

ಬೆಂಗಳೂರು: ದೇಶದಾದ್ಯಂತ ಕಾಂತಾರ ಸಿನಿಮಾ ಹೌಸ್ಫುಲ್ ಪ್ರದರ್ಶನ ಕಾಣುತ್ತಿದ್ದು, ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ವಿವಿಧ ಭಾಷೆಯ ಸ್ಟಾರ್ಗಳು ಸಿನಿಮಾ ನೋಡಿ ಮೆಚ್ಚಿ, ಕೊಂಡಾಡಿದ್ದಾರೆ. ಇದೀಗ ಕನ್ನಡದ ಹಿರಿಯ ನಟ ನವರಸ ನಾಯಕ ಜಗ್ಗೇಶ್ ಕಾಂತಾರ ಸಿನಿಮಾ ನೋಡಿ ಮೆಚ್ಚಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಕನ್ನಡ ಚಿತ್ರರಂಗದ ಒಳಿತು ಬಯಸಿ ಬದುಕುತ್ತಿರುವ ಜೀವ ನನ್ನದು. ಕಾರಣ ನನ್ನ ಬದುಕಿಗೆ ಸಕಲವೂ ನೀಡಿದ ನನ್ನ ತಾಯಿ ಕನ್ನಡ ಚಿತ್ರರಂಗ. ಬಾಲ್ಯದಿಂದ ಕನ್ನಡ ಹಾಗೂ ರಾಜಣ್ಣನ ಹುಚ್ಚು ಅಭಿಮಾನಿಯಾದ ನಾನು ಕರುನಾಡು ದಾಟಿ ಹೊರಹೋಗದೆ ಬದುಕಿದವ. ನನ್ನ ಕನ್ನಡದ ಕಲಾರಂಗ ಜಗಮೆಚ್ಚುವ ರಂಗ ಆಗಬೇಕು ಎಂದು ಸದಾ ಹಂಬಲಿಸುವ ಜನ್ಮ ನನ್ನದು.
ಇಂದು ಅಮೇರಿಕದ ಮಾಲ್ನಲ್ಲಿ ಕಾಂತಾರ ಸಿನಮಾ ನೋಡುವ ಅವಕಾಶ ನನ್ನದಾಯಿತು. ನಾನು ದಕ್ಷಿಣ ಕನ್ನಡದಲ್ಲಿರುವ ದೇವಾಲಯದ ಭಕ್ತ. ವರ್ಷಕ್ಕೆ ಒಂದು ಬಾರಿ ಪೊಳಲಿ, ಕಟೀಲು, ಉಡುಪಿ ಕೃಷ್ಣ, ಮೂಕಾಂಬಿಕೆ, ಕೊರಗಜ್ಜ, ಅಂಬಲಪಾಡಿ, ಉಡುಪಿ ರಾಯರ ಮಠ ದರ್ಶನ ಪಡೆವುದು ನನ್ನ 30 ವರ್ಷದ ಅಭ್ಯಾಸ. ಇದು ನನ್ನ ಪ್ರಕಾರ ಶ್ರೇಷ್ಠ ದೇವಭೂಮಿ. ಆಧ್ಯಾತ್ಮಿಕ ಅನುಭವಕ್ಕೆ ಇದು ಸಂತೃಪ್ತ ಭಾವ ಸಿಗುತ್ತದೆ. ಇಂತಹ ನಾಡಿನಿಂದ ಅದ್ಭುತ ನಟ, ನಿರ್ದೇಶಕ ರಿಷಭ್ ಶೆಟ್ಟಿ ಹುಟ್ಟಿ ಬಂದಿರುವುದು ಕನ್ನಡ ಚಿತ್ರರಂಗಕ್ಕೆ ಅದ್ಭುತ ಕೊಡುಗೆ.
ಸಿನಿಮಾದ ಕೊನೆಯ 25 ನಿಮಿಷ ನಾನು ಎಲ್ಲಿರುವೆ ಎಂಬುವುದು ಮರೆತು ಹೋಯಿತು. ಚಿತ್ರ ನೋಡಿದ ಮೇಲೆ ದೇಹ ಮನಸ್ಸು ಮೌನವಾಯಿತು. ಹೊರಬಂದಾಗ ಮಂತ್ರಾಲಯದ ನರಸಿಂಹಾಚಾರ್ ವಾಟ್ಸ್ಯಾಪ್ ಕರೆ ಮಾಡಿ ರಾಯರ ದರ್ಶನ ಮಾಡಿಸಿದರು.
ಸಿನಿಮಾ ನೋಡಿ ನನಗೆ ಇದು ರಿಷಭ್ ಮಾಡಿದ ಸಿನಿಮಾವಲ್ಲಾ. ಬದಲಿಗೆ ಆತನ ಹಿರಿಯರ, ತಂದೆ-ತಾಯಿಯ ಆಶೀರ್ವಾದಿಂದ, ನಶಿಸುತ್ತಿರುವ ಆಧ್ಯಾತ್ಮಿಕ ಭಾವ ಮತ್ತೆ ಮನುಷ್ಯರಿಗೆ ನೆನಪಿಸಲು ದೇವರೆ ಬಂದು ಆತನ ಕೈಯಲ್ಲಿ ಕಾಂತಾರ ಎಂಬ ಅದ್ಭುತ ಸಿನಿಮಾ ಮಾಡಿಸಿದ್ದಾರೆ.
ದೇವರು ನೂರು ಕಾಲ ಆಯುಷ್ಯ, ಆರೋಗ್ಯ, ರಿಷಭ್ ಶೆಟ್ಟಿಗೆ ಕೊಟ್ಟು ಕನ್ನಡ ಕಲಾರಂಗಕ್ಕೆ ಆತನ ಸೇವೆ ಇದೆ ರೀತಿ ಮುಂದುವರಿಯಲಿ ಎಂದು ನಟ ಜಗ್ಗೇಶ್ ಹೇಳಿಕೊಂಡಿದ್ದಾರೆ.