ಅರಣ್ಯದಲ್ಲಿ ಗೊಬ್ಬರದ ಗಿಡ ತೆರವು ಕಾರ್ಯಾಚರಣೆ

01-GPT-2
Published on

ಗುಂಡ್ಲುಪೇಟೆ: ಬಂಡೀಪುರಕ್ಕೆ ಹೊಂದಿಕೊಂಡಿರುವ ವೈನಾಡಿನ ಅರಣ್ಯದಲ್ಲಿ ಹುಲ್ಲುಗರಿಕೆಗಳು ಬೆಳೆಯದಂತೆ ವ್ಯಾಪಕವಾಗಿ ಆವರಿಸಿರುವ ಗೊಬ್ಬರದ ಗಿಡಗಳನ್ನು (ಗ್ಲೈರಿಸಿಡಿಯಾ) ಅರಣ್ಯ ಇಲಾಖೆ ಬೇರು ಸಮೇತ ತೆರವುಗೊಳಿಸುವ ಕಾರ್ಯವನ್ನು ಕೈಗೊಂಡಿದೆ.

ಬಂಡೀಪುರದಲ್ಲಿ ಪ್ರತಿವರ್ಷ ಲಾಂಟಾನಾ ಮುಂತಾದ ಕಳೆಗಳನ್ನು ತೆರವುಗೊಳಿಸುತ್ತಿದೆ. ಬೇಸಿಗೆ ಸಂದರ್ಭದಲ್ಲಿ ಒಣಗುವ ಈ ಕಳೆಗಳಿಗೆ ಆಕಸ್ಮಿಕ ಬೆಂಕಿಬಿದ್ದರೆ ಇಡೀ ಅರಣ್ಯವೇ ಭಸ್ಮವಾಗುವ ಅಪಾಯವಿದೆ. ಆದ್ದರಿಂದ ಇವುಗಳ ತೆರವಿಗೆ ಅರಣ್ಯ ಇಲಾಖೆ ಪ್ರತಿವರ್ಷ ಕೋಟ್ಯಂತರ ರೂ. ವೆಚ್ಚ ಮಾಡುತ್ತಿದೆ. ಆದರೂ ಅವು ಮಳೆಗಾಲದಲ್ಲಿ ಮತ್ತೆ ಚಿಗುರಿ ಇಡೀ ಅರಣ್ಯ ಪ್ರದೇಶದಲ್ಲಿ ವ್ಯಾಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಕೇರಳ ಅರಣ್ಯ ಇಲಾಖೆ ಗೊಬ್ಬರದ ಗಿಡಗಳ ಮೂಲೋತ್ಪಾಟನೆಗೆ ಮುಂದಾಗಿದೆ.

ವೈನಾಡು ಹುಲಿ ಸಂರಕ್ಷಿತ ಪ್ರದೇಶಕ್ಕೆ ಸೇರಿದ ಮುಥಂಗ ವಲಯದ ಅರಣ್ಯದಲ್ಲಿ ಗೊಬ್ಬರದ ಗಿಡಗಳು ವ್ಯಾಪಿಸಿದ್ದರಿಂದ ಗರಿಕೆ ಹಾಗೂ ಇತರ ಸಸಿಗಳ ಬೆಳವಣಿಗೆಗೆ ಅವಕಾಶವಿಲ್ಲದಂತಾಗಿತ್ತು. ಅಲ್ಲದೆ ಬೇಸಿಗೆ ಸಂದರ್ಭದಲ್ಲಿ ಈ ಗಿಡಗಳು ಬಿಡುವ ಹೂವುಗಳು ಬಿಸಿಲಿಗೆ ಸಿಡಿದು ದೂರಕ್ಕೆ ಹಾರುತ್ತಿವೆ. ಈ ಬೀಜಗಳು ಮಳೆಗಾಲದಲ್ಲಿ ಚಿಗುರಿ ಸಸಿಗಳು ಬೆಳೆಯುತ್ತಿರುವುದರಿಂದ ಇಡೀ ಅರಣ್ಯ ಪ್ರದೇಶವೇ ಗೊಬ್ಬರದ ಗಿಡಗಳಿಂದ ಆವರಿಸಿ ಸಸ್ಯಾಹಾರಿ ವನ್ಯಜೀವಿಗಳಿಗೆ ಮೇವಿನ ಕೊರತೆಯಾಗಿತ್ತು.

ಈ ಹಿನ್ನೆಲೆಯಲ್ಲಿ ವೈನಾಡು ಹುಲಿ ಯೋಜನೆಯ ಅರಣ್ಯಾಧಿಕಾರಿಗಳು ಗೊಬ್ಬರದ ಗಿಡಗಳನ್ನು ಸಂಪೂರ್ಣ ತೆರವುಗೊಳಿಸಲು ಯೋಜನೆ ಕೈಗೊಂಡಿದ್ದಾರೆ. ಇವುಗಳ ಮೂಲೋತ್ಪಾಟನೆ ಮಾಡಲು ಇತ್ತೀಚೆಗೆ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಗೊಬ್ಬರದ ಗಿಡಗಳ ಸುತ್ತಲೂ ಕಂದಕ ತೋಡಿ ಬೇರು ಕತ್ತರಿಸಿ ತಲೆಕೆಳಗಾಗಿ ಇಡುವ ಮೂಲಕ ಅವು ಮತ್ತೆ ಚಿಗುರದಂತೆ ಮಾಡಲಾಗುತ್ತಿದೆ. ಪ್ರತಿ ದಿನವೂ ನೂರಾರು ಕಾರ್ಮಿಕರು ಗುದ್ದಲಿ, ಕೊಡಲಿ ಹಾಗೂ ಮಚ್ಚುಗಳಿಂದ ಗೊಬ್ಬರ ಗಿಡಗಳ ಸುತ್ತಲೂ ಕಂದಕ ತೋಡಿ ಬೇರು ಕತ್ತರಿಸಿ ಬುಡಸಮೇತ ತೆರವುಮಾಡುತ್ತಿದ್ದಾರೆ.

ಮುಥಂಗಾದಲ್ಲಿ ಕೇರಳದ ಅರಣ್ಯ ಇಲಾಖೆ ಗೊಬ್ಬರದ ಗಿಡಗಳನ್ನು ಬೇರು ಸಮೇತ ತೆರವು ಮಾಡುವ ಮೂಲಕ ಶಾಶ್ವತ ಕಾರ್ಯ ಕೈಗೊಂಡಿದೆ. ಆದರೆ ಬಂಡೀಪುರದ ಅರಣ್ಯ ಇಲಾಖೆಯ ಕಚೇರಿಯ ಬಳಿಯೇ ಕಳೆಗಿಡಗಳು ಬೆಳೆದಿದ್ದರೂ ಇಲ್ಲಿನ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸದ ಪರಿಣಾಮ ವ್ಯಾಪಿಸುತ್ತಿದ್ದು ಅರಣ್ಯಾಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು.ವಿದ್ಯಾಶಂಕರ್, ಪರಿಸರ ಪ್ರೇಮಿ, ಗುಂಡ್ಲುಪೇಟೆ ಗೊಬ್ಬರದ ಗಿಡಗಳು ಮುಥಂಗಾ ವಲಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆದು ಹುಲ್ಲುಗರಿಕೆ ಹಾಗೂ ಬೇರೆ ಸಸ್ಯಗಳ ಬೆಳವಣಿಗೆಗೆ ಅಡ್ಡಿಯಾಗಿದ್ದರಿಂದ ಇವುಗಳನ್ನು ಬೇರುಸಹಿತ ತೆರವುಗೊಳಿಸಲಾಗುತ್ತಿದೆ.ಸುನಿಲ್, ಮುಥಂಗಾ ವಲಯದ ಆರ್‌ಎಫ್‌ಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net