ಗುರುಸ್ವಾಮಿ ಹತ್ಯೆ ಯತ್ನ ಪ್ರಕರಣ ಓರ್ವ ಆರೋಪಿಯ ಬಂಧನ

Crime Logo
Published on

ಬೆಂಗಳೂರು: ಇತ್ತೀಚೆಗೆ ನಡೆದಿದ್ದ ತಮಿಳುನಾಡಿನ ಡಿಎಂಕೆ ಮುಖಂಡ ಹಾಗೂ ರೌಡಿಶೀಟರ್ ಗುರುಸ್ವಾಮಿ ಹತ್ಯೆ ಯತ್ನ ಪ್ರಕರಣ ಸಂಬಂಧ ತಮಿಳುನಾಡು ಮಧುರೈ ಮೂಲದ ಆರೋಪಿಯನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ಮಧುರೈನ ಪ್ರಸನ್ನ (೨೬) ಬಂಧಿತ. ಆರೋಪಿ ತನ್ನ ಸ್ನೇಹಿತರ ಜತೆ ಸೆ.೪ರಂದು ಡಿಎಂಕೆ ನಾಯಕ ಹಾಗೂ ತಮಿಳುನಾಡಿನ ವಿವಿಧ ಪೊಲೀಸ್ ಠಾಣೆಗಳ ರೌಡಿಶೀಟರ್ ಆಗಿರುವ ಗುರುಸ್ವಾಮಿ ಹತ್ಯೆಗೆ ಯತ್ನಿಸಿದ್ದ. ಈ ಸಂಬಂಧ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಈತನ ವಿರುದ್ಧ ತಮಿಳುನಾಡಿನ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಗಲಾಟೆ, ರೌಡಿ ಚಟುವಟಿಕೆಗಳ ಆರೋಪದಡಿ ಪ್ರಕರಣಗಳು ದಾಖಲಾಗಿದೆ. ಆರೋಪಿ ಪ್ರಸನ್ನ ತಮಿಳುನಾಡಿನ ಎಐಡಿಎಂಕೆ ನಾಯಕ, ರೌಡಿಶೀಟರ್ ಪಾಂಡಿಯನ್‌ನ ಸಹಚರ ನವೀನ್ ಎಂಬಾತನ ಆತ್ಮೀಯ ಸ್ನೇಹಿತನಾಗಿದ್ದಾನೆ. ಈತನ ವಿಚಾರಣೆಯಲ್ಲಿ ಸ್ನೇಹಿತ ನವೀನ್ ಕೋರಿಗೆ ಮೇರೆಗೆ ಬೆಂಗಳೂರಿಗೆ ಬಂದು ಗುರುಸ್ವಾಮಿ ಹತ್ಯೆಗೆ ಯತ್ನಿಸಲಾಗಿತ್ತು. ಬೇರೆ ವಿಚಾರಗಳ ಬಗ್ಗೆ ಮಾಹಿತಿ ಇಲ್ಲ ಎಂದಿದ್ದಾನೆ. ಈತನ ಸ್ನೇಹಿತ ನವೀನ್ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಹೇಳಲಾಗಿದೆ. ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಮಿಳುನಾಡಿನ ಪಾಂಡಿಯನ್ ಗ್ಯಾಂಗ್ ತನ್ನ ಹತ್ಯೆಗೆ ಸಂಚು ರೂಪಿಸಿದೆ ಎಂಬ ಖಚಿತ ಮಾಹಿತಿ ಮೇರೆಗೆ ಬೆಂಗಳೂರಿಗೆ ಬಂದು ತಲೆಮರೆಸಿಕೊಳ್ಳಲು ಸಿದ್ದತೆ ನಡೆಸಿದ್ದ. ಹೀಗಾಗಿ ಸೆ.೪ರಂದು ಬೆಂಗಳೂರಿನ ಕಮ್ಮನಹಳ್ಳಿ ಬಳಿಯ ಹೋಟೆಲ್‌ನಲ್ಲಿ ಮಧ್ಯವರ್ತಿ ಜತೆ ಟೀ ಕುಡಿಯುವಾಗ ಆರೋಪಿಗಳು ದಾಳಿ ನಡೆಸಿದ್ದರು. ಮಾರಣಾಂತಿಕ ಹಲ್ಲೆಗೊಳಗಾಗಿದ್ದ ಗುರುಸ್ವಾಮಿಯನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ಸೇರಿಸಿದ್ದರು. ಕೊಲೆಯತ್ನದ ಹಿಂದೆ ಹಳೆದ್ವೇಷ ಇರಬಹುದೆಂಬುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದ ಹಿನ್ನೆಲೆಯಲ್ಲಿ ಬಾಣಸವಾಡಿ ಪೊಲೀಸರು ವಿಶೇಷ ತಂಡ ರಚಿಸಿ ಮದುರೈ ಹಾಗೂ ಧರ್ಮಪುರಿಗಳಲ್ಲಿ ಶೋಧ ನಡೆಸಿ ಕೊನೆಗೂ ಆರೋಪಿ ಪ್ರಸನ್ನನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net