

ಗುಂಡ್ಲುಪೇಟೆ: ತಾಲೂಕಿನ ತ್ರಿಯಂಭಕಪುರ ಗ್ರಾಮದಲ್ಲಿ ಹುಲಿ ದಾಳಿ ನಡೆಸಿ ಹಸುವನ್ನು ಕೊಂದು ಹಾಕಿದೆ.
ಬಂಡೀಪುರ ಹುಲಿ ಯೋಜನೆಯ ಬಫರ್ ವಲಯದ ಕಾಡಂಚಿನ ಗ್ರಾಮವಾದ ತ್ರಿಯಂಭಕಪುರ ನಿವಾಸಿ ರಾಜಪ್ಪ ಅವರು ಬುಧವಾರ ಸಂಜೆ ಜಮೀನಿನಿಂದ ತಮ್ಮ ಜಾನುವಾರುಗಳೊಂದಿಗೆ ಮನೆಗೆ ಹಿಂದಿರುಗುವಾಗ ಹುಲಿ ದಾಳಿ ನಡೆಸಿ ಕೆಲವೇ ದಿನಗಳಲ್ಲಿ ಕರು ಹಾಕಲಿದ್ದ ಹಸುವನ್ನು ಎಳೆದೊಯ್ದಿದೆ. ಗುರುವಾರ ಮುಂಜಾನೆ ಗ್ರಾಮಸ್ಥರು ಹುಡುಕಾಟ ನಡೆಸಿದಾಗ ಪೊದೆಗಳ ನಡುವೆ ಹಸುವಿನ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಮಹಜರು ನಡೆಸಿದರು. ಶೀಘ್ರವೇ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು. ಹುಲಿ ಕಾಡಿಗಟ್ಟಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಈ ಹಿಂದೆ ಈ ಭಾಗದಲ್ಲಿ ಬೋನು ಅಳವಡಿಸಿದ್ದರೂ ಹುಲಿ ಸೆರೆಯಾಗಿಲ್ಲ. ಕಳೆದ ವಾರ ನಾಪತ್ತೆಯಾಗಿದ್ದ ಹುಲಿ ಮತ್ತೆ ಹಿಂದಿರುಗಿದೆ. ಜಾನುವಾರು ಮಾಲೀಕರಿಗೆ ಪರಿಹಾರ ನೀಡಲಾಗುವುದು.ಮಂಜುನಾಥ್,ಪ್ರಭಾರ ಆರ್‌ಎಫ್‌ಒ