

ರಾಣೆಬೆನ್ನೂರ: ಶಿಕ್ಷಣವು ಮುಕ್ತ ಜಗತ್ತನ್ನು ಪ್ರವೇಶಿಸಲು ವ್ಯಕ್ತಿಯನ್ನು ಶಕ್ತಗೊಳಿಸುತ್ತದೆ ಎಂದು ಜಿಲ್ಲಾ ಸಹಾಯಕ ಯೋಜನಾ ಸಮನ್ವಯಾಧಿಕಾರಿ ಆನಂದ ಉರ್ಮಿ ಹೇಳಿದರು.
ತಾಲೂಕಿನ ದೇವರಗುಡ್ಡ ಗ್ರಾಮದಲ್ಲಿ ಕ್ಲಸ್ಟರ್ ಮಟ್ಟದ ಗುರು ಬಳಗದ ವತಿಯಿಂದ ಬುಧವಾರ ಏರ್ಪಡಿಸಿದ್ದ ಶಿಕ್ಷಕರಿಗೆ ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಇಂದಿನ ಆಧುನಿಕ ತಂತ್ರಜ್ಞಾನ ಯುಗದಲ್ಲಿ ಶಿಕ್ಷಣವನ್ನು ಮಕ್ಕಳಿಗೆ ಮನಮುಟ್ಟುವ ರೀತಿಯಲ್ಲಿ ಭೋದಿಸುವ ಶಿಕ್ಷಕರಿಗೆ ಸವಾಲಾಗಿ ಪರಿಣಿಮಿಸಿದೆ. ಈ ನಿಟ್ಟಿನಲ್ಲಿ ಶಿಕ್ಷಕರು ಮಕ್ಕಳು ಶಾಲೆಯ ಕಡೆ ಆಕರ್ಷಿತರಾಗುವಂತೆ ಕ್ರಮ ಕೈಗೊಳ್ಳಬೇಕು ಎಂದರು.
ತಾಲೂಕ ದೈಹಿಕ ಶಿಕ್ಷಣ ಅಧಿಕಾರಿ ಹನುಮಂತಪ್ಪ ಬಿ.ಎಚ್. ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದ ವೃತ್ತಿಯಾಗಿದೆ. ಶಿಕ್ಷಕರಿಗೆ ತಮ್ಮ ವೃತ್ತಿಯಲ್ಲಿ ಹೇಗೆ ಕರ್ತವ್ಯನ್ನು ನಿರ್ವಹಿಸಿ ಮಕ್ಕಳ ಮನಸ್ಸಿನಲ್ಲಿ ನೆಲೆಯೂರ ಬೇಕು ಎಂಬುದರ ಬಗ್ಗೆ ಚಿಂತನೆ ನಡೆಸುವುದು ಅಗತ್ಯವಿದೆ ಎಂದರು.
ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹೇಮಂತ ಕೊರ್ಚರ, ತಾಲೂಕ ನೌಕರ ಸಂಘದ ಅಧ್ಯಕ್ಷ ಎಂ.ಡಿ. ದ್ಯಾಮಣ್ಣನವರ, ಪ್ರಮುಖರಾದ ಮಾಲತೇಶ ಬಡಿಗೇರ, ವಿ.ಎಚ್. ಕೆಂಚರಡ್ಡಿ, ಆರ್.ಎಂ. ಗುಂಜಾಳದ, ಎಂ.ಸಿ. ಬಲ್ಲೂರ, ಕುಮಾರ ಜೋಗಾರ, ಶಂಭಪ್ಪ ಮಾಲದಾರ, ಜಿ.ಎಲ್. ಪದಕಿ, ಸುನಂದ ಕ್ಷೀರಸಾಗರ, ಎಂ.ಎಲ್. ಪದಕಿ, ಬಸವರಾಜ ಕುಸುನೂರ ಮತ್ತಿತರರು ಉಪಸ್ಥಿತರಿದ್ದರು.