ಗುರು ಕರುಣ

1-6852f9eada364
Published on
ನಿಜಗುಣ ಶಿವಯೋಗಿಗಳು ತಮ್ಮ ಪದ್ಯದಲ್ಲಿ ಹೀಗೆ ತಿಳಿಸಿದ್ದಾರೆ: ‘ಧರೆಯನೆಲ್ಲವ ಕುಟ್ಟಿ ದೂಳಿಯಂ ಮಾಡಿ, ತೂರಲಾ ಕಣಗಳು ಎನಿತ ಓಲ್ ಅನಿತು ಜನ್ಮಂಗಳಲಿ ಬಂದೆ’ ಅಂದರೆ ಭೂಮಿಯನ್ನು ಕುಟ್ಟಿ ಪುಡಿ ಮಾಡಿ ತೂರಿದರೆ ಎಷ್ಟು ಕಣಗಳು ಆಗುವವೊ, ಅಷ್ಟು ಜನ್ಮವನ್ನು ತಾಳಿ ಮನುಷ್ಯ ಜನ್ಮಕ್ಕೆ ಬಂದಿದ್ದೇವೆ.

ಇದೇ ಮಾತನ್ನು ಅಕ್ಕ ಮಹಾದೇವಿ, ‘ಒಂದಲ್ಲಾ ಎರಡಲ್ಲಾ ಮೂರಲ್ಲಾ ಎಂಬತ್ತನಾಲ್ಕು ಲಕ್ಷ ಜೀವರಾಶಿಗಳಲ್ಲಿ ಬಂದೆ....’ ಎಂದಿರುವಳು. ಅದಕ್ಕಾಗಿಯೇ ‘ಮನುಷ್ಯ ಜನ್ಮವನ್ನು ಹಾಳು ಮಾಡಿಕೊಳ್ಳ ಬೇಡಿರೋ ಹುಚ್ಚಪ್ಪಗಳಿರಾ’ ಎಂದು ದಾಸರೂ ಹೇಳಿದ್ದಾರೆ. ಈ ಮಾನವ ಜನ್ಮಸಾರ್ಥಕವಾಗಬೇಕಾದರೆ ಮೊದಲು ಗುರುವನ್ನು ಆಶ್ರಯಿಸಬೇಕು. ಬಸವಣ್ಣನವರೂ ಸಹ ‘ಶಿವಪಥವನರಿವಡೆ ಗುರುಪಥವೆ ಮೊದಲು’ ಎಂದರು.

ತೆಲುಗು ಜೊಮ್ಮಯ್ಯನೆಂಬ ಶರಣರು ತಮ್ಮ ವಚನದಲ್ಲಿ ಹೀಗೆ ತಿಳಿಸಿದ್ದಾರೆ... ಗುರುಕರುಣ ಪಡೆದುದಕ್ಕೆ ಚಿನ್ಹವಾವುದೆಂದರೆ/ಅಂಗದ ಮೇಲೆ ಲಿಂಗ ಸ್ವಾಯತವಾಗಿರಬೇಕು/ಅಂಗದ ಮೇಲೆ ಲಿಂಗ ಸ್ವಾಯತವಿಲ್ಲದೇ ಬರಿದೆ/ಗುರು ಕರುಣವಾಯಿತೆಂದೊಡೆ, ಅದೆಂತೋ/ ಲಿಂಗವಿಹೀನ ವಾಗಿ ಗುರುಕರುಣ ಉಂಟೆ?... ಇಂದಿನ ದಿನಗಳಲ್ಲಿ ಸಂತೆಯಲ್ಲಿ ಲಿಂಗವನ್ನು ತಂದು ಕಟ್ಟಿಕೊಂಡು ನಾವು ಗುರುದೀಕ್ಷೆ ಪಡೆದಿದ್ದೇವೆ. ಎಂಬುವ ಜನಗಳೆ ಹೆಚ್ಚು. ಗುರುಕರುಣ ಪಡೆದುದಕ್ಕೆ ಚಿಹ್ನೆಯೆಂದರೆ ಗುರುವಿನ ಹಸ್ತದಿಂದ ಲಿಂಗಧಾರಣೆಯಾಗಬೇಕು.

ಅಂಗದ ಮೇಲೆ ಗುರುಹಸ್ತ ದಿಂದ ಬಂದ ಲಿಂಗವಿಲ್ಲದೆ ಗುರುಕರುಣ ಹೇಗೆ ಸಾಧ್ಯ? ಲಿಂಗವನ್ನು ಧರಿಸಿ ಕೊಂಡಾತನೇ ಸದಾಚಾರಿ. ಅದಿಲ್ಲದಿದ್ದರೆ ಅನಾಚಾರಿ ಎನ್ನುತ್ತಾರೆ ತೆಲುಗು ಜೊಮ್ಮಯ್ಯ ಶಿವಶರಣರು. ಗುರು ಕೃಪೆಯ ವಿಚಾರವಾಗಿ ಕಡಕೋಳದ ಮಡಿವಾಳಪ್ಪನವರು, ‘ಯಾವ ಮನುಷ್ಯನಿಗೆ ಗುರುಕರುಣೆ ಇರುವುದಿಲ್ಲವೋ, ಅವನ ಸ್ನೇಹ ಸಾವುತನಕ ಬೇಡ, ಸಾಧು-ಸತ್ಪುರುಷರ ಸೇವಾ ಮಾಡಿ ಅವರಸಂಗದಲ್ಲಿ ಇರುವುದು ಬಹುಪಾಡ’ ಎಂದಿರುವರು.

ಹೀನ ಮಾನವರ ಸಂಗವ ಮಾಡಿ ನೀನು ಕೆಡಬೇಡಾ. ಮನುಷ್ಯ ಜನ್ಮಕ್ಕೆ ಬಂದಿದ್ದೇವೆಯೆಂದರೆ ಇದರ ಸಾರ್ಥಕತೆ ಆಗಬೇಕಾದರೆ ಗುರುಗಳ ಕರುಣೆಯನ್ನು ಪಡೆದು, ಅವರ ಸಂಗದಲ್ಲಿದ್ದು, ಒಳ್ಳೆಯ ನಡೆ-ನುಡಿ ಯಂತೆ ಸಾಗಿ ಜನ್ಮವನ್ನು ಸಾರ್ಥಕ ಮಾಡಿಕೊಂಡು ಬಾಳಿ ಬದುಕಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net