

ಅಹಮದಾಬಾದ್: ಸಾರ್ವಜನಿಕವಾಗಿ ಸಮಸ್ಯೆ ಇದೆ. ಸೌಲಭ್ಯ ಇನ್ನಷ್ಟು ಬೇಕೆಂದು ಸರ್ಕಾರವನ್ನು ಪ್ರಶ್ನಿಸುತ್ತೇವೆ. ಬೇಡಿಕೆಗೆ ಮಣಿದು ಸಾರ್ವಜನಿಕ ಉಪಯೋಗಕ್ಕೆ ಸೌಲಭ್ಯ ನೀಡಿದರೆ, ಅದನ್ನು ಜವಾಬ್ದಾರಿಯುತವಾಗಿ ಬಳಕೆ ಮಾಡಲು ಮಾತ್ರ ಸಾಧ್ಯವಾಗುವುದಿಲ್ಲ. ಬಹುತೇಕ ಜನರು ಬೇಜವಾಬ್ದಾರಿ ಪ್ರದರ್ಶಿಸುತ್ತಲೇ ಇರುತ್ತಾರೆ. ಇದಕ್ಕೆ ಸ್ಪಷ್ಟ ಉದಾಹರಣೆ ಇತ್ತೀಚೆಗೆ ಉದ್ಘಾಟನೆಯಾದ ಮೊಟೆರಾ ಸ್ಟೇಡಿಯಂ ಪಕ್ಕದ ಮೆಟ್ರೋ ನಿಲ್ದಾಣ.
ನಗರ ಕೇಂದ್ರ ಪ್ರದೇಶಗಳಲ್ಲಿ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವಲ್ಲಿ ಮೆಟ್ರೋ ಸಾರಿಗೆ ಸಹಕಾರಿಯಾಗಿದೆ. ಜನರು ಸಮರ್ಪಕವಾಗಿ ಮೆಟ್ರೋ ಸೇವೆಯನ್ನು ಬಳಸಿಕೊಳ್ಳುತ್ತಾರೆ. ಆದರೆ ಮೆಟ್ರೋ ನಿಲ್ದಾಣಗಳನ್ನು ಶುಚಿಯಾಗಿ ಇಟ್ಟುಕೊಳ್ಳುವಲ್ಲಿ ಸಹಕಾರ ಮಾತ್ರ ಶೂನ್ಯ. ಜನರು ಪಾನ್, ಗುಟ್ಕಾ ಜಗಿದು, ನಿಲ್ದಾಣದೊಳಗೆ ಉಗುಳುತ್ತಿದ್ದಾರೆ. ಇದರಿಂದ ನಿಲ್ದಾಣದ ಶುಚಿತ್ವಕ್ಕೆ ತೊಂದರೆಯಾಗಿದ್ದು, ಜನರ ಬೇಜವಾಬ್ದಾರಿತನ ಪ್ರದರ್ಶನವಾಗಿದೆ.
ದೇಶದ ಮೆಟ್ರೋ ನಿಲ್ದಾಣಗಳು ಶುಚಿತ್ವಕ್ಕೆ ಹೆಚ್ಚಿನ ಪ್ರಧಾನ್ಯತೆ ನೀಡುತ್ತದೆ. ಇಲ್ಲಿ ಅಧಿಕ ಭದ್ರತೆಯೂ ಇರುತ್ತದೆ. ಆದರೆ ಇದಕ್ಕೆಲ್ಲ ಕ್ಯಾರೇ ಎನ್ನದೆ, ಜನರು ಮಾತ್ರ ಮೊಟೆರಾ ಸ್ಟೇಡಿಯಂ ಪಕ್ಕದಲ್ಲಿ ಹೊಸದಾಗಿ ಉದ್ಘಾಟನೆಯಾದ ಹೊಸ ಮೆಟ್ರೋ ನಿಲ್ದಾಣದಲ್ಲಿ ಗುಟ್ಕಾ ತಿಂದು ಉಗಿದಿದ್ದಾರೆ.
ಜನರ ಬೇಜವಾಬ್ದಾರಿ ತನದಿಂದ ಅಶುಚಿಯಾದ ನಿಲ್ದಾಣದ ವಿಡಿಯೋವನ್ನು ನಿಲೇಶ್ ಶಾ ಎಂಬುವವರು ಟ್ವಿಟರ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಈ ವಿಡಿಯೋವನ್ನು 2 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ.