಿಸಲಾಗುವುದಿಲ್ಲ. ಇಂತಹ ಸಣ್ಣ ಪುಟ್ಟ ವಿಚಾರಗಳು ಎಲ್ಲ ದಾಂಪತ್ಯದಲ್ಲೂ ಇದ್ದಿದ್ದೇ. ಅದನ್ನು ಗಂಡ ಹೆಂಡತಿ ಸರಿಪಡಿಸಿಕೊಂಡು ಹೋಗಬೇಕು ಎಂದು ಕೋರ್ಟ್​ ಹೇಳಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net