ಸಾವಿನ ಚಿಂತೆ ನನಗಿಲ್ಲ, ಧೃತಿಗೆಟ್ಟು ಕೂರುವುದಿಲ್ಲ; ಎಚ್​.ಡಿ.ದೇವೇಗೌಡ

City 1 HD Devegowda
Published on

ಹಾಸನ: ಸಾವು ಯಾವಾಗ ಬರುತ್ತೆ, ಯಾವಾಗ ಹೋಗುತ್ತೆ ಎಂಬುದು ತಿಳಿದಿಲ್ಲ. ಸಾವಿನ ಚಿಂತೆ ನನಗಿಲ್ಲ. ಯಾವ ಕಾರಣಕ್ಕೂ ಧೃತಿಗೆಡುವುದಿಲ್ಲ. ನಮ್ಮ ಜನರು ತೊಂದರೆಗೆ ಸಿಲುಕಿರುವಾಗ ಸುಮ್ಮನೆ ಕೂರಲು ನನ್ನ ಮನಸ್ಸು ಒಪ್ಪುತ್ತಿಲ್ಲ. ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಕೊನೇ ತನಕ ಹೋರಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಹೇಳಿದರು.

ಭೂ ಸುಧಾರಣೆ, ಕಾಮಿರ್ಕ ಹಾಗೂ ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದ ದೇವೇಗೌಡರು, ಈಗಾಗಲೇ 88 ವರ್ಷ ಪೂರೈಸಿರುವ ನನಗೆ ಕರೊನಾದಂತಹ ಸಂದಿಗ್ಧ ಸಂದರ್ಭದಲ್ಲಿ ಹೋರಾಟಗಳೆಲ್ಲ ಬೇಡವೆಂದು ಸಾಕಷ್ಟು ಜನರು ಸಲಹೆ ನೀಡಿದ್ದಾರೆ. ಆದರೆ, ನಮ್ಮ ಜನರು ತೊಂದರೆಗೆ ಸಿಲುಕಿರುವಾಗ ಸುಮ್ಮನೆ ಕೂರಲು ನನ್ನ ಮನಸ್ಸು ಒಪ್ಪಲಿಲ್ಲ, ಸಾವಿನ ಚಿಂತೆ ನನಗಿಲ್ಲ ಎಂದರು.

ಜನರಿಗೆ ಅನ್ಯಾಯವಾಗುತ್ತಿರುವಾಗ ಕೈ ಕಟ್ಟಿ ಕೂರುವುದು ಸರಿಯಲ್ಲ. 60 ವರ್ಷಗಳ ಸುದೀರ್ಘ ರಾಜಕೀಯ ಪಯಣದಲ್ಲಿ ಆ ರೀತಿಯ ಕೆಲಸ ಮಾಡಿಲ್ಲ. 15 ದಿನಗಳಲ್ಲಿ ರಾಜ್ಯಾದ್ಯಂತ ಸಂಚರಿಸಿ ಆಯಾ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುತ್ತೇವೆ. ನಂತರ ಮೊಮ್ಮಗ ಪ್ರಜ್ವಲ್​ ಲೋಕಸಭೆಯಲ್ಲಿ ಹಾಗೂ ನಾನು ರಾಜ್ಯಸಭೆಯಲ್ಲಿ ಕಾಯ್ದೆಯ ಅಡ್ಡ ಪರಿಣಾಮಗಳ ಕುರಿತು ಸರ್ಕಾರದ ಗಮನ ಸೆಳೆಯುತ್ತೇವೆ ಎಂದು ದೇವೇಗೌಡ ತಿಳಿಸಿದರು.

ಭೂ ಸುಧಾರಣೆ ಕಾಯ್ದೆ ತಿದ್ದುಪಡಿಯಿಂದ ರೈತರಿಗೆ ತೊಂದರೆಯಾಗಲಿದ್ದು, ಯಾವ ಕಾರಣಕ್ಕೂ ತಿದ್ದುಪಡಿ ಕಾಯ್ದೆ ಅನುಷ್ಠಾನ ಗೊಳಿಸಬಾರದು. ಈ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದು, ಜೆಡಿಎಸ್​ ಶಾಸಕರಿಲ್ಲದ ಜಿಲ್ಲೆಗಳಲ್ಲಿ ಪಕ್ಷದ ಕಾರ್ಯಕರ್ತರೇ ಧರಣಿ ನಡೆಸುತ್ತಾರೆ ಎಂದು ಎಚ್​.ಡಿ. ದೇವೇಗೌಡ ತಿಳಿಸಿದರು.

ಕೈಗಾರಿಕಾ ಉದ್ದೇಶದಿಂದ ವಶಪಡಿಸಿಕೊಳ್ಳುವ ಜಮೀನಿನಲ್ಲಿ ಐದು ವರ್ಷದಲ್ಲಿ ಯಾವುದೇ ಕೆಲಸಗಳಾಗದಿದ್ದರೆ ಆ ಭೂಮಿಯನ್ನು ರೈತರಿಗೆ ವಾಪಸ್​ ನೀಡಬೇಕೆಂಬ ಸುಪ್ರೀಂಕೋರ್ಟ್​ ತೀರ್ಪಿದೆ. ಆದರೆ ಅದು ಎಲ್ಲಿ ಅನುಷ್ಠಾನವಾಗಿದೆ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net