

ಧರ್ಮದ ಶಕ್ತಿ ಅದ್ಭುತ. ಅದೊಂದು ನಂಬಿಕೆ, ಗಮ್ಯ, ಗುರಿ, ಕಟ್ಟಳೆ, ನಿಬಂಧನೆ, ಮೋಕ್ಷ ಸಾಧನ, ಜೀವನ ವಿಧಾನ. ಪುಸ್ತಕ ಓದಿ ಧರ್ಮ ಜ್ಞಾನ ಪಡೆಯುವ ಅಗತ್ಯವಿಲ್ಲ. ಧರ್ಮ ನಮ್ಮ ಹೃದಯದಿಂದ ಆಚರಣೆಗೆ ಬರಬೇಕು. ಮಾನವ ಧರ್ಮವನ್ನೇ ಎಲ್ಲರೂ ಪಾಲಿಸಿದರೆ ಸಮಾಜ ಘಾತಕ ಚಟುವಟಿಕೆ ನಡೆಸುವ ನಾಟಕ ಕೊನೆಗೊಳ್ಳುತ್ತದೆ. ನಮ್ಮನ್ನು ರಕ್ಷಿಸಲು ಹುಟ್ಟಿಕೊಂಡಿದ್ದು ಧರ್ಮ. ಜೀವನಕ್ಕೊಂದು ಶಿಸ್ತು ತಂದುಕೊಳ್ಳಲು, ಸ್ವೇಚ್ಛೆಗೆ ಕಡಿವಾಣ ಹಾಕಲು ನಾವೇ ಹುಟ್ಟು ಹಾಕಿದ ವ್ಯವಸ್ಥೆ ಅದು. ಅದರ ನೆಪದಲ್ಲಿ ಬೇರೆಯವರ ನಂಬಿಕೆಯನ್ನು ಬುಡಮೇಲು ಮಾಡುವ ಕೃತ್ಯಕ್ಕೆ ಕೈ ಹಾಕುವುದು, ಅನ್ಯ ಧರ್ಮಗಳ ನಾಶದಲ್ಲಿ ತೊಡಗುವುದು, ಧರ್ಮದ ಅಂಧ ಆರಾಧನೆಯಲ್ಲಿ ತೊಡಗುವುದು ಹಾಸ್ಯಾಸ್ಪದ ಸಂಗತಿಯಾಗುತ್ತದೆ.
‘ಧಮೋ ರಕ್ಷತಿ ರಕ್ಷಿತಃ’ ಎಂಬುದು ಪ್ರಸಿದ್ಧ ನುಡಿಗಟ್ಟು. ಧರ್ಮವನ್ನು ರಕ್ಷಿಸಿದವನನ್ನು ಧರ್ಮ ರಕ್ಷಿಸುತ್ತದೆ ಎಂಬುದು ಇದರರ್ಥ. ಮಾನವ ಧರ್ಮದ ಪಾಲನೆಯಿಂದ ಜಗದಲ್ಲಿ ಶಾಂತಿ ನೆಲೆಸುವುದೆಂಬ ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ವಾಣಿ ಸಾರ್ವಕಾಲಿಕ ಸತ್ಯದ ಮಾತೆಂಬುದನ್ನು ಮರೆಯಲಾಗದು. ಶಕ್ತಿಯುಕ್ತ ಭಗವಂತನ ಆರಾಧನೆಯಿಂದ ಜೀವನದಲ್ಲಿ ಶಾಂತಿ ನೆಮ್ಮದಿ ಕಾಣಲು ಸಾಧ್ಯವಾಗುತ್ತದೆ. ನಿಜ ಗುರುವಿನ ಜ್ಞಾನೋಪದೇಶ ಪಡೆದಾತನ ಕೆಟ್ಟ ಬುದ್ಧಿ ನಾಶವಾಗಿ ಒಳ್ಳೆಯ ಬುದ್ಧಿ ಬರುತ್ತದೆ. ಸುಗುಣಗಳನ್ನು ಮೈಗೂಡಿಸಿಕೊಂಡು ಬಾಳುವುದು ಶ್ರೇಯಸ್ಕರ. ಬಾಳ ಪಥದ ಉದ್ದಕ್ಕೂ ಗುರುವಿನ ಮಾರ್ಗದರ್ಶನ ಅತ್ಯಗತ್ಯ.
ಕೈ ಹಿಡಿದು ಮುನ್ನಡೆಸುವಾತ ಗುರುವೊಬ್ಬನೆ. ಆದ್ದರಿಂದ ವೇದ ಶಾಸ್ತ್ರ ಉಪನಿಷತ್ತು ಪುರಾಣ ಇತಿಹಾಸಗಳೆಲ್ಲ ಗುರುವಿನ ಮಹತ್ವದ ಪಾತ್ರವನ್ನು ಸಾರಿ ಹೇಳಿವೆ. ಗುರುವನ್ನೇ ಬ್ರಹ್ಮ, ವಿಷ್ಣು, ಮಹೇಶ್ವರ ಎಂದು ಕೊಂಡಾಡಿವೆ. ಗುರುವಿಲ್ಲದೇ ವಿದ್ಯೆ ಬುದ್ಧಿ ಸಿದ್ಧಿಸದು. ಸನ್ನಡತೆ, ವಿನಯ, ವಿಧೇಯತೆಗಳು ಬಲಿಯವು. ಆತ್ಮ ಸಾಕ್ಷಾತ್ಕಾರವಾಗಬೇಕಿದ್ದರೂ ಗುರು ಬೇಕೆ ಬೇಕು. ಗುರುವನ್ನು ಸೂರ್ಯನಿಗೂ ಅಜ್ಞಾನವನ್ನು ಕತ್ತಲೆಗೂ ಹೋಲಿಸಿದ್ದಾರೆ. ಗುರೂಪದೇಶದಿಂದ ಅಜ್ಞಾನ ಅಂಧಕಾರ ನಾಶಗೊಳ್ಳುತ್ತದೆ. ಶಿವಜ್ಞಾನದ ಬೆಳಕು ಮೂಡುತ್ತದೆ.