

ಮುಂಬೈ: ಮಾಹಿತಿ ತಂತ್ರಜ್ಞಾನ (ಐಟಿ) ಕಂಪನಿಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ಎಚ್1ಬಿ ವೀಸಾ ಪಡೆದು ಅಮೆರಿಕದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಸಂಕಷ್ಟ ಎದುರಾಗಿದೆ.
ಅಮೆರಿಕದ ನಾಗರಿಕತ್ವ ಮತ್ತು ವಲಸೆ ಸೇವೆ (ಯುಎಸ್ಸಿಐಎಸ್) 2018ರ ಫೆಬ್ರುವರಿಯಲ್ಲಿ ಎಚ್1ಬಿ ವೀಸಾ ಅಡಿಯಲ್ಲಿ ಮಾಡಿದ ಬದಲಾವಣೆಗಳ ಪ್ರಕಾರ ಐಟಿ ಕಂಪನಿಗಳ ಗುತ್ತಿಗೆ ಆಧಾರದ ಉದ್ಯೋಗಿಗಳನ್ನು ಥರ್ಡ್ ಪಾರ್ಟಿ ಕ್ಲೈಂಟ್ ಎಂದು ಪರಿಗಣಿಸಲಾಗುತ್ತದೆ. ಇದರನ್ವಯ ಗುತ್ತಿಗೆ ಉದ್ಯೋಗಿಗಳ ಎಚ್1ಬಿ ವೀಸಾ ಅರ್ಜಿಯಲ್ಲಿ ಅವರು ಪ್ರತಿನಿಧಿಸುವ ಐಟಿ ಕಂಪನಿಗಳು ಸೇವಾ ಅವಧಿ ಮತ್ತು ಸ್ಥಳದ ಬಗ್ಗೆ ವಿವರವಾದ ಪುರಾವೆಗಳನ್ನು ನೀಡಬೇಕಾಗುತ್ತೆ. ಈ ನಿಬಂಧನೆಯಿಂದಾಗಿ ಐಟಿ ಕಂಪನಿಗಳ ಎಚ್1ಬಿ ವೀಸಾ ಅರ್ಜಿಗಳ ನಿರಾಕರಣೆ ಪ್ರಮಾಣ ಹೆಚ್ಚಳವಾಗಿದೆ ಎಂದು ತಿಳಿದುಬಂದಿದೆ.
ವಿವರವಾದ ಪುರಾವೆಗಳ ಸಲ್ಲಿಕೆಯ ಅವಶ್ಯಕತೆ ಬಗ್ಗೆ ಐಟಿ ಕಂಪನಿಗಳ ತಂಡವೊಂದು ಅಮೆರಿಕದ ನ್ಯಾಯಾಲಯದ ಮೊರೆ ಹೋಗಿತ್ತು. ಆದರೆ ಕೋರ್ಟ್ ಎಚ್1ಬಿ ವೀಸಾ ನಿಯಮಗಳನ್ನು ಎತ್ತಿಹಿಡಿದಿದ್ದು, ಐಟಿ ಕಂಪನಿಗಳು ಕೋರ್ಟ್ ಮನವೊಲಿಸುವಲ್ಲಿ ವಿಫಲವಾಗಿವೆ. ಹೊಸ ನಿಯಮದನ್ವಯ ಐಟಿ ಕಂಪನಿಗಳ ಗುತ್ತಿಗೆ ಉದ್ಯೋಗಿಗಳ ವೀಸಾ ಅರ್ಜಿಗಳು ಹೆಚ್ಚು ನಿರಾಕರಣೆಯಾಗುತ್ತಿವೆ. ಗೂಗಲ್, ಅಮೆಜಾನ್ ಮತ್ತು ಮೈಕ್ರೋಸಾಫ್ಟ್ನಂತಹ ಕಂಪನಿಗಳು ಶೇ.98ರಿಂದ ಶೇ.99ರವರೆಗೆ ವೀಸಾ ಅರ್ಜಿಗಳ ಅನುಮೋದನೆ ಪ್ರಮಾಣವನ್ನು ದಾಖಲಿಸಿವೆ. ಆದರೆ ಭಾರತದ ಪ್ರಮುಖ ಐಟಿ ಕಂಪನಿಗಳ ಅನುಮೋದನೆ ಪ್ರಮಾಣ ಕುಸಿತವಾಗಿದೆ. ಈ ಹಣಕಾಸು ವರ್ಷದಲ್ಲಿ ವಿಪ್ರೋ ಮತ್ತು ಟಿಸಿಎಸ್ ಕಂಪನಿಗಳ ವೀಸಾ ಅನುಮೋದನೆ ದರ ಶೇ. 82ರಲ್ಲಿದ್ದು, ಇನ್ಪೋಸಿಸ್ ಶೇ.74ರಷ್ಟಿದೆ.