ಪುರಸಭೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಹರಿಹಾಯ್ದ ಎಚ್.ಡಿ.ರೇವಣ್ಣ

HD Revanna
ಹೊಳೆನರಸೀಪುರದ ಪುರಸಭೆ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಶಾಸಕ ಎಚ್.ಡಿ.ರೇವಣ್ಣ ಮಾತನಾಡಿದರು.
Published on

ಹೊಳೆನರಸೀಪುರ: ಪುರಸಭೆ ಆಧಿಕಾರಿ ಹಾಗೂ ಸಿಬ್ಬಂದಿ ಕರ್ತವ್ಯ ಲೋಪದ ವಿರುದ್ಧ ಶಾಸಕ ಎಚ್.ಡಿ.ರೇವಣ್ಣ ತೀವ್ರತರ ಅಸಮಾಧಾನ ವ್ಯಕ್ತಪಡಿಸಿದರು.

ಪುರಸಭೆ ಆವಣರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುರಸಭೆ ವ್ಯಾಪ್ತಿಗೆ ಒಳಪಡುವ 23 ವಾರ್ಡ್‌ಗಳಲ್ಲಿ ಇ-ಸ್ವತ್ತು ಮತ್ತು ಖಾತೆ ಮಾಡಿಸಿಕೊಳ್ಳದ ಫಲಾನುಭವಿಗಳು ಅರ್ಜಿ ಕೊಡಿ. ನಿಮ್ಮ ಕೆಲಸವನ್ನು ಅಧಿಕಾರಿಗಳು ಮಾಡದಿದ್ದರೆ ನಾನೇ ಖುದ್ದಾಗಿ ನಿಂತು ಮಾಡಿಸಿಕೊಡುತ್ತೇನೆ. ಯಾವುದಾದರೂ ತಕರಾರು ಅಥವಾ ಕೋರ್ಟ್‌ನಲ್ಲಿ ನಿವೇಶನ ಹಾಗೂ ಮನೆಗಳ ವ್ಯಾಜ್ಯ ನಡೆಯುತ್ತಿದ್ದರೆ ಅಂಥವರಿಗೆ ಇ-ಸ್ವತ್ತು ಮತ್ತು ಖಾತೆ ಮಾಡಿಸಿಕೊಡಲು ಸಾಧ್ಯವಿಲ್ಲ. ಯಾವುದಾದರೂ ಸಣ್ಣಪುಟ್ಟ ತಕರಾರು ಇದ್ದರೆ ನಾನೇ ಖುದ್ದಾಗಿ ಬಗೆಹರಿಸಲು ಮುಂದಾಗುತ್ತೇನೆ. ಯಾರಾದರೂ ಪೌತಿ ಖಾತೆ ಇದ್ದರೆ ನನಗೆ ತಿಳಿಸಿ ಅದನ್ನು ಬಗೆಹರಿಸಿಕೊಡುತ್ತೇನೆ ಎಂದು ಹೇಳಿದರು.

ಪಟ್ಟಣದ 18 ವಾರ್ಡುಗಳನ್ನು ನಾನೇ ಸರ್ವೇ ಮಾಡಿಸಿ ಅಲ್ಲಿನ ರಸ್ತೆಗಳಿಗೆ ಕಾಂಕ್ರೀಟ್ ಮಾಡಿಸಿದ್ದೇನೆ. 17ನೇ ವಾರ್ಡಿನಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ಸುಮಾರು 2000 ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿರುವುದೇ ನಾನು. ಈ ವಾರ್ಡಿನಲ್ಲಿ ಬಡವರ ಹೆಸರಿನಲ್ಲಿ ಯಾರ್ಯಾರೋ ಬಂದು ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದಾರೆ. ಮನೆ ಕಟ್ಟಿಕೊಂಡು ವಾಸಿಸುತ್ತಿರುವ ನಿಜವಾದ ಮಾಲೀಕನಿದ್ದರೆ ಇರಲಿ. ಆದರೆ ಮನೆಯನ್ನು ಬಾಡಿಗೆ ಕೊಟ್ಟಿದ್ದರೆ ಅಂತವರ ಖಾತೆಯನ್ನು ಮುಲಾಜಿಲ್ಲದೆ ರದ್ದುಪಡಿಸಬೇಕೆಂದು ಪುರಸಭೆ ಮುಖ್ಯಾಧಿಕಾರಿಗೆ ಖಡಕ್ಕಾಗಿ ಸೂಚಿಸಿದರು.

ನಾನು ಮನೆ ಕೊಟ್ಟಿರುವುದು ವಾಸ ಮಾಡಲೆಂದು, ಬಾಡಿಗೆ ಕೊಡುವುದಕ್ಕಲ್ಲ. ನಿಜವಾದ ಫಲಾನುಭವಿಗಳಿಗೆ ಇ-ಸ್ವತ್ತು ಕೊಡುವಾಗ ಯಾವುದೇ ಕಾರಣಕ್ಕೂ ಕಾನೂನುಬಾಹಿರವಾಗಿ ಬೇರೆ ಬೇರೆ ಕಾರಣ ಇಟ್ಟುಕೊಂಡು ಇ-ಸ್ವತ್ತು ಕೊಟ್ಟರೆ ಸಂಬಂಧಪಟ್ಟ ಅಧಿಕಾರಿಯನ್ನೇ ಹೊಣೆಗಾರಿಕೆ ಮಾಡುತ್ತೇನೆ. ಇ-ಸ್ವತ್ತು ಮಾಡುವಾಗ ಮಧ್ಯವರ್ತಿಗಳನ್ನು ಇಟ್ಟುಕೊಂಡು ವ್ಯವಹಾರ ಮಾಡುತ್ತಿರುವುದು ಗೊತ್ತಾಗಿದೆ. ನಾನು ನಿಮ್ಮನ್ನು ಸುಮ್ಮನೇ ಬಿಡುವುದಿಲ್ಲ. ಬಡವರನ್ನು ಕಚೇರಿಗೆ ಅಲೆದಾಡಿಸಬೇಡಿ. ಕಾನೂನು ಪ್ರಕಾರ ಕೆಲಸ ಮಾಡಿಕೊಡಿ. ಇ-ಸ್ವತ್ತು ಪಡೆಯಲು ಅರ್ಜಿ ಹಾಕಿ ಎರಡು ತಿಂಗಳಾದರೂ ಕೆಲಸ ಮಾಡಿಕೊಟ್ಟಿಲ್ಲ ಎಂದು ದೂರುಗಳು ಬಂದಿವೆ. ಸುಖಾಸುಮ್ಮನೆ ಕಚೇರಿಗೆ ಅಲೆದಾಡಿಸುತ್ತಿದ್ದಾರೆ ಎಂಬ ದೂರುಗಳು ಹಲವು ಬಾರಿ ಬಂದಿವೆ ಎಂದು ಸಿಬ್ಬಂದಿ ವಿರುದ್ಧ ಕಿಡಿಕಾರಿದರು.

40 ರಿಂದ 50 ವರ್ಷಗಳಾದರೂ ಸಾರ್ವಜನಿಕರಿಗೆ ಇ-ಸ್ವತ್ತು ಮತ್ತು ಖಾತೆ ಮಾಡಿಸಿಕೊಡಲಿಲ್ಲ ಎಂದರೆ ನಾನೇಕೆ ಶಾಸಕನಾಗಿರಬೇಕು. ನಾನು ಸಚಿವನಾಗಿ ಹತ್ತಾರು ಖಾತೆಗಳನ್ನು ನಿರ್ವಹಿಸಿದ್ದೇನೆ. ಅಧಿಕಾರಿಗಳು ಕೆಲಸ ಮಾಡಿ ಇಲ್ಲದಿದ್ದರೆ ಬಿಟ್ಟಾಕಿ. ನಿಮ್ಮ ಕೈಲಿ ಆಗುವುದಿಲ್ಲ ಎಂದು ಎಂಡಾಸ್‌ಮೆಂಟ್ ಕೊಡಿ. ನಾನು ಸಾರ್ವಜನಿಕರಿಗೆ ಮಾಡಿಸಿಕೊಡುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನಾನು ಸಚಿವನಾಗಿದ್ದ ಅವಧಿಯಲ್ಲಿ 1998ರಲ್ಲಿ 18 ವಾರ್ಡುಗಳನ್ನು ಸ್ಲಂ ಬೋರ್ಡ್ ಎಂದು ಘೋಷಣೆ ಮಾಡಿಸಿದ್ದೆ. ಸ್ಲಂನಲ್ಲಿ ಪುರಸಭೆ ಜಾಗ ಇದ್ದರೆ ಬಡವರಿಗೆ ಮಾಡಿಕೊಡಿ ಎಂದು ಅಧಿಕಾರಿಗಳಿಗೆ ಹೇಳಿದರು.

ಪುರಸಭೆಯಲ್ಲಿ ಮಧ್ಯವರ್ತಿಗಳ ಕಾಟ ಹೆಚ್ಚಾಗಿದ್ದು ಇಂತಹ ಬೇಜವಾಬ್ದಾರಿಯ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಸುತ್ತೇನೆ. ಅದಕ್ಕೂ ಮೊದಲು ಮಧ್ಯವರ್ತಿಗಳು ಯಾರ್ಯಾರು ಎಂಬುದನ್ನು ಸಿಸಿ ಕ್ಯಾಮರಾದಲ್ಲಿ ಗಮನಿಸಿ, ಅಂತವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಹರಿಹಾಯ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net