

ಮುಂಡರಗಿ: ಸ್ವಾಮಿತ್ವವೆಂದರೆ ಪರಿಶ್ರಮ, ತ್ಯಾಗ. ಸ್ವಾಮಿಗಳು ಸಮಾಜದೊಳಗಡೆ ಸೇವಕನಾಗಬೇಕು. ಶಿಷ್ಯನು ಬಹಳ ಎಚ್ಚರದಿಂದ ಗುರುವನ್ನು ಸ್ವೀಕರಿಸಬೇಕು. ಒಳ್ಳೆಯ ಗುರುವಿನಿಂದ ಜ್ಞಾನ ಬೋಧನೆ ಪಡೆದು, ದೀಕ್ಷೆ ಪಡೆದುಕೊಂಡು ಅರಿವಿನ ಪ್ರಜ್ಞೆ ಜಾಗೃತಿಸಿಕೊಳ್ಳಬೇಕು ಎಂದು ಶ್ರೀನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಹೇಳಿದರು.
ಪಟ್ಟಣದ ಜಗದ್ಗುರು ತೋಂಟದಾರ್ಯ ಶಾಖಾಮಠದಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವಧರ್ಮ ಪ್ರವಚನದಲ್ಲಿ ಮಾತನಾಡಿದ ಅವರು, ‘ಶಿಷ್ಯನಿಗೆ ಅಂತರಂಗದ ಭವ ಬಂಧನವ ಕಳೆದು ಸ್ಪಷ್ಟ ನಿಲುವಿನ ಕಡೆಗೆ ತೆಗೆದುಕೊಂಡು ಹೋಗುವ ಗುರು ಬೇಕಾಗುತ್ತದೆ. ದೇಶದಲ್ಲಿ ಸಮಾಜವನ್ನು ತಿದ್ದಬೇಕಾದ ಗುರುಗಳು ಒಳ್ಳೆಯ ನೀತಿ ಪಾಠವನ್ನು ಹೇಳಬೇಕು. ಶಿಷ್ಯನು ಗುರುವಿನ ಉಪದೇಶ ಪಾಲಿಸಿ ಜೀವಿಸಬೇಕು’ ಎಂದರು.
ಗುರುವನ್ನು ಆಯ್ಕೆ ಮಾಡುವ ಶಕ್ತಿ ಶಿಷ್ಯನಿಗೆ ಇರಬೇಕು. ಹಣ, ಸಂಪತ್ತು ಗಳಿಸಬಹುದು. ಆದರೆ, ಒಳ್ಳೆಯ ಗುರುವನ್ನು ಗಳಿಸುವುದು ಕಷ್ಟ. ಆತ್ಮಜ್ಞಾನವನ್ನು ಎಚ್ಚರಿಸುವ ಶಕ್ತಿ ಗುರುವಿಗಿದೆ. ಗುರು ಹೇಳಿದ ಉತ್ತಮ ವಿಚಾರಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಮನುಷ್ಯನಿಗೆ ಭಕ್ತಿ ಎನ್ನುವುದು ಗಟ್ಟಿತನದಲ್ಲಿರಬೇಕು. ಮೂಢನಂಬಿಕೆ, ಹೇರಲ್ಪಟ್ಟ ನಂಬಿಕೆ ಇರಬಾರದು. ಗುರುವಿನಿಂದ ಒಳ್ಳೆಯ ದಾರಿಯಲ್ಲಿ ಹೋಗುವುದಕ್ಕೆ ಮಾತ್ರ ನಂಬಿಕೆಯನ್ನು ತೆಗೆದುಕೊಳ್ಳಬೇಕು. ಭಾರತ ಸಂಸ್ಕೃತಿಯೊಳಗಡೆ ಅನೇಕ ರೀತಿಯ ಮೂಢನಂಬಿಕೆಗಳಿವೆ. ಮೂಢನಂಬಿಕೆಯನ್ನು ತಿರಸ್ಕರಿಸಬೇಕು. ನಂಬಿಕೆಯು ಮನುಷ್ಯನ ಆಧ್ಯಾತ್ಮದ ಉನ್ನತ ಸ್ಥಿತಿಗೆ ತೆಗೆದುಕೊಂಡು ಹೋಗುವ ಶಕ್ತಿಯಾಗಿದೆ ಎಂದರು.