

ಬೆಂಗಳೂರು:
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಕಸರತ್ತು ನಡೆಸುತ್ತಿರುವ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಜಿಲ್ಲಾ ಮಟ್ಟದಲ್ಲಿಯೂ ಪ್ರಗತಿ ಪರಿಶೀಲನಾ ಸಭೆ ನಡೆಸಲು ಮುಂದಾಗಿದೆ.
ಕಾಂಗ್ರೆಸ್ ಪಕ್ಷ ತನ್ನ ಪ್ರನಾಳಿಕೆಯಲ್ಲಿ ನೀಡಿದ್ದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಶಕ್ತಿ ಯೋಜನೆ,
ಯುವ ನಿಧಿ ಯೋಜನೆಗಳನ್ನು ಸರ್ಕಾರ ಜಾರಿಗೆ ನೀಡಿದ್ದರೂ, ಪೂರ್ಣ ಪ್ರಮಾಣದ ಅನುಷ್ಠಾನಕ್ಕೆ ಕೆಲ ಸಮಸ್ಯೆಗಳು ಎದುರಾಗುತ್ತಲೇ ಇವೆ. ಅದರಲ್ಲೂ ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು 2 ಸಾವಿರ ರೂ ನೀಡುವ ಯೋಜನೆಯ ಬಗ್ಗೆಯೇ ಹೆಚ್ಚು ದೂರುಗಳಿವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರವಾಸ ಮಾಡುವ ಸಂದರ್ಭದಲ್ಲಿ ಗೃಹಲಕ್ಷ್ಮಿ ಯೋಜನೆಯ ಬಗ್ಗೆಯೇ ಹೆಚ್ಚಿನ ದೂರುಗಳು ಬರುತ್ತಿದೆ. ಇನ್ನು ಬಹಳಷ್ಟು ಮಹಿಳೆಯರ ಅಕೌಂಟ್‌ಗೆ ಹಣ ಹೋಗುತ್ತಿಲ್ಲ. ಆದ್ದರಿಂದ ಎಲ್ಲಿ ಲೋಪವಾಗುತ್ತಿದೆ ಎಂದು ತಿಳಿದು ಸರಿಪಡಿಸಬೇಕಿದೆ. ಯುವನಿಧಿ ಬಗ್ಗೆಯೂ ನಿರೀಕ್ಷೆ ದೊಡ್ಡ ಪ್ರಮಾಣದಲ್ಲಿದೆ. ಈ ಹಿನ್ನೆಲೆಯಲ್ಲಿ ಗ್ಯಾರಂಟಿ ಸಮಿತಿ ಗಮನಹರಿಸಿದೆ. ಯೋಜನೆಗಳ ಅನುಷ್ಠಾನದಲ್ಲಿ ಎಲ್ಲಿ ಲೋಪವಾಗಿದೆ ಎನ್ನುವುದನ್ನು ಪತ್ತೆ ಹಚ್ಚಿ, ಸಮರ್ಪಕವಾಗಿ ಅನುಷ್ಠಾನ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಗತ್ಯವಾದ ಕ್ರಮ ಕೈಗೊಳ್ಳಲು ಮುಂದಾಗಿದೆ.
ಜಿಲ್ಲಾ ಪ್ರವಾಸ ಮಾಡಿ ಜಿಲ್ಲಾ ಮಟ್ಟದಲ್ಲಿಯೇ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿಯ ಸಭೆಯನ್ನು ಜಿಲ್ಲಾಡಳಿತ ಜೊತೆಗೆ ನಡೆಸಿದರೆ ಯೋಜನೆಗೆ ಇನ್ನಷ್ಟು ಚುರುಕು ನೀಡಲು ಸಾಧ್ಯವಿದೆ ಎಂದು ಅರಿತಿರುವ ಸಮಿತಿ, ಈ ನಿಟ್ಟಿನಲ್ಲಿ ಕಾಯೋನ್ಮುಖವಾಗಿದೆ.
ಈಗಾಗಲೇ ಮೈಸೂರು, ಕೋಲಾರ, ಶಿವಮೊಗ್ಗ, ಕಲಬುರ್ಗಿ, ಬೆಂಗಳೂರು, ರಾಮನಗರ, ಮಂಡ್ಯ ಸೇರಿದಂತೆ 8 ಜಿಲ್ಲೆಯಲ್ಲಿ ಪ್ರವಾಸ ಮಾಡಿರುವ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ, 2ನೇ ಮತ್ತು 3ನೇ ಹಂತದಲ್ಲಿ ಎಲ್ಲಾ ಜಿಲ್ಲಾ ಪ್ರವಾಸ ಮಾಡಲು ಮುಂದಾಗಿದ್ದಾರೆ. ಅರ್ಹ ಲಾನುಭವಿಗಳಿಗೆ ಸರ್ಕಾರದ ಸೌಲಭ್ಯ ನೇರವಾಗಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ರೇವಣ್ಣ, ಈ ಯೋಜನೆಗಳ ಅನುಷ್ಠಾನ ಬಗ್ಗೆ ನಿರ್ಲಕ್ಷ್ಯ ತೋರಿಸುವ ಅಧಿಕಾರಿಗಳ ಮೇಲೂ ಕ್ರಮಕ್ಕೂ ಸೂಚನೆ ನೀಡಿದ್ದಾರೆ.
*ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹ ಜ್ಯೋತಿ, ಯುವ ನಿಧಿ, ಶಕ್ತಿ ಯೋಜನೆಗಳನ್ನು ಜಾರಿಗೊಳಿಸುವುದು ಸರ್ಕಾರದ ಆದ್ಯತೆಯಾಗಿದ್ದು, ಈ ನಿಟ್ಟಿನಲ್ಲಿ ಜಿಲ್ಲಾ ಮಟ್ಟದಲ್ಲಿಯೂ ಸಭೆ ನಡೆಸಿ ಗ್ಯಾರಂಟಿಗಳ ಅನುಷ್ಠಾನವನ್ನು ಪರಾಮರ್ಶೆ ಮಾಡಲು ಮುಂದಾಗಿದ್ದೇವೆ.
-ಎಚ್.ಎಂ.ರೇವಣ್ಣ, ಅಧ್ಯಕ್ಷರು, ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ.